ADVERTISEMENT

ಸಿದ್ಧೇಶ್ವರ ಶ್ರೀಗಳದ್ದು ಮೇರು ವ್ಯಕ್ತಿತ್ವ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:47 IST
Last Updated 30 ಜನವರಿ 2023, 4:47 IST
ಗದಗ ನಗರದ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ಭಾನುವಾರ ನುಡಿ ನಮನ ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜಕಾರಣಿಗಳು ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಗದಗ ನಗರದ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ಭಾನುವಾರ ನುಡಿ ನಮನ ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜಕಾರಣಿಗಳು ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಗದಗ: ‘ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಇಷ್ಟು ಕ್ಷಮಿಸಬಲ್ಲನೇ? ಸಿದ್ಧೇಶ್ವರ ಶ್ರೀಗಳನ್ನು ಹತ್ತಿರದಿಂದ ನೋಡಿರುವ ನನಗೆ, ಅವರನ್ನು ನೆನೆದಾಗಲೆಲ್ಲವೂ ಮೂಡುವ ಪ್ರಶ್ನೆ ಇದು. ಶ್ರೀಗಳ ಕ್ಷಮಾಗುಣ, ತಾಳ್ಮೆ ಬಹಳ ದೊಡ್ಡದು. ಅಳತೆಗೆ ಮೀರಿದ ವ್ಯಕ್ತಿತ್ವ ಅವರದ್ದು’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ಭಾನುವಾರ ನಡೆದ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಏನನ್ನೂ ಬಯಸದೇ ಎಲ್ಲವನ್ನೂ ಪಡೆದುಕೊಂಡ, ಚೌಕಟ್ಟಿನಲ್ಲಿದ್ದು ಪ್ರತಿಚೌಕಟ್ಟನ್ನೂ ಮೀರಿದ ಸಿದ್ಧೇಶ್ವರ ಶ್ರೀಗಳ ಜತೆಗೆ ನನಗೆ ಸ್ನೇಹದ ಸಲುಗೆ ಇತ್ತು. ಭಾಷೆ, ಜಾತಿ, ಪಂಥ ಮೀರುವುದು ಕಷ್ಟಸಾಧ್ಯ. ಆದರೆ, ಸಿದ್ಧೇಶ್ವರ ಶ್ರೀಗಳಿಗೆ ಮೀರುವುದು, ಅತೀತರಾಗುವುದು ಲೀಲಾಜಾಲವಾಗಿತ್ತು. ಅದು ಅವರ ಹುಟ್ಟುಗುಣವಾಗಿತ್ತು. ಜಗತ್ತನ್ನು ಪ್ರೀತಿಸಬೇಕು ಎಂದು ನೂರು ಬಾರಿ ಹೇಳುತ್ತಿದ್ದರು. ಆದರೆ, ಅವರು ಏನನ್ನೂ ಇಷ್ಟಪಡಲಿಲ್ಲ. ಇದೊಂದು ಒಗಟು. ಅವರ ಅಸ್ತಿತ್ವದಲ್ಲೇ ಸಮೃದ್ಧಿಯನ್ನು ಕಾಣುತ್ತಿದ್ದರು’ ಎಂದರು.

ADVERTISEMENT

‘ಈಶಾವಾಸ್ಯ ಉಪನಿಷತ್ತೇ ಶ್ರೇಷ್ಠ ಧರ್ಮ ಅನ್ನುತ್ತಿದ್ದರು. ಅದನ್ನು ಓದಿಗಾಗ ಅಲ್ಲಿನ ಋಷಿಯ ಚಿತ್ರಣ ಇವರನ್ನೇ ಹೋಲುತ್ತಿತ್ತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶ ನಮ್ಮೆಲ್ಲರಿಗೆ ಇತ್ತು. ಅವರಿಗೆ ಇನ್ನಿಲ್ಲದ ರಾಷ್ಟ್ರಪ್ರೇಮ ಇತ್ತು. ಆ ರೀತಿಯ ರಾಷ್ಟ್ರಪ್ರೇಮವನ್ನು ನಾನು ಬೇರೆಯವರಲ್ಲಿ ನೋಡಿದ್ದು ಕಡಿಮೆ. ತಾವು ಒಪ್ಪಿದ ಸಿದ್ಧಾಂತಕ್ಕೆ ಬದ್ಧರಾಗಿರುತ್ತಿದ್ದರು’ ಎಂದು ಹೇಳಿದರು.

ಶಿವಾನಂದ ಬೃಹನ್ಮಠದ ಉತ್ತರಾ ಧಿಕಾರಿ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ‘ಸಿದ್ಧೇಶ್ವರ ಶ್ರೀಗಳಲ್ಲಿ ಒಳಗೆಂಬುದು, ಹೊರಗೆಂಬುದು ಇರಲಿಲ್ಲ. ಅವರ ದಾರಿಯೇ ಭಿನ್ನ. ಆ ರೀತಿಯಲ್ಲಿಯೇ ಬದುಕಿ ಬಯಲಾದರು’ ಎಂದು ಬಣ್ಣಿಸಿದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿ, ‘ಸಿದ್ಧೇಶ್ವರ ಶ್ರೀಗಳು ಸಂತರು ಹೇಗಿರಬೇಕು ಎಂದು ಬದುಕಿ ತೋರಿಸಿಕೊಟ್ಟರು. ಚಿಕ್ಕವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಗುಣ ಹೊಂದಿದ್ದರು. ಅವರ ಪ್ರವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ‘ಉನ್ನತ ಚಿಂತನೆ ಸರಳತೆಗೆ ಮತ್ತೊಂದು ಹೆಸರು ಸಿದ್ಧೇಶ್ವರ ಶ್ರೀಗಳು. ಪ್ರಶಸ್ತಿ ಪುರಸ್ಕಾರಗಳನ್ನು ನಿರಾಕರಿಸಿದರು. ಆಶ್ರಮದ ಅಭಿವೃದ್ಧಿಗೆ ಕೊಟ್ಟ ಹಣವನ್ನೂ ಹಿಂತಿರುಗಿಸಿದರು. ಪ್ರಚಾರಕ್ಕೆ ಅಂಟಿಕೊಂಡವರಲ್ಲ. ನಮನ್ನು ಅಗಲಿದರೂ ಅವರು ಕೊಟ್ಟ ಆದರ್ಶ, ತೋರಿಸದ ಮಾರ್ಗ ನಮ್ಮ ಎದುರಿಗೆ ಇದೆ. ಅದರಂತೆ ನಾವು ನಡೆಯಬೇಕಿದೆ’ ಎಂದು ಹೇಳಿದರು.

ಡಾ. ಶ್ರದ್ಧಾನಂದ ಸ್ವಾಮೀಜಿ ಸಿದ್ಧೇಶ್ವರ ಶ್ರೀಗಳ ಕುರಿತಾಗಿ ಪದ್ಯ ವಾಚಿಸಿದರು. ಚಂದ್ರು ಬಾಳೆಹಳ್ಳಿಮಠ, ಪ್ರೊ. ಎಸ್.ವೈ.ಚಿಕ್ಕಟ್ಟಿ, ಮಾಜಿ ಶಾಸಕ ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಬಿ.ಆರ್.ಯಾವಗಲ್, ಜಿ.ಎಸ್.ಪಾಟೀಲ ಮಾತನಾಡಿದರು.

*

ಸಿದ್ಶೇಶ್ವರ ಶ್ರೀಗಳ ಜೀವನ ತೆರೆದಿಟ್ಟ ಪುಸ್ತಕ. ಬಯಲ ರೂಪದಂತೆಯೇ ಬಾಳಿದರು. ದೇಹತ್ಯಾಗ ಮಾಡಿ ಬಯಲೇ ಆದರು. ಭಕ್ತರ ದೃಷ್ಟಿಯಲ್ಲಿ ಕಲ್ಲಿನ ಕುರುಹು ಆಗಲಿಲ್ಲ. ಕೋಟ್ಯಂತರ ಜನರ ಹೃದಯವಾಸಿಗಳಾದರು.
–ಅಮೃತಾನಂದ ಸ್ವಾಮೀಜಿ

*

ಮೂರ್ತರೂಪಗಳು ಪ್ರಳಯಕ್ಕೆ ಒಳಗಾಗುತ್ತವೆ. ಪ್ರಳಯಕ್ಕೆ ಒಳಗಾಗದಿರುವುದೇ ದೇವರು. ನಾಮ, ರೂಪ, ಕ್ರಿಯೆ ಹೊರತಾಗಿರುವ ಶುದ್ಧ ಚೈತನ್ಯವೇ ದೇವರು. ಸತ್ಯದ ಅನುಭವ ಪಡೆದಿದ್ದ ಸಿದ್ದೇಶ್ವರ ಶ್ರೀಗಳು ಜಗತ್ತಿಗೆ ಜ್ಞಾನದ ಕಣ್ಣಾಗಿದ್ದರು.
–ನೀಲಮ್ಮ ತಾಯಿ, ಅಧ್ಯಾತ್ಮ ಆಶ್ರಮ

*

ಮನಸ್ಸಿನಿಂದ, ವಚನದಿಂದ, ಕ್ರಿಯೆಯಿಂದ ಯಾರನ್ನೂ ‌ನೋಯಿಸಬೇಡ ಎಂಬ ಸಂದೇಶ ಕೊಟ್ಟವರು ಸಿದ್ಧೇಶ್ವರ ಶ್ರೀಗಳು. ಅವರಿಗೆ ಸಾವಿಲ್ಲ. ಬ್ರಹ್ಮಲೀನವಾಗುವ ಆನಂದಮಯ ಸಂದರ್ಭ ಇದು.
–ಜಯೇಂದ್ರಪುರಿ ಸ್ವಾಮೀಜಿ

*

ಸಿದ್ಧೇಶ್ವರ ಶ್ರೀಗಳ ಪ್ರವಚನ ಲಕ್ಷಾಂತರ ಜನರ ಮನಃಪರಿವರ್ತನೆಗೆ ಕಾರಣವಾಗಿದೆ. ಜಗತ್ತಿನ ಪರಿವರ್ತನೆಗೆ ನೆರವಾಗುವಂತಿರುವ ಅವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಬೇಕು.
–ಡಿ.ಆರ್‌.ಪಾಟೀಲ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.