ಗಜೇಂದ್ರಗಡ: ಬೆಳಕಿನ ಹಬ್ಬ ದೀಪಾವಳಿಗೆ ಪಟ್ಟಣದಲ್ಲಿ ವರ್ತಕರು ವಿದ್ಯುತ್ ದೀಪಾಲಂಕಾರದಿಂದ ತಮ್ಮ ಅಂಗಡಿಗಳು ಜಗಮಗಿಸುವಂತೆ ಮಾಡಿದ್ದಾರೆ. ಆದರೆ ಹಲವು ಬೀದಿಗಳಲ್ಲಿ ಬೀದಿ ದೀಪಗಳೇ ಬೆಳಗುತ್ತಿಲ್ಲ. ಹೀಗಾಗಿ ದೀಪಾವಳಿಯಾದರೂ ಕತ್ತಲೆ ಕವಿದಿದೆ.
ಪಟ್ಟಣದ ಕಾಲಕಾಲೇಶ್ವರ ವೃತ್ತದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗೆ ರಸ್ತೆ ನಡುವೆ ಇರುವ ಬೀದಿ ದೀಪಗಳಲ್ಲಿ ಬಹಳಷ್ಟು ಬೆಳಗುತ್ತಿಲ್ಲ. ಹಿರೇ ಬಜಾರ, ಕೊಳ್ಳಿಯವ ಕತ್ರಿ, ಬಣಗಾರ ಓಣಿ, ಚೋಳಿನವರ ಓಣಿ, ನೇಕಾರ ಕಾಲೊನಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಬೆಳಗುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆಗೆ ಪುರಸಭೆಯಿಂದ ಟೆಂಡರ್ ನೀಡಲಾಗುತ್ತದೆ. ಕಳೆದೆರಡು ವರ್ಷಗಳಿಂದ ಟೆಂಡರ್ ಮುಗಿದಿದ್ದು, ಬೀದಿ ದೀಪಗಳ ನಿರ್ವಹಣೆಯನ್ನು ಪುರಸಭೆ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಬೆಳಕಿನ ಹಬ್ಬದಲ್ಲಿಯೂ ಬೆಳಗದ ಬೀದಿ ದೀಪಗಳನ್ನು ಕಂಡ ಜನರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಯಲ್ಲೂ ಬೆಳಗದ ಬೀದಿ ದೀಪ: ಪಟ್ಟಣದ ಮೂಲಕ ಹಾದು ಹೋಗಿರುವ ಭಾನಾಪುರ - ಗದ್ದನಕೇರಿ ಕ್ರಾಸ್‌ವರೆಗಿನ 367 ದ್ವಿಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆನ್ನಮ್ಮ ವೃತ್ತದಿಂದ ಪುರ್ತಗೇರಿ ಕ್ರಾಸ್‌ವರೆಗೆ ಸಿಸಿ ರಸ್ತೆ ನಿರ್ಮಿಸಿ ರಸ್ತೆ ವಿಭಜಕದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ವಿಶಾಲ ರಸ್ತೆ ಹಾಗೂ ವಿದ್ಯುತ್ ದೀಪಗಳ ಬೆಳಕು ಪಟ್ಟಣದ ಅಂದ ಹೆಚ್ಚಿಸಿದೆ. ಅಲ್ಲದೇ ಈ ರಸ್ತೆಯಲ್ಲಿ ಜನರು ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ತೆರಳುತ್ತಾರೆ. ಆದರೆ ಜಗದ್ಗುರು ತೋಂಟದಾರ್ಯ ಶಾಲೆಯಿಂದ ಪುರ್ತಗೇರಿ ಕ್ರಾಸ್‌ವರೆಗಿನ ವಿದ್ಯುತ್ ದೀಪಗಳು ಹಲವು ತಿಂಗಳಿಂದ ಬೆಳಗುತ್ತಿಲ್ಲ. ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ, ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ಪಟ್ಟಣದ ಅಂದ ಹೆಚ್ಚಿಸಿದ್ದ ವಿದ್ಯುತ್ ದೀಪಗಳು ಬೆಳಗದಿರುವುದರಿಂದ ವಾಯು ವಿಹಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಗಜೇಂದ್ರಗಡದ ಕಾಲಕಾಲೇಶ್ವರ ವೃತ್ತದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗಿನ ಬೀದಿ ದೀಪಗಳ ವಿದ್ಯುತ್ ಜಾಲದಲ್ಲಿ ಸಮಸ್ಯೆಯಾಗಿದ್ದು ಶೀಘ್ರದಲ್ಲಿಯೇ ದುರಸ್ತಿ ಮಾಡಿಸಲಾಗುವುದುಬಸವರಾಜ ಬಳಗಾನೂರ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಗಜೇಂದ್ರಗಡ
ಬೀದಿ ದೀಪಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿರುವ ಕುರಿತು ಮಾಹಿತಿಯಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆಬಿ.ಎನ್. ಇಟಗಿಮಠ ಪಿಡಿಒ ರಾಮಾಪುರ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.