ADVERTISEMENT

ಶಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಭರ್ತಿ

ತುಂಗಭದ್ರಾ ನದಿಗೆ ಹರಿದು ಬಂದ ಭಾರಿ ಪ್ರಮಾಣದ ನೀರು

ಕಾಶಿನಾಥ ಬಿಳಿಮಗ್ಗದ
Published 6 ಜುಲೈ 2024, 6:08 IST
Last Updated 6 ಜುಲೈ 2024, 6:08 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನ ಗೇಟುಗಳಿಂದ ನದಿ ಪಾತ್ರಕ್ಕೆ ಹರಿಯುತ್ತಿರುವ ಅಪಾರ ಪ್ರಮಾಣದ ನೀರು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನ ಗೇಟುಗಳಿಂದ ನದಿ ಪಾತ್ರಕ್ಕೆ ಹರಿಯುತ್ತಿರುವ ಅಪಾರ ಪ್ರಮಾಣದ ನೀರು   


ಮುಂಡರಗಿ: ಮಲೆನಾಡು ಹಾಗೂ ಶಿವಮೊಗ್ಗ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ತುಂಗಾ ನದಿ ಸೇರಿದಂತೆ ಮಲೆನಾಡು ಭಾಗದ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ.

ಇದರಿಂದಾಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಭರ್ತಿಯಾಗಿದ್ದು, ನಿತ್ಯ ಅಪಾರ ಪ್ರಮಾಣದ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದ್ದೆ.

ಹಮ್ಮಿಗಿ ಬ್ಯಾರೇಜಿಗೆ ಜುಲೈ 1ರಂದು 7,416 ಕ್ಯುಸ್ಯೆಕ್, 2ರಂದು 6,709ಕ್ಯುಸೆಕ್, ಜುಲೈ 3ರಂದು 12,360 ಕ್ಯುಸೆಕ್, ಜುಲೈ 4ರಂದು 11,477ಕ್ಯುಸೆಕ್ ಹಾಗೂ ಜುಲೈ 5ರಂದು 19,757ಕ್ಯುಸೆಕ್ ಹೊಸ ನೀರು ಹರಿದು ಬಂದಿದೆ. ಬ್ಯಾರೇಜಿನ ಎಂಟು ಗೇಟುಗಳ ಮೂಲಕ ನಿತ್ಯ ಅಷ್ಟೆ ಪ್ರಮಾಣದ ನೀರನ್ನು ಬ್ಯಾರೇಜ್ ಕೆಳಗಿನ ನದಿಪಾತ್ರಕ್ಕೆ ಹರಿಸಲಾಗುತ್ತಿದೆ.

ADVERTISEMENT

ಮೇ ತಿಂಗಳ ಕೊನೆಯ ಭಾಗದಲ್ಲಿ ಬ್ಯಾರೇಜು ಸಂಪೂರ್ಣವಾಗಿ ಖಾಲಿಯಾಗಿತ್ತು. ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಹರಸಾಹಸ ಪಟ್ಟಿತ್ತು. ಕೊನೆಯ ಅಸ್ತ್ರವಾಗಿ 10ಅಶ್ವಶಕ್ತಿಯ ತಲಾ 13 ಪಂಪ್ ಸೆಟ್ಟುಗಳನ್ನು ಬಳಸಿ ಬ್ಯಾರೇಜಿನ ಡೆಡ್ ಸ್ಟೋರೇಜ್ ನೀರನ್ನು ಕಾಲುವೆಗೆ ಹರಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗಿತ್ತು.

ಸದ್ಯ ತುಂಗಭದ್ರಾ ನದಿ ಮೂಲಕ ಹಮ್ಮಿಗಿ ಬ್ಯಾರೇಜಿಗೆ ನಿತ್ಯ ಅಪಾರ ಪ್ರಮಾಣದ ಹೊಸ ನೀರು ಬ್ಯಾರೇಜಿಗೆ ಹರಿದುಬರುತ್ತಲಿದ್ದು, ತಾಲ್ಲೂಕು ಹಾಗೂ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿದೆ. ಹಮ್ಮಿಗಿ ಬ್ಯಾರೇಜಿನಲ್ಲಿ ಸದ್ಯ ಗರಿಷ್ಠ (1.9.ಟಿ.ಎಂ.ಸಿ.) ಪ್ರಮಾಣದ ನೀರು ಸಂಗ್ರಹವಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಬ್ಯಾರೇಜಿನಿಂದ ನಿತ್ಯ ಅಪಾರ ಪ್ರಮಾಣದ ಹೊಸನೀರು ತುಂಗಭದ್ರಾ ನದಿಪಾತ್ರವನ್ನು ಸೇರುತ್ತಿದ್ದು, ಹಲವು ತಿಂಗಳಿನಿಂದ ನೀರಿಲ್ಲದೆ ಸಂಪೂರ್ಣವಾಗಿ ಬರಿದಾಗಿದ್ದ ನದಿಯಲ್ಲಿ ಈಗ ಸಾಕಷ್ಟು ನೀರು ಹರಿಯುತ್ತಲಿದೆ. ಇದರಿಂದಾಗಿ ತುಂಗಭದ್ರಾ ನದಿ ದಂಡೆಯ ಮೇಲಿರುವ ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ಮೊದಲಾದ ಗ್ರಾಮಗಳ ಮುಂದೆ ತುಂಗಭದ್ರೆಯು ಮೈದುಂಬಿ ಹರಿಯುತ್ತಿದ್ದಾಳೆ. ನದಿಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಗ್ರಾಮಸ್ಥರು ಸಂತಸಪಡುತ್ತಿದ್ದಾರೆ.

ನದಿ ದಂಡೆಯ ಗ್ರಾಮಗಳ ರೈತರು ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟರೆ ಅಥವಾ ಸಕಾಲದಲ್ಲಿ ಸಾಕಷ್ಟು ಮಳೆ ಸುರಿಯದಿದ್ದರೆ ತುಂಗಭದ್ರಾ ನದಿ ನೀರನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆಯುತ್ತಾರೆ. ನದಿಯಲ್ಲಿ ಈಗ ಸಾಕಷ್ಟು ನೀರು ಹರಿಯುತ್ತಿರುವುದರಿಂದ ರೈತರಿಗೆ ಆನೆಬಲ ಬಂದಂತಾಗಿದೆ. ಮಳೆ ಕೈಕೊಟ್ಟರೂ ತುಂಗಭದ್ರೆ ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ನದಿ ದಂಡೆಯ ಗ್ರಾಮಗಳ ರೈತರಿಗಿದೆ.

‘ಮುಳುಗಡೆ ಗ್ರಾಮಗಳನ್ನು ಈವರೆಗೂ ಸೂಕ್ತವಾಗಿ ಸ್ಥಳಾಂತರಿಸದೆ ಇರುವುದರಿಂದ ಪ್ರತೀ ವರ್ಷ ನಮ್ಮ ಪಾಲಿನ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಯಲ್ಲಿ ಹರಿದು ಹೋಗುತ್ತಲಿದೆ. ಬ್ಯಾರೇಜಿನಲ್ಲಿ 3 ಟಿ.ಎಂ.ಸಿ. ಸಂಗ್ರಹವಾದರೆ ವರ್ಷಪೂರ್ತಿ ಜಿಲ್ಲೆಯ ಜನತೆಗೆ ಕುಡಿಯುವ ನೀರು ಪೂರೈಸುವುದರ ಜೊತೆಗೆ ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಈ ಕಾರಣದಿಂದ ತಾಲ್ಲೂಕಿನ ರೈತರು ಮುಳುಗಡೆ ಗ್ರಾಮಗಳನ್ನು ಬೇಗನೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮುಂದಿನ ಮಳೆಗಾಲದಲ್ಲಿ ಗ್ರಾಮಳನ್ನು ಸಂಪೂರ್ಣವಾಗಿ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ರೈತರು ಎಚ್ಚರಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರು

ಗ್ರಾಮ ಸ್ಥಳಾಂತರಕ್ಕೆ ಆಗ್ರಹ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಗರಿಷ್ಠ 3 ಟಿ.ಎಂ.ಸಿ.ನೀರನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಬ್ಯಾರೇಜಿನಲ್ಲಿ ಅಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿದರೆ, ಹಿನ್ನೀರಿನಲ್ಲಿ ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳು ಮುಳುಗಡೆಯಾಗುತ್ತವೆ. ಹೀಗಾಗಿ ಪ್ರತೀ ವರ್ಷ ಬ್ಯಾರೇಜಿನಲ್ಲಿ ಕೇವಲ 1.9ಟಿ.ಎಂ.ಸಿ. ನೀರನ್ನು ಮಾತ್ರ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಲೆನಾಡು ಹಾಗೂ ಶಿವಮೊಗ್ಗ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮುಂಬರುವ ದಿನಗಳಲ್ಲಿ ತುಂಗಭದ್ರಾ ನದಿಗೆ ಇನ್ನೂ ಸಾಕಷ್ಟು ಪ್ರಮಾಣದ ನೀರು ಹರಿದುಬರಲಿದೆ.

– ಹುಚ್ಚೇಶ ಬಂಡಿವಡ್ಡರ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿರಿಯ ಅಧಿಕಾರಿ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.