ADVERTISEMENT

ಗದಗ | ಹವಾಮಾನ ಬದಲಾವಣೆ; ಹೆಚ್ಚಿದ ವೈರಾಣು ಜ್ವರ

ಗದಗ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಪ್ರಕರಣಗಳ ನಿಯಂತ್ರಣಕ್ಕೆ ವಿಶೇಷ ಕ್ರಮ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 11 ಡಿಸೆಂಬರ್ 2023, 5:52 IST
Last Updated 11 ಡಿಸೆಂಬರ್ 2023, 5:52 IST
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೋಂದಣಿಗಾಗಿ ಸರದಿಯಲ್ಲಿ ನಿಂತಿರುವ ಸಾರ್ವಜನಿಕರು
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೋಂದಣಿಗಾಗಿ ಸರದಿಯಲ್ಲಿ ನಿಂತಿರುವ ಸಾರ್ವಜನಿಕರು   

ಗದಗ: ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿನ ಮಕ್ಕಳು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಕ್ರಮವಹಿಸಿದ್ದರೂ, ಸಾಮಾನ್ಯ ವೈರಾಣು ಜ್ವರ ಹೆಚ್ಚು ಜನರನ್ನು ಬಾಧಿಸುತ್ತಿದೆ.

ಅಕ್ಟೋಬರ್‌ನಲ್ಲಿ ಚೀನಾದ ಉತ್ತರ ಭಾಗದಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ಜ್ವರದ ರೀತಿಯ ಅನಾರೋಗ್ಯ ವಿಶ್ವದೆಲ್ಲೆಡೆ ಕಳವಳ ಮೂಡಿಸಿತ್ತು. ಆದಕಾರಣ, ಭಾರತದಲ್ಲೂ ಕಟ್ಟೆಚ್ಚರ ವಹಿಸುವಂತೆ ಡಬ್ಲ್ಯುಎಚ್‌ಒ ಸೂಚಿಸಿತ್ತು. ಅದರಂತೆ, ವೈರಾಣು ಜ್ವರ ಪ್ರಕರಣಗಳು ರಾಜ್ಯದಲ್ಲಿ ಪಸರಿಸದಂತೆ ತಡೆಯಲು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

‘ಮುಂಗಾರು ನಂತರದ ಮಳೆ– ಬಿಸಿಲಿನ ವಾತಾವರಣದಿಂದ ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾಮಾನ್ಯ ವೈರಾಣು ಜ್ವರದ ಹಾವಳಿ ನವೆಂಬರ್‌ ದಾಟಿಕೊಂಡು ಡಿಸೆಂಬರ್‌ನಲ್ಲೂ ಮುಂದುವರಿದೆ. ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ಪ್ರಕರಣಗಳು ಹತೋಟಿಯಲ್ಲಿದ್ದರೂ ಸಾಮಾನ್ಯ ವೈರಾಣು ಜ್ವರಕ್ಕೆ ತುತ್ತಾಗುವವರ ಸಂಖ್ಯೆ ಶೇ 15ರಿಂದ 20ರಷ್ಟು ಹೆಚ್ಚಿದೆ. ಇದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಮಾಮೂಲಿಗಿಂತ ಹೆಚ್ಚಾಗಿದೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕರೀಗೌಡ್ರ.

ADVERTISEMENT

ಗದಗ ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ 113 ಮಂದಿಗೆ ಡೆಂಗಿ ದೃಢಪಟ್ಟಿದೆ. 21 ಮಂದಿಗೆ ಚಿಕೂನ್‌ಗುನ್ಯಾ ಹಾಗೂ ಮೂರು ಮಂದಿಗೆ ಮಲೇರಿಯಾ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ. ರಾಜ್ಯದ ಶೇ 50ರಷ್ಟು ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ದೃಢಪಟ್ಟಿವೆ. ಮೈಸೂರು, ಹಾಸನ ಸೇರಿದಂತೆ ದಕ್ಷಿಣ ಜಿಲ್ಲೆಗಳ ಜತೆಗೆ ವಿಜಯಪುರ, ಕಲಬುರಗಿ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಗದಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತ ಬರುತ್ತಿವೆ’ ಎಂದು ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ ತಿಳಿಸಿದ್ದಾರೆ.

ನರಗುಂದ ತಾಲ್ಲೂಕಿನ ಹುಣಸಿಕಟ್ಟಿಯಲ್ಲಿ ಆಶಾ ಕಾರ್ಯಕರ್ತೆಯರು ಸೊಳ್ಳೆಗಳ ನಾಶಕ್ಕೆ ನೀರಿನ ತೊಟ್ಟಿ ಪರೀಕ್ಷಿಸುತ್ತಿರುವುದು

ಜನವರಿಯಿಂದ ನವೆಂಬರ್‌ ಅವಧಿಯ ನಡುವೆ ಜಿಲ್ಲೆಯಲ್ಲಿ 2,379 ಪ್ರಕರಣಗಳನ್ನು ಡೆಂಗಿ ಸಂಶಯಾಸ್ಪದ ಎಂದು ಗುರುತಿಸಲಾಗಿತ್ತು. ಅದರಲ್ಲಿ 1,662 ಮಂದಿಯ ರಕ್ತ ಪರೀಕ್ಷಿಸಲಾಗಿದ್ದು, 113 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ. ಈ ಪೈಕಿ 109 ಪ್ರಕರಣಗಳನ್ನು ಏಳು ದಿನಗಳ ಒಳಗಾಗಿಯೇ ಕಂಡುಹಿಡಿಯಲಾಗಿದೆ. ಅದೇರೀತಿ, ಚಿಕೂನ್‌ಗುನ್ಯಾಗೆ ಸಂಬಂಧಿಸಿದಂತೆ 630 ಸ್ಯಾಂಪಲ್‌ ಸ್ಯಾಂಪಲ್‌ ಚೆಕ್‌ ಮಾಡಲಾಗಿದ್ದು, 21 ಮಂದಿಗೆ ದೃಢಪಟ್ಟಿದೆ.

‘ಗದಗ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ನಿಯಂತ್ರಣಕ್ಕೆ ವಿಶೇಷ ಕ್ರಮವಹಿಸಲಾಗಿದೆ. ಇದಕ್ಕಾಗಿಯೇ ಜಿಮ್ಸ್‌ನಲ್ಲಿ ಒಬ್ಬ ವಿಶೇಷ ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಯಲ್ಲಿ ಸಂಶಯಾಸ್ಪದ ಎಂದು ಕಂಡು ಬರುವ ಎಲ್ಲ ಪ್ರಕರಣಗಳ ರಕ್ತದ ಮಾದರಿ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ (ಡಿಪಿಎಚ್‌ಎಲ್‌) ಬರುತ್ತವೆ. ಲ್ಯಾಬ್‌ಗೆ ಬಂದ ಸಂಶಯಾಸ್ಪದ ರೋಗಿಗಳ ವಿವರಗಳನ್ನು ಅವರು ಆರೋಗ್ಯ ಇಲಾಖೆ ಜತೆಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ, ವರದಿ ಬರುವ ವೇಳೆಗಾಗಲೇ ನಾವು ಡೆಂಗಿ ಪ್ರಕರಣ ಎಂಬ ಮುಂಜಾಗ್ರತೆ ವಹಿಸುತ್ತೇವೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹತೋಟಿಯಲ್ಲಿವೆ’ ಎನ್ನುತ್ತಾರೆ ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ.

ರೋಣ ನಗರದ ವಿವಿಧ ಬಡಾವಣೆಗಳಲ್ಲಿ ಲಾರ್ವಾ ಸರ್ವೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ

ಪೂರಕ ಮಾಹಿತಿ: ಉಮೇಶ ಬಸನಗೌಡರ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಚಂದ್ರಶೇಖರ ಭಜಂತ್ರಿ, ಶ್ರೀಶೈಲ ಎಂ.ಕುಂಬಾರ, ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌

ರೋಣ ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ವೈರಲ್ ಜ್ವರ ತಡೆಯುವಿಕೆಗೆ ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಜನಜಾಗೃತಿ ಮೂಡಿಸಲಾಗಿದೆ. ಅಗತ್ಯ ಬಿದ್ದರೆ ಫಾಗಿಂಗ್ ಮಾಡಿಸಲಾಗುವುದು
–ಬಿ.ಎಸ್.ಭಜಂತ್ರಿ ತಾಲ್ಲೂಕು ವೈದ್ಯಾಧಿಕಾರಿ
ವೈರಾಣು ಜ್ವರ ತಡೆಗೆ ಆರೋಗ್ಯ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಜಾಗೃತಿ ಕಾರ್ಯಕ್ರಮ ನಿರ್ವಹಿಸಿದೆ. ಸಮುದಾಯ ಸಹಭಾಗಿತ್ವದಲ್ಲಿ ಡೆಂಗಿ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ
–ಜಿ.ವಿ.ಕೊಣ್ಣೂರ ಆರೋಗ್ಯ ಶಿಕ್ಷಣಾಧಿಕಾರಿ ನರಗುಂದ
ಗದಗ ತಾಲ್ಲೂಕಿನಲ್ಲಿ ಹವಾಮಾನ ಬದಲಾವಣೆಯಿಂದ ಶೀತ ನೆಗಡಿ ಸಾಮಾನ್ಯ ಜ್ವರದ ಪ್ರಕರಣಗಳು ಇವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸುವುದು ಕೋವಿಡ್‌ ಸಮಯದಲ್ಲಿ ಅನುಸರಿಸಿದ ಕ್ರಮಗಳನ್ನು ಈಗಲೂ ಅನುಸರಿಸುವಂತೆ ಸೂಚಿಸಲಾಗಿದೆ
–ಡಾ.ಪ್ರೀತ್ ಖೋನಾ. ಗದಗ ತಾಲ್ಲೂಕು ವೈದ್ಯಾಧಿಕಾರಿ
ವಾತಾವರಣದ ಏರುಪೇರಿನಿಂದಾಗಿ ಸದ್ಯ ಜನರಲ್ಲಿ ನೆಗಡಿ ಕೆಮ್ಮು ಹೆಚ್ಚಾಗಿದೆ. ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಶ್ವಾಸಕೋಶದ ರೋಗ ಉಲ್ಭಣಿಸಿಲ್ಲ. ಮಾಮೂಲಾಗಿ ಥಂಡಿ ವಾತಾವರಣಕ್ಕೆ ಮಕ್ಕಳಲ್ಲಿ ಸಾಮಾನ್ಯ ಕೆಮ್ಮು ಕಂಡು ಬಂದಿದೆ
ಡಾ.ಶ್ರೀಕಾಂತ ಕಾಟೆವಾಲೆ ವೈದ್ಯಾಧಿಕಾರಿ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆ
ಮನೆಯಲ್ಲಿ ಶುಚಿತ್ವ ಕಾಪಾಡುವುದರ ಜತೆಗೆ ಮಕ್ಕಳು ಶುಚಿಯಾದ ಆಹಾರ ನೀರು ಸೇವಿಸುವಂತೆ ನೋಡಿಕೊಳ್ಳಬೇಕು. ವಯಸ್ಕರು ಮಾಸ್ಕ್ ಧರಿಸಬೇಕು. ವೈರಾಣು ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಗುಣವಾಗುವವರೆಗೆ ಶಾಲೆಗೆ ಕಳಿಸಬೇಡಿ
ಡಾ.ಅನಿಲಕುಮಾರ ತೋಟದ ಆಡಳಿತ ವೈದ್ಯಾಧಿಕಾರಿ ಗಜೇಂದ್ರಗಡ.
ನರೇಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಂಡಿರುವ ಕಾರಣ ವಾತಾವರಣ ಬದಲಾವಣೆಯ ಪರಿಣಾಮ ಜನರ ಆರೋಗ್ಯದ ಮೇಲೆ ಅಷ್ಟಾಗಿ ಬೀರಿಲ್ಲ
ಡಾ. ಎ.ಡಿ.ಸಾಮುದ್ರಿ ವೈದ್ಯಾಧಿಕಾರಿ ನರೇಗಲ್
ಡೆಂಗಿ ಸಾಮಾನ್ಯ ವೈರಾಣು ಜ್ವರದ ಲಕ್ಷಣಗಳು...
ಡೆಂಗಿ ಚಿಕೂನ್‌ಗುನ್ಯಾಕ್ಕೂ ವೈರಾಣು ಜ್ವರಕ್ಕೂ ಬಹಳ ವ್ಯತ್ಯಾಸಗಳಿವೆ ಎನ್ನುತ್ತಾರೆ ವೈದ್ಯರು. ಗಂಟಲು ನೋವು ಗಂಟಲು ಕಡಿತ ಸಾಧಾರಣ ಮೈಕೈ ನೋವು ಕೆಮ್ಮು ಜ್ವರ ಬಾಧೆ ಇವು ಸಾಮಾನ್ಯ ವೈರಾಣು ಜ್ವರದ ಲಕ್ಷಣಗಳು. ಇದು ಹವಾಮಾನ ಬದಲಾವಣೆ ಕಾರಣಕ್ಕೆ ಹೆಚ್ಚು ಜನರನ್ನು ಬಾಧಿಸುತ್ತದೆ. ಜ್ವರ ಕಣ್ಣಗುಡ್ಡೆಗಳ ಹಿಂದೆ ತೀವ್ರ ತಲೆನೋವು ಕಣ್ಣುಗಳು ಭಾರವಾದಂತೆ ಅನಿಸುವುದು ಮೈಯಲ್ಲಿರುವ ಅಷ್ಟೂ ಮೂಳೆಗಳಲ್ಲಿ ಭಯಂಕರ ನೋವು ವಾಂತಿ ಆಗುವುದು ಇವೆಲ್ಲವೂ ಡೆಂಗಿ ಲಕ್ಷಣಗಳು ಎಂದು ವೈದ್ಯರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕ್ರಮ
ಗದಗ ಜಿಲ್ಲೆಯಲ್ಲಿ ಡೆಂಗಿ ಚಿಕೂನ್‌ಗುನ್ಯಾ ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿದೆ. ಜ್ವರ ಬಾಧೆ ಹೆಚ್ಚು ಇರುವ ಹಳ್ಳಿಗಳಲ್ಲಿನ ಶೇ 5ರಷ್ಟು ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆಯಲಾಗುತ್ತಿದೆ. ಅದಕ್ಕೂ ಮುನ್ನವೇ ಮುಂಜಾಗ್ರತೆ ವಹಿಸಲಾಗುತ್ತಿದೆ. ಕಸ ನಿರ್ವಹಣೆ ನೀರಿನ ತೊಟ್ಟಿಗಳಲ್ಲಿ ನೀರು ಸಂಗ್ರಹಿಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಲಾರ್ವಾ ಸಮೀಕ್ಷೆ ನಿಯಮಿತವಾಗಿ ನಡೆಯುತ್ತಿದೆ. ಇವುಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮಕ್ಕಳಲ್ಲಿ ಹೆಚ್ಚಿದ ಜ್ವರ:
 ಪಾಲಕರಲ್ಲಿ ಆತಂಕ  ಗಜೇಂದ್ರಗಡ: ವೈರಾಣು ಜ್ವರ ಹೆಚ್ಚಾಗಿ ಮಕ್ಕಳನ್ನು ಬಾದಿಸುತ್ತಿದ್ದು ಪಾಲಕರಲ್ಲಿ ಆತಂಕ ಮೂಡಿಸಿದೆ. ನವೆಂಬರ್‌ನಲ್ಲಿ ನಿಧಾನಗತಿಯಲ್ಲಿದ್ದ ವೈರಾಣು ಜ್ವರ ಈ ತಿಂಗಳಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಪಟ್ಟಣದ ಸಮುದಾಯ ಆಸ್ಪತೆಯಲ್ಲಿ ಪ್ರತಿದಿನ ಬರುವ ರೋಗಿಗಳ ಪೈಕಿ ಶೇ 60ರಷ್ಟು ಮಕ್ಕಳು ಇದ್ದಾರೆ. ‘ಗಜೇಂದ್ರಗಡ ತಾಲ್ಲೂಕಿನಲ್ಲಿ ವೈರಾಣು ಜ್ವರ ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತಿದೆ. ನಮ್ಮ ಆಸ್ಪತ್ರೆಗೆ ಬರುವ ಮಕ್ಕಳಿಗೆ ರೋಗದ ಲಕ್ಷಣ ಅನುಸರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಮಕ್ಕಳಿಗೆ ನ್ಯುಮೋನಿಯ ಆಗಿ ಉಸಿರಾಟದ ತೊಂದರೆ ಆಗುವ ಸಂಭವವಿರುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅನಿಲಕುಮಾರ ತೋಟದ ಮಾಹಿತಿ ನೀಡಿದರು.
ತಿಂಗಳಿಗೆ ಎರಡು ಬಾರಿ ಲಾರ್ವಾ ಸಮೀಕ್ಷೆ:
ರೋಣ ತಾಲ್ಲೂಕಿನಾದ್ಯಂತ ವೃದ್ದರು ಮಕ್ಕಳು ಸೇರಿದಂತೆ ಹಲವರಲ್ಲಿ ನೆಗಡಿ ಕೆಮ್ಮು ಸೇರಿದಂತೆ ವೈರಲ್ ಜ್ವರದ ಲಕ್ಷಣಗಳು ಕಂಡುಬಂದಿವೆ. ನವೆಂಬರ್‌ನಲ್ಲಿ 50 ಡಿಸೆಂಬರ್‌ನಲ್ಲಿ 70 ಪ್ರಕರಣಗಳು ಪತ್ತೆಯಾಗಿದ್ದು ವೈರಲ್ ಜ್ವರದ ಹರಡುವಿಕೆಯನ್ನು ನಿಯಂತ್ರಿಸಲು ತಾಲ್ಲೂಕು ಆರೋಗ್ಯ ಇಲಾಖೆ ಕ್ರಮವಹಿಸಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿದಿನ ಮನೆಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಿದ್ದು ನಗರ ಪ್ರದೇಶದಲ್ಲಿ ತಿಂಗಳ ಒಂದನೇ ಮತ್ತು ಮೂರನೇ ಶುಕ್ರವಾರ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ವೈರಲ್ ಜ್ವರ ಕುರಿತಂತೆ ಜನತೆಯಲ್ಲಿ ಜಾಗೃತಿ ಮೂಡಿಸಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು ವೈರಲ್ ಜ್ವರ ವ್ಯಾಪಿಸದಂತೆ ತಡೆಯಲು ಸೊಳ್ಳೆ ಪರದೆ ಕಾಯಿಲ್ ಬಳಕೆ ಕಿಟಕಿಗಳಿಗೆ ಜಾಲರಿ ಅಳವಡಿಕೆ ಮೈತುಂಬ ಉಡುಪುಗಳನ್ನು ತೊಡುವಂತೆ ಸಲಹೆ ನೀಡಲಾಗಿದೆ.
ಫಾಗಿಂಗ್‌ ಮಾಡಿಸಲು ಕ್ರಮ:
ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ನವೆಂಬರ್‌ಗೆ ಹೊಲಿಸಿದರೆ ಡಿಸೆಂಬರ್‌ನಲ್ಲಿ ವೈರಾಣು ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಕೊಂಚ ಹೆಚ್ಚಾಗಿದೆ. ಹವಾಮಾನ ವೈಪರೀತ್ಯ ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ಚಳಿಗಾಲದ ಅಲ್ಪ ಪ್ರಭಾವ ಸೊಳ್ಳೆಗಳು ಅಲ್ಲಲ್ಲಿ ಹೆಚ್ಚಾಗುತ್ತಿರುವುದರಿಂದ ವೈರಾಣು ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಪಟ್ಟಣ ಹಾಗೂ ತಾಲ್ಲೂಕಿನ ಸರ್ಕಾರಿ ಖಾಸಗಿ ಆಸ್ಪತ್ರೆಗಳಲ್ಲಿ ಶೀತ ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೆಚ್ಚಿನ ರೋಗಿಗಳು ಎಡತಾಕುತ್ತಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ನೇತೃತ್ವದಲ್ಲಿ ಕಳೆದ ವಾರ ಮಲೇರಿಯಾ ಡೆಂಗಿ ಚಿಕೂನ್ ಗುನ್ಯಾ ಹರಡದಂತೆ ವಿವಿಧ ಶಾಲಾ ಕಾಲೇಜು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಅಲ್ಲಲ್ಲಿ ಫಾಗಿಂಗ್ ಲಾರ್ವಾ ಮೀನುಗಳನ್ನು ನೀರಿನ ತೊಟ್ಟಿಯಲ್ಲಿ ಬಿಡುವುದು ಸ್ವಚ್ಛತೆ ಕೈಗೊಳ್ಳುವುದು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.