ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ಮುಂಡರಗಿ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 21:45 IST
Last Updated 24 ಫೆಬ್ರುವರಿ 2022, 21:45 IST
ಮಹಾಗಣಪತಿ ಬಿಳಿಮಗ್ಗದ
ಮಹಾಗಣಪತಿ ಬಿಳಿಮಗ್ಗದ   

ಮುಂಡರಗಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಂಡಿದ್ದು, ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಎಂಬ ವಿದ್ಯಾರ್ಥಿ ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ.

ಮಹಾಗಣಪತಿಯು ಉಕ್ರೇನ್ ದೇಶದ ಚೆರ್ನಿವೀಸಿ ನಗರದ ಬೊಕೊವಿನಿಯನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದಾರೆ.

ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವುದರಿಂದ ಉಕ್ರೇನ್ ರಾಜಧಾನಿ ಸೇರಿದಂತೆ ಉಕ್ರೇನ್ ದೇಶದ ಬಹುತೇಕ ವಿಮಾನ ನಿಲ್ದಾಣಗಳನ್ನು ರಷ್ಯಾ ವಶಕ್ಕೆ ಪಡೆದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈಗ ಅಲ್ಲಿ ಸಿಲುಕಿಕೊಂಡಿರುವ ನೂರಾರು ವಿದ್ಯಾರ್ಥಿಗಳು ಭಾರತಕ್ಕೆ ಬರವುದು ಅಸಾಧ್ಯವಾಗಿದೆ. ಮಹಾಗಣಪತಿ ಹಾಗೂ ಅವರ ಸ್ನೇಹಿತರು ಸ್ವದೇಶಕ್ಕೆ ಬರಲು ಫೆ.17ರಂದು ವಿಮಾನ ಟಿಕೆಟ್ ಕಾಯ್ದಿರಿಸಿದ್ದರು. ನಿಗದಿಯಂತೆ ಅವರು ಮಾ.1ರಂದು ಉಕ್ರೇನ್‍ನಿಂದ ಭಾರತಕ್ಕೆ ಬರಬೇಕಿತ್ತು.

ADVERTISEMENT

ಆದರೆ, ಈಗ ಯುದ್ಧ ಆರಂಭ ಆಗಿದ್ದರಿಂದ ಪಾಲಕರಲ್ಲಿ ಆತಂಕ ಉಂಟಾಗಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಪ್ರಾರಂಭವಾಗಿದೆ. ಮಹಾಗಣಪತಿ ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯವು ಎರಡೂ ದೇಶಗಳ ಗಡಿಯಿಂದ ಸುಮಾರು 800 ಕಿ.ಮೀ. ದೂರದಲ್ಲಿದೆ. ಹೀಗಾಗಿ ಅವರು ಸದ್ಯ ಸುರಕ್ಷಿತವಾಗಿದ್ದಾರೆ ಎಂದು ಅವರ ತಂದೆ ಕಾಶಿನಾಥ ತಿಳಿಸಿದ್ದಾರೆ.

ಮಹಾಗಣಪತಿಯ ಪಾಲಕರು ಈಗಾಗಲೇ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದು, ವಿದ್ಯಾರ್ಥಿಯ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆತರುವ ಭರವಸೆಯನ್ನು ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.