ರೋಣ: ಇಂದಿಗೂ ಪಾರಂಪರಿಕ ವೃತ್ತಿಯ ಮೇಲೆ ಅವಲಂಬಿತವಾಗಿರುವ ಜಾತಿಗಳಲ್ಲಿ ಹತ್ತಿ ಅರಳೆಯಿಂದ ಗಾದಿ ತಯಾರಿಸುವ ಮತ್ತು ನಾರಿನಿಂದ ಹಗ್ಗ ನೇಯುವ ಕುಲಕಸುಬು ಅವಲಂಬಿತ ನದಾಫ್, ಪಿಂಜಾರ ಸಮಾಜವೂ ಒಂದು.
ಉತ್ತರ ಕರ್ನಾಟಕದ ಹಳ್ಳಿಗಾಡಿನಾದ್ಯಂತ ಕಂಡು ಬರುವ ಮುಸ್ಲಿಂ ಧರ್ಮದ ಒಂದು ಉಪಪಂಗಡವಾಗಿರುವ ನದಾಫ, ಪಿಂಜಾರರು ರೋಣ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಕಂಡು ಬರುತ್ತಾರೆ.
ಬಹುತೇಕ ಕಡುಬಡತನದಿಂದ ಕೂಡಿದ ಕುಟುಂಬಗಳನ್ನೇ ಹೆಚ್ಚು ಹೊಂದಿರುವ ನದಾಫ ಪಿಂಜಾರರು ಭೂಮಿ ಸೇರಿದಂತೆ ಸ್ಥಿರಾಸ್ಥಿಗಳ ಒಡೆತನ ಹೊಂದಿರುವುದು ಅತ್ಯಂತ ಕಡಿಮೆ. ಕುಲಕಸುಬು ಜೀವನಕ್ಕೆ ಆಧಾರವಾಗಿದ್ದು ತಾಲ್ಲೂಕಿನಾದ್ಯಂತ ಈ ಸಮುದಾಯಕ್ಕೆ ಸೇರಿದ ಸುಮಾರು 3,000 ಕುಟುಂಬಗಳು ವಾಸ ಇವೆ. ಕೋವಿಡ್ ನಂತರದ ಸಮಯದಲ್ಲಿ ಕುಲಕಸುಬಿಗೆ ವ್ಯಾಪಕವಾದ ಹೂಡೆತ ಬಿದ್ದಿದ್ದು ಸಾಕಷ್ಟು ಹಾನಿ ಅನುಭವಿಸುವಂತಾಗಿದೆ ಎಂದು ಸಮುದಾಯದ ಜನರು ಅಲವತ್ತುಕೊಂಡಿದ್ದಾರೆ.
ಗಾದಿ ತಯಾರಿಕೆ ಮಾತ್ರವಲ್ಲದೆ ರೈತರಿಗೆ ಬೇಕಾದ ಸಲಕರಣೆಗಳಾದ ಹಗ್ಗ, ಚಿಕ್ಕ, ಜತಿಗೆ, ಮೂಗುದಾರ, ಕನ್ನಿ ಸೇರಿದಂತೆ ಹಲವು ಸಲಕರಣೆಗಳನ್ನು ಮನೆಯಲ್ಲಿಯೇ ತಯಾರಿಸಿ ಸಿಕ್ಕ ಅಲ್ಪ ಆದಾಯದಲ್ಲಿ ಜೀವನ ಸಾಗಿಸುವ ಸಮುದಾಯವು ಆಧುನಿಕತೆಯ ಭರಾಟೆಗೆ ಸಿಲುಕಿ ತನ್ನ ಪಾರಂಪರಿಕ ವೃತ್ತಿಯಿಂದ ಬಹುದೂರ ಸರಿಯುವಂತಾಗಿದೆ. ಗಾದಿ ತಯಾರಿಕೆ ಉದ್ಯಮಕ್ಕೆ ಬಹುರಾಷ್ಟ್ರೀಯ ಕಂಪನಿಗಳು ತೊಡಗಿ ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದು ರೈತರು ಸಹ ಜಾನುವಾರುಗಳಿಂದ ದೂರವಾಗುತ್ತಿದ್ದು ಈ ಸಮುದಾಯದ ಮೂಲ ವೃತ್ತಿಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ.
ನದಾಫ್ ಪಿಂಜಾರ ಸಮುದಾಯವು ಅಲೆಮಾರಿ ಜನಾಂಗಕ್ಕೆ ಸೇರಿದ್ದು ಪ್ರವರ್ಗ–1ರ ಅಡಿ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟಿದ್ದರೂ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಗದೇ ಇರುವುದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಸೇರಿದಂತೆ ವೃತ್ತಿಪರ ಶಿಕ್ಷಣ ಪಡೆಯುವಲ್ಲಿ ತೊಂದರೆಯಾಗಿದೆ. ಸಮಾಜದ ಜನರು ಮುಖ್ಯ ವಾಹಿನಿಯಿಂದ ದೂರ ಉಳಿಯುವಂಗಿದೆ ಎಂಬುದು ಸಮುದಾಯದ ಹಿರಿಯರ ಅಭಿಪ್ರಾಯವಾಗಿದೆ.
ಸರ್ಕಾರವು ಈ ಹಿಂದೆ ಸಮುದಾಯದ ಅಭಿವೃದ್ಧಿಗಾಗಿ ನದಾಫ ಪಿಂಜಾರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದೆ. ಆದರೆ ಇದುವರೆಗೆ ಪದಾಧಿಕಾರಿಗಳನ್ನು ನೇಮಿಸದಿರುವ ಸರ್ಕಾರ ಮತ್ತು ಯಾವುದೇ ಅನುದಾನವನ್ನು ಸಹ ನೀಡಿಲ್ಲ. ಆದ್ದರಿಂದ ತೆರೆಮರೆಗೆ ಸರಿಯುತ್ತಿರುವ ಸಮುದಾಯದ ಕುಲವೃತ್ತಿ ಕಾಪಾಡುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ನದಾಫ್ ಪಿಂಜಾರ ಸಮುದಾಯದ ಕುಟುಂಬಗಳಿಗೆ ಪಾರಂಪರಿಕ ವೃತ್ತಿ ಮುಂದುವರಿಸಲು ಸರ್ಕಾರ ಯೋಜನೆಯೊಂದನ್ನು ರೂಪಿಸಿ ಹಣಕಾಸಿನ ನೆರವು ನೀಡಬೇಕು. ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ನಿಧಿ ಒದಗಿಸಬೇಕು ಹಾಗೂ ಸಮುದಾಯದ ಉತ್ಪನ್ನಗಳಿಗೆ ಸರ್ಕಾರದ ಸಹಯೋಗದಲ್ಲಿ ಮಾರುಕಟ್ಟೆ ಒದಗಿಸಿಕೊಡಬೇಕು ಎಂಬುದು ಸಮುದಾಯದ ಜನರ ಒಕ್ಕೊರಲಿನ ಬೇಡಿಕೆಯಾಗಿದೆ.
ಅಭಿವೃದ್ಧಿ ನಿಗಮದ ಸದುಪಯೋಗವಾಗಲಿ ನಮ್ಮದು ಪಾರಂಪರಿಕ ವೃತ್ತಿ ನಿರತ ಸಮುದಾಯವಾಗಿದ್ದು ಮೊದಲಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರ ನದಾಫ್ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡಿ ವರ್ಷಗಳೇ ಕಳೆದರೂ ಸಮುದಾಯದ ಜನರಿಗೆ ಅದರ ಸದುಪಯೋಗ ಇದುವರೆಗೂ ದೊರಕಿಲ್ಲ ಆದ್ದರಿಂದ ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು
–ಅಬ್ದುಲ್ ಸಾಬ್ ಹೊಸಮನಿ ಉಪಾಧ್ಯಕ್ಷರು ನದಾಫ ಪಿಂಜಾರ ಸಂಘ ರೋಣ ತಾಲ್ಲೂಕು
ಸೂಕ್ತ ಯೋಜನೆ ರೂಪಿಸಲಿ ಅವಿಭಜಿತ ರೋಣ ತಾಲ್ಲೂಕಿನಾದ್ಯಂತ ನಮ್ಮ ಸಮುದಾಯದ ಹಲವು ಕುಟುಂಬಗಳು ವಾಸವಾಗಿದ್ದು ಪ್ರಸ್ತುತ ದಿನಗಳಲ್ಲಿ ಸಮುದಾಯಕ್ಕೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಯಾವುದೇ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಆದ್ದರಿಂದ ನಮ್ಮ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು
–ಖಾಸಿಂಸಾಬ್ ಪಿಂಜಾರ ಅಧ್ಯಕ್ಷರು ರೋಣ ತಾಲ್ಲೂಕು ನದಾಫ ಪಿಂಜಾರ ಸಂಘ
ಬೇಡಿಕೆ ಈಡೇರಿಸಲಿ ನದಾಫ್ ಪಿಂಜಾರ ಸಮುದಾಯಕ್ಕೆ ಶತಮಾನಗಳ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಸಮಾಜದ ಇತರ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಬಡತನ ನಿರುದ್ಯೋಗ ಮತ್ತು ವೃತ್ತಿಯಲ್ಲಿ ನಾವೀನ್ಯತೆ ಹೊಂದದಿರುವುದು ನದಾಫ ಪಿಂಜಾರ ಸಮುದಾಯ ಹಿಂದುಳಿಯಲು ಕಾರಣವಾಗಿದ್ದು ಸರ್ಕಾರ ಈ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನಹರಿಸಬೇಕು
–ಎಸ್. ಆರ್. ನದಾಫ ಇತಿಹಾಸ ಪ್ರಾಧ್ಯಾಪಕರು ಕೆ.ಎಸ್.ಎಸ್ ಮಹಾವಿದ್ಯಾಲಯ ರೋಣ
ಮೊದಲಿನಷ್ಟು ಬೇಡಿಕೆ ಇಲ್ಲ ನಮ್ಮ ಹಿರಿಯರ ಕಾಲದಿಂದ ನಮ್ಮ ಕುಲಕಸುಬಾದ ಗಾದಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು ಮೊದಲಿನಷ್ಟು ಬೇಡಿಕೆ ಈಗಿಲ್ಲ. ಮಾರ್ಕೆಟ್‌ನಲ್ಲಿ ರೆಡಿಮೇಡ್ ಗಾದಿಗಳು ಅಧಿಕ ಬೇಡಿಕೆಯಲ್ಲಿದ್ದು ಹೀಗಾಗಿ ಈ ವೃತ್ತಿಯನ್ನು ನಂಬಿ ಜೀವಿಸುವುದು ಕಷ್ಟವಾಗಿದೆ. ಬಾಬರಸಾಬ್ ನದಾಫ (ಗಾದಿ ತಯಾರಿಸುವವರು ಹೊಸಹಳ್ಳಿ ಗ್ರಾಮ) ಸರ್ಕಾರದ ಸಹಾಯ ಅಗತ್ಯ ಇತ್ತೀಚಿನ ದಿನಗಳಲ್ಲಿ ರೈತರು ಪಶು ಸಂಗೋಪನೆ ಕಡಿಮೆ ಮಾಡಿದ್ದು ಇದರಿಂದಾಗಿ ನಮ್ಮ ಉತ್ಪನ್ನಗಳ ಬೇಡಿಕೆ ಕೂಡ ಕುಸಿದಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದೇವೆ.
-ದಾವಲಸಾಬ ನದಾಫ (ಹಗ್ಗ ತಯಾರಿಸುವ ಕಾರ್ಮಿಕರು ಸವಡಿ ಗ್ರಾಮ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.