ADVERTISEMENT

ಗದಗ | ಅಂಗಾಂಗ ದಾನ: ಮೌಢ್ಯ ಅಳಿಯುವುದೆಂದು? ದಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟು

ಅಂಗಾಂಗಗಳ ನಿರೀಕ್ಷೆಯಲ್ಲಿ ಸಾವಿರಾರು ರೋಗಿಗಳು

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 13 ಆಗಸ್ಟ್ 2024, 5:18 IST
Last Updated 13 ಆಗಸ್ಟ್ 2024, 5:18 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಗದಗ: ಸತ್ತ ನಂತರ ದೇಹವನ್ನು ಮಣ್ಣು ಮಾಡುವುದು ಅಥವಾ ಸುಡುವುದಕ್ಕಿಂತ ಅಂಗಾಂಗ ದಾನ ಮಾಡಿದರೆ ಬೇರೊಬ್ಬರ ಜೀವ ಉಳಿಸಬಹುದು. ಆದರೆ, ಅಂಗಾಂಗ ದಾನದ ಬಗ್ಗೆ ಜನರಲ್ಲಿ ಇರುವ ಜಾಗೃತಿ ಕೊರತೆ ಹಾಗೂ ಮೂಢನಂಬಿಕೆಯ ಕಾರಣದಿಂದಾಗಿ ಸೂಕ್ತ ಸಮಯಕ್ಕೆ ಅಂಗಾಂಗಗಳು ದೊರಕದೇ ಅನೇಕರು ಸಾವಿಗೀಡಾಗುತ್ತಿದ್ದಾರೆ.

ರಾಜ್ಯದಲ್ಲಿ ಅಂಗಾಂಗ ವೈಫಲ್ಯಗಳಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಆದರೆ, ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ. ದಾನಿಗಳು ಮತ್ತು ಅಂಗಾಂಗ ಮತ್ತು ಅಂಗಾಂಶಗಳ ನಿರೀಕ್ಷೆಯಲ್ಲಿರುವ ರೋಗಿಗಳ ನಡುವೆ ದೊಡ್ಡ ವ್ಯತ್ಯಾಸ ಇದೆ. ಇದನ್ನು ಸರಿದೂಗಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದ್ದು, ಜನರು ಮೂಢನಂಬಿಕೆಗಳನ್ನು ತೊರೆದು ಅಂಗಾಂಗ ದಾನಕ್ಕೆ ಮುಂದಾಗಬೇಕು ಎನ್ನುತ್ತಾರೆ ವೈದ್ಯರು.

‘ಭಾರತದಲ್ಲಿ ಅಂಗಾಂಗ ದಾನಕ್ಕೆ ಮಹತ್ವದ ತಡೆಗೋಡೆ ಎಂದರೆ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಪ್ರಭಾವ. ಇವುಗಳಿಂದ ಪ್ರಭಾವಿತರಾದ ಅನೇಕರು ಮರಣದ ನಂತರ ಅಂಗಾಂಗಗಳನ್ನು ದಾನ ಮಾಡಲು ಹಿಂಜರಿಯುತ್ತಾರೆ. ಅಂಗ ದಾನವು ಮರಣಾ ನಂತರದ ಜೀವನ ಅಥವಾ ಪುನರ್‌ಜನ್ಮದಲ್ಲಿ ದೇಹದ ಮೇಲೆ ಪರಿಣಾಮ ಬೀರಬಹುದು ಎಂಬ ನಂಬಿಕೆ ಹೊಂದಿರುತ್ತಾರೆ. ಇದು ಬದಲಾಗಬೇಕು’ ಎನ್ನುತ್ತಾರೆ ಸಂಕಲ್ಪ ಆಸ್ಪತ್ರೆಯ ಯುರಾಲಜಿಸ್ಟ್‌ ಡಾ. ಅವಿನಾಶ ಓದುಗೌಡರ.

ADVERTISEMENT

ಅಂಗಾಂಗ ಕಸಿ ಮಾಡುವ ಸೌಲಭ್ಯ ಮುಂಚೆ ಎಲ್ಲ ಕಡೆಗಳಲ್ಲಿ ಇರಲಿಲ್ಲ. ಆದರೆ, ತಂತ್ರಜ್ಞಾನ ಬದಲಾದಂತೆ ಹೆಚ್ಚು ಹೆಚ್ಚು ಓದಿಕೊಂಡ ತಜ್ಞ ವೈದ್ಯರು ಸಣ್ಣ ನಗರಗಳಲ್ಲಿ ಅಂಗಾಂಗ ಕಸಿ ಮಾಡುತ್ತಿದ್ದಾರೆ. ಹುಲಕೋಟಿ ಗ್ರಾಮದಲ್ಲಿರುವ ಕೆ.ಎಚ್‌.ಪಾಟೀಲ ಆಸ್ಪತ್ರೆಯಲ್ಲೂ ಈಚೆಗೆ ಕಿಡ್ನಿ ಕಸಿ ಯಶಸ್ವಿಯಾಗಿ ನಡೆದಿದೆ. ಸರ್ಕಾರಿ ಯೋಜನೆಗಳ ಸೌಲಭ್ಯ ಕೂಡ ಇದಕ್ಕೆ ಸಿಗುತ್ತಿರುವುದರಿಂದ ಖರ್ಚು ಕೂಡ ಕಡಿಮೆ ಆಗಿದೆ.

‘ಒಬ್ಬ ಮನುಷ್ಯ ಎರಡು ರೀತಿಯಲ್ಲಿ ಅಂಗಾಂಗ ದಾನ ಮಾಡಬಹುದು. ಮನುಷ್ಯನ ದೇಹದಲ್ಲಿ ಯಾವೆಲ್ಲ ಅಂಗಾಂಗಗಳು ಎರಡು ಇರುತ್ತವೆಯೋ ಅದನ್ನು ಜೀವಿತಾವಧಿಯಲ್ಲೇ ದಾನ ಮಾಡಬಹುದು. ಅದೇರೀತಿ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಳ್ಳುವ ಹಂತ ತಲುಪಿದಾಗ ಆ ವ್ಯಕ್ತಿಯ ಕಡೆಯವರು ಕಾನೂನಾತ್ಮಕವಾಗಿ ಅಂಗಾಂಗ ದಾನಕ್ಕೆ ಮುಂದಾಗಬಹುದು’ ಎನ್ನುತ್ತಾರೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ.

ಅಂಗಾಂಗ ದಾನ: ಜನಜಾಗೃತಿಗಾಗಿ ವಾಕಥಾನ್‌

ಸೈಕ್ಲೊಥಾನ್‌ ಜಿಲ್ಲಾಡಳಿತ ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೆ.ಎಚ್‌.ಪಾಟೀಲ ಆಸ್ಪತ್ರೆ ಐಎಂಎ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಬೆಳಿಗ್ಗೆ 9ಕ್ಕೆ ಅಂಗಾಂಗ ದಾನ: ಜನಜಾಗೃತಿಗಾಗಿ ವಾಕಥಾನ್‌ ಸೈಕ್ಲೊಥಾನ್‌ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳುವ ವಾಕಥಾನ್‌ ಭೂಮರಡ್ಡಿ ಸರ್ಕಲ್‌ ಬಸವೇಶ್ವರ ಸರ್ಕಲ್‌ ಮಹೇಂದ್ರಕರ ಸರ್ಕಲ್‌ ಮಾರ್ಗವಾಗಿ ಗಾಂಧಿ ಸರ್ಕಲ್‌ ತಲುಪಿ ಅಲ್ಲಿಂದ ಮತ್ತೇ ಕೆ.ಎಚ್‌.ಪಾಟೀಲ ಕ್ರೀಡಾಂಗಣ ತಲುಪಲಿದೆ.

ಅಂಗಾಂಗಗಳಿಗೆ ಕಾದಿರುವ ರೋಗಿಗಳು ಮತ್ತು ದಾನಿಗಳ ಸಂಖ್ಯೆ ತುಲನೆ ಮಾಡಿದರೆ ಅಜಗಜಾಂತರ ಇದೆ. ಇವೆರಡರ ನಡುವಿನ ಅಂತರ ಕಡಿಮೆ ಆಗಬೇಕಿದೆ. ಅನಸ್ತೇಷಿಯಾ ಸರ್ಜನ್‌ ಯೂರಾಲಜಿಸ್ಟ್‌ ನೆಫ್ರಾಲಜಿಸ್ಟ್‌ ವೈದ್ಯರ ತಂಡ ಸಿದ್ಧವಾದರೆ ಕಡಿಮೆ ಖರ್ಚಿನಲ್ಲಿ ಅಂಗಾಂಗ ಕಸಿ ಸೌಲಭ್ಯ ಸಿಗಲಿದೆ
-ಡಾ. ಬಸವರಾಜ ಬೊಮ್ಮನಹಳ್ಳಿ ಜಿಮ್ಸ್‌ ನಿರ್ದೇಶಕ
ಅಂಗಾಂಗ ದಾನ ಮತ್ತು ನಿರೀಕ್ಷೆಯಲ್ಲಿರುವ ರೋಗಿಗಳ ನಡುವಿನ ಅಂತರ ಕಡಿಮೆ ಮಾಡುವಲ್ಲಿ ಮಹತ್ವದ ಮೊದಲ ಹೆಜ್ಜೆ ಎಂದರೆ ಸಾರ್ವಜನಿಕರಲ್ಲಿ ಅರಿವು ಮತ್ತು ಶಿಕ್ಷಣ ಹೆಚ್ಚಿಸುವುದು. ಶಾಲೆಗಳಲ್ಲಿನ ಜಾಗೃತಿ ಕಾರ್ಯಕ್ರಮಗಳು ಅಂತರ ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ
-ಡಾ. ಅವಿನಾಶ್‌ ಓದುಗೌಡರ ಯುರಾಲಜಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.