ADVERTISEMENT

ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ: ಗದಗ ವೈದ್ಯಕೀಯ ಕಾಲೇಜಿಗೆ ₹3 ಲಕ್ಷ ದಂಡ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 11 ಜುಲೈ 2024, 4:23 IST
Last Updated 11 ಜುಲೈ 2024, 4:23 IST
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   

ಗದಗ: ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ ಕಾರಣಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ₹3 ಲಕ್ಷ ದಂಡ ವಿಧಿಸಿದೆ.

ಎನ್‌ಎಂಸಿ ನಿಯಮಾವಳಿ ಪ್ರಕಾರ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಏನೇನು ಸೌಲಭ್ಯಗಳಿವೆ? ಯಾವುದು ಇಲ್ಲ? ಎಂಬುದರ ಕುರಿತು ರಾಷ್ಟ್ರೀಯ ವೈದ್ಯಕೀಯ ಆಯೋಗವು 2024ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಆನ್‌ಲೈನ್‌ ಮೂಲಕವೇ ಪರಿಶೀಲನೆ ನಡೆಸಿತ್ತು.

‘ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯ ಸಮರ್ಪಕ ದಾಖಲೆ ನಿರ್ವಹಣೆ, ಕಟ್ಟಡ ವ್ಯವಸ್ಥೆ, ಗುಣಮಟ್ಟದ ಪ್ರಯೋಗಾಲಯ ಮತ್ತು ವೈದ್ಯಕೀಯ ಉಪಕರಣಗಳ ಲಭ್ಯತೆ ಸೇರಿದಂತೆ ಮೂಲಸೌಕರ್ಯಗಳಲ್ಲಿ ಜಿಮ್ಸ್‌ಗೆ ಉತ್ತಮ ಅಂಕಗಳು ಬಂದಿದ್ದವು. ಆದರೆ, ಸೀನಿಯರ್‌ ರೆಸಿಡೆಂಟ್‌ಗಳು ಇಲ್ಲದ ಕಾರಣಕ್ಕೆ ಈ ಬಾರಿ ದಂಡ ಬಿದ್ದಿದೆ’ ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಹೊಸದಾಗಿ ಎಂಡಿ, ಎಂಎಸ್‌ ಮುಗಿಸಿದವರು ಕಡ್ಡಾಯವಾಗಿ ಒಂದು ವರ್ಷಗಳ ಕಾಲ ಗ್ರಾಮೀಣ ಸೇವೆ ಮಾಡುವುದಾಗಿ ಸರ್ಕಾರಕ್ಕೆ ಬಾಂಡ್‌ ಮಾಡಿ ಕೊಟ್ಟಿದ್ದರು. ಆದರೆ, ಈ ನಿಯಮ ಈ ವರ್ಷ ಮುಂದುವರಿಯುತ್ತದೆಯೋ, ಇಲ್ಲವೋ ಎಂಬ ಗೊಂದಲ ಉಂಟಾಯಿತು. ಈ ಕಾರಣದಿಂದಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದಲೇ ಸೀನಿಯರ್‌ ರೆಸಿಡೆಂಟ್‌ಗಳ ನಿಯೋಜನೆ ಆಗಿಲ್ಲ’ ಎಂದು ಅವರು ತಿಳಿಸಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರತಿ ವರ್ಷ 150 ವಿದ್ಯಾರ್ಥಿಗಳ ದಾಖಲಾತಿ ಆಗುತ್ತದೆ. ಅದೇರೀತಿ, 20 ಸ್ನಾತಕೋತ್ತರ ವಿಭಾಗಗಳಿಗೆ ಪ್ರತಿ ವರ್ಷ 54 ಮಂದಿ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಇದೆ. ಗದಗ ವೈದ್ಯಕೀಯ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳಿದ್ದರೂ, ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ ಕಾರಣಕ್ಕೆ ದಂಡ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಎನ್‌ಎಂಸಿ ನಿಯಮಾವಳಿ ಪ್ರಕಾರ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಲ್ಲ ಮೂಲಸೌಕರ್ಯಗಳಿವೆ. ಆದರೆ ಈ ಬಾರಿ 20ರಿಂದ 25 ಮಂದಿ ಸೀನಿಯರ್‌ ರೆಸಿಡೆಂಟ್‌ಗಳ ಕೊರತೆ ಕಾರಣದಿಂದ ದಂಡ ಬಿದ್ದಿದೆ. ದಂಡದ ಕನಿಷ್ಠ ಮೊತ್ತ ₹3 ಲಕ್ಷ; ಗರಿಷ್ಠ ₹15 ಲಕ್ಷ ಇದೆ
ಡಾ. ಬಸವರಾಜ ಬೊಮ್ಮನಹಳ್ಳಿ ಜಿಮ್ಸ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.