ADVERTISEMENT

ಡಿ. ಕೆ. ಶಿವಕುಮಾರ್ ಕ್ಷಮೆಯಾಚನೆಗೆ ಸಾಹಿತಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:52 IST
Last Updated 19 ಜೂನ್ 2024, 15:52 IST

ಗದಗ: ‘ಅಕಾಡೆಮಿಯ ನೇಮಕಗಳೂ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕ ಆಗಿದೆ. ಸಾಹಿತಿಗಳೂ ಕೂಡ ಪಕ್ಷ ರಾಜಕಾರಣಿಗಳೇ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯನ್ನು ನಾಡಿನ ಸಾಹಿತಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಾಹಿತಿಗಳು,‘ಉಪಮುಖ್ಯಮಂತ್ರಿ ಅವರ ನಡೆಯು ಸರ್ವಾಧಿಕಾರ, ಉದ್ಧಟತನ ಮತ್ತು ಅಧಿಕಾರದ ದರ್ಪದಿಂದ ಕೂಡಿದೆ. ಅವರು ಬೇಷರತ್ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಉಪಮುಖ್ಯಮಂತ್ರಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಮತ್ತು ಇತರೆ ಸಚಿವರು ಅನುಮೋದಿಸುವರೇ’ ಎಂದು ಪ್ರಶ್ನಿಸಿರುವ ಸಾಹಿತಿಗಳು, ‘ಸರ್ವಾಧಿಕಾರಿ ಧೋರಣೆಯ ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಲು ಎಲ್ಲಾ ಪ್ರಗತಿಪರ, ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕೊಂಡೊಯ್ಯ ಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಈ ಹೇಳಿಕೆ ನಮಗೆ ಅಘಾತ ಉಂಟು ಮಾಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಸಂವಿಧಾನದ ಆಶಯದಂತೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಗಣರಾಜ್ಯವನ್ನಾಗಿ ರೂಪಿಸಲು ಕೆಲಸ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ. ಪ್ರಗತಿಪರರು ಅವರ ಹಂಗಿನಲ್ಲಿದ್ದಾರೆ ಎಂದುಕೊಂಡರೆ ಅದು ಅವರ ಮೂರ್ಖತನವೇ ಸರಿ. ಅವರ ಧೋರಣೆ ಗಮನಿಸಿದರೆ, ಅವರು ಸರ್ವಾಧಿಕಾರಿ ಮೋದಿ ಅವರಿಗಿಂತ ಭಿನ್ನವಿಲ್ಲ ಎನಿಸುತ್ತದೆ. ಹಾಗೆಯೇ, ಕಾಂಗ್ರೆಸ್‌ನ ಬಹುಮುಖಗಳಲ್ಲಿ ಒಂದನ್ನು ಡಿ.ಕೆ.ಶಿವಕುಮಾರ್ ಅನಾವರಣಗೊಳಿಸಿದಂತಿದೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಡಾ. ಎಚ್. ಎಸ್.ಅನುಪಮಾ, ನಿರಂಜನಾರಾಧ್ಯ ವಿ.ಪಿ., ಬಸವರಾಜ ಸೂಳಿಭಾವಿ, ಡಾ.ಶ್ರೀನಿವಾಸ ಕಕ್ಕಿಲಾಯ, ಕೆ.ಫಣಿರಾಜ್‌, ಕೆ.ಪಿ.ಸುರೇಶ, ಬಿ. ಸುರೇಶ, ಕೇಸರಿ ಹರವು, ಚಂದ್ರಕಾಂತ ವಡ್ಡು, ಯೋಗಾನಂದ ಬಿ.ಎನ್‌., ರಹಮತ್‌ ತರೀಕೆರೆ, ನಾ. ದಿವಾಕರ, ಎಚ್.ಎಸ್.ರಾಘವೇಂದ್ರರಾವ್, ಬಿ. ಶ್ರೀನಿವಾಸ, ಸುನಂದಾ ಕಡಮೆ ಸೇರಿ ಹಲವರು ಜಂಟಿ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.