ಕಾಶೀನಾಥ ಬಿಳಿಮಗ್ಗದ
ಮುಂಡರಗಿ: ರಾಜ್ಯ ಸರ್ಕಾರದ ಹಲವು ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಸಹಕಾರ, ಅರಣ್ಯ ಸೇರಿದಂತೆ ಹಲವು ಖಾತೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರು ಸಚಿವ ಸಂಪುಟದ ಸರ್ವ ಸದಸ್ಯರಿಂದ ಅಕ್ಷರಶಃ ‘ಶರಣ’ ಎನ್ನಿಸಿಕೊಂಡು ಉತ್ತಮ ಆಡಳಿತ ನಡೆಸಿದವರು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಮೊದಲಾದವರ ಗರಡಿಯಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ಸೈ ಎನಿಸಿಕೊಂಡಿದ್ದಾರೆ.
ಇಂದು (ಆ.13) ಎಸ್.ಎಸ್.ಪಾಟೀಲ ಅಭಿಮಾನಿ ಬಳಗದ ಕಾರ್ಯಕರ್ತರು ಅವರ ಜನ್ಮದಿನಾಚರಣೆ ಅಂಗವಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಗದುಗಿನ ಬಿಂಕದಕಟ್ಟಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದ 100 ಸಸಿಗಳನ್ನು ಪಾಟೀಲರು ದತ್ತಕ್ಕೆ ಪಡೆದುಕೊಳ್ಳಲಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಗೆ ₹1 ಲಕ್ಷ ಶಾಶ್ವತ ಠೇವಣಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಜನಪರ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪಾಟೀಲ ಅವರು ರಾಜ್ಯ ಅರಣ್ಯ ಇಲಾಖೆಯ ಮಂತ್ರಿಯಾಗಿ ಜಿಲ್ಲೆಯ ಕಪ್ಪತಗುಡ್ಡ ಸೇರಿದಂತೆ ರಾಜ್ಯದ ಅರಣ್ಯ ಸಂಪತ್ತನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಪ್ಪತಗುಡ್ಡ ಸಮಗ್ರವಾಗಿ ಅಭಿವೃದ್ಧಿಗೊಳ್ಳುವಲ್ಲಿ ಪಾಟೀಲರ ಪಾತ್ರವನ್ನು ಮರೆಯುವಂತಿಲ್ಲ.
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ಕಾರ್ಯನಿರ್ವಹಿಸುತ್ತಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆ, ಗಂಗಾಪುರ ಗ್ರಾಮದಲ್ಲಿ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ, ಬೆಣ್ಣಿಹಳ್ಳಿ ಬಳಿ ಜವಾಹರ ನವೋದಯ ವಿದ್ಯಾಲಯ ಸ್ಥಾಪನೆ, ಮೂರಾರ್ಜಿ ವಸತಿ ಶಾಲೆಗಳ ಮಂಜೂರಾತಿ ಹೀಗೆ ಎಸ್.ಎಸ್.ಪಾಟೀಲರು ತಮ್ಮ ಅವಧಿಯಲ್ಲಿ ಈ ಭಾಗದ ಅಭಿವೃದ್ಧಿ ಕೈಗೊಂಡಿದ್ದಾರೆ.
ಗದುಗಿನ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ನಡೆಯುವ ಸಮಾರಂಭದಲ್ಲಿ ನಾಡಿನ ಹಲವಾರು ಮಠಾಧೀಶರು, ರಾಜಕಾರಣಿಗಳು, ಬುದ್ದಿಜೀವಿಗಳು, ಸಂತರು, ಶರಣರು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.