ADVERTISEMENT

ಬೆಳೆ ಸಾಲಮನ್ನಾ; ನೋಂದಣಿಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 7:14 IST
Last Updated 19 ಡಿಸೆಂಬರ್ 2018, 7:14 IST
ಸಾಲಮನ್ನಾ ಯೋಜನೆಯಡಿ ಹೆಸರು ನೋಂದಣಿಗಾಗಿ ರೈತರು ಮಂಗಳವಾರ ಗದುಗಿನ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಎದುರು ಸರತಿ ಸಾಲಿನಲ್ಲಿ ನಿಂತಿರುವುದು
ಸಾಲಮನ್ನಾ ಯೋಜನೆಯಡಿ ಹೆಸರು ನೋಂದಣಿಗಾಗಿ ರೈತರು ಮಂಗಳವಾರ ಗದುಗಿನ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಎದುರು ಸರತಿ ಸಾಲಿನಲ್ಲಿ ನಿಂತಿರುವುದು   

ಗದಗ: ವಾಣಿಜ್ಯ ಬ್ಯಾಂಕುಗಳಿಂದ 2017ರ ಡಿಸೆಂಬರ್‌ 31ಕ್ಕಿಂತ ಮೊದಲು ಬೆಳೆ ಸಾಲ ಪಡೆದ ರೈತರು, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ಸಂಬಂಧಿಸಿದ ಬ್ಯಾಂಕುಗಳಲ್ಲಿ ನೋಂದಣಿಗೆ ಮುಗಿಬಿದಿದ್ದಾರೆ.

ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳ 148 ಶಾಖೆಗಳಲ್ಲಿ ಡಿ.15ರಿಂದ ನೋಂದಣಿ ಕಾರ್ಯ ನಡೆಯುತ್ತಿದೆ. ರೈತರ ನೋಂದಣಿಗಾಗಿಯೇ ವಿಶೇಷ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ರೈತರು ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಅಸಲು ಪ್ರತಿಗಳನ್ನು ಹಾಜರುಪಡಿಸಬೇಕು. ಈ ಎರಡೂ ದಾಖಲೆಗಳ ನಕಲು ಪ್ರತಿಯೊಂದಿಗೆ, ಸಾಲ ಪಡೆದ ಜಮೀನಿನ ಸರ್ವೆ ನಂಬರ್‌ ಮಾಹಿತಿ ನಮೂದಿಸಿ, ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ADVERTISEMENT

ಪ್ಯಾನ್‌ಕಾರ್ಡ್‌, ಉತಾರ ಬೇಕಿಲ್ಲ

‘ಸಾಲಮನ್ನಾಕ್ಕಾಗಿ ರೈತರು ಅರ್ಜಿ ಸಲ್ಲಿಸುವಾಗ ಪಹಣಿ ಪತ್ರಿಕೆ (ಉತಾರ) ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪ್ಯಾನ್‌ಕಾರ್ಡ್‌ ಕೂಡ ಕಡ್ಡಾಯವಲ್ಲ. ಈ ಕುರಿತು ಯಾವುದೇ ಗೊಂದಲ ಬೇಡ. ಆಧಾರ್‌ ಕಾರ್ಡ್‌, ಪಡಿತರ ಚೀಟಿಯ ನಕಲು ಪ್ರತಿ ಮತ್ತು ಜಮೀನಿನ ಸರ್ವೆ ನಂಬರ್‌ ಮಾತ್ರ ನಮೂದಿಸಿದರೆ ಸಾಕು’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪ ಬಿ.ವೈ.ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯಾ ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ. ಉಳಿದ ರೈತರಿಗೆ ಮುಂದಿನ ದಿನ ನಿಗದಿ ಪಡಿಸಿ ಕ್ರಮಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ನೀಡಲಾಗುತ್ತದೆ. ಹೀಗಾಗಿ ನೋಂದಣಿ ಅವಕಾಶ ಕೈತಪ್ಪಿ ಹೋಗುತ್ತದೆ ಎಂದು ರೈತರು ಆತಂಕಗೊಳ್ಳುವ ಅಗತ್ಯ ಬೇಡ ಎಂದು ಅವರು ಹೇಳಿದ್ದಾರೆ.

‘ಸಾಲಮನ್ನಾ ಯೋಜನೆಯಡಿ ರೈತರ ನೋಂದಣಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದೇವೆ. ಸರ್ಕಾರ ನೀಡಿರುವ ತಂತ್ರಾಂಶದಲ್ಲಿ ರೈತರ ದಾಖಲೆ ಪರಿಶೀಲಿಸಿ, ದತ್ತಾಂಶ ದಾಖಲು ಮಾಡುತ್ತಿದ್ದೇವೆ’ ಎಂದು ಗಜೇಂದ್ರಗಡದ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಎಚ್‌.ಎಂ.ನಿಟ್ಟಾಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.