ADVERTISEMENT

ವಕ್ಫ್‌ ಆಸ್ತಿ ಕಬಳಿಸಿದ ರಾಜಕಾರಣಿಗಳಿಂದ ಅವುಗಳನ್ನು ಹಿಂಪಡೆಯಲಿ: ಸಂಕನೂರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 14:24 IST
Last Updated 3 ನವೆಂಬರ್ 2024, 14:24 IST
<div class="paragraphs"><p>ಎಸ್‌.ವಿ.ಸಂಕನೂರ</p></div>

ಎಸ್‌.ವಿ.ಸಂಕನೂರ

   

ಗದಗ: ‘ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಮುಸ್ಲಿಮರ ಕಲ್ಯಾಣದ ಬಗ್ಗೆ ನಿಜವಾದ ಕಾಳಜಿ ಇದ್ದರೆ ವಕ್ಫ್‌ ಆಸ್ತಿ ಕಬಳಿಸಿರುವ ರಾಜಕಾರಣಿಗಳಿಂದ ಅವುಗಳನ್ನು ಹಿಂಪಡೆಯುವ ಕೆಲಸ ಮಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಆಗ್ರಹಿಸಿದರು.

‘ವಕ್ಫ್‌ ಬೋರ್ಡ್‌ನಲ್ಲಿ ಅವ್ಯವಹಾರ, ಭ್ರಷ್ಟಾಚಾರದ ಆರೋಪ ಕೇಳಿಬಂದಾಗ 2012–13ರಲ್ಲಿ ಅನ್ವರ್‌ ಮಾನಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನೀಡಿದ ವರದಿಯಂತೆ, ರಾಜ್ಯದ ವಿವಿಧೆಡೆ ಇರುವ 29 ಸಾವಿರ ವಕ್ಫ್‌ ಆಸ್ತಿಗಳನ್ನು ರಾಜಕಾರಣಿಗಳೇ ಕಬಳಿಸಿದ್ದಾರೆ ಎಂಬುದು ತಿಳಿಯಿತು. ದೇವರ ಆಸ್ತಿ ನುಂಗಿದವರಿಂದ ಅದನ್ನು ಹಿಂಪಡೆಯುವುದನ್ನು ಬಿಟ್ಟು, ಈಗ ರೈತರ ಜಮೀನಿನ ಮೇಲೆ ಕಣ್ಣು ಹಾಕಿರುವುದು ನಾಚಿಕೆಗೇಡಿನ ಕೆಲಸ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮನ್‌ಮೋಹನ್‌ ಸಿಂಗ್‌ ಅವರು ಪ್ರಧಾನಮಂತ್ರಿ ಆಗಿದ್ದಾಗ ಮುಸ್ಲಿಂ ಸಮಾಜದ ಸ್ಥಿತಿಗತಿ ಅಧ್ಯಯನ ಮಾಡಲು ನ್ಯಾಯಮೂರ್ತಿ ಸಾಚಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಅವರು 2007ರಲ್ಲಿ ವರದಿ ನೀಡಿದ್ದು, ಮುಸ್ಲಿಂ ಸಮುದಾಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅತ್ಯಂತ ನಿಕೃಷ್ಟವಾಗಿದೆ ಎಂದು ತಿಳಿಸಿದ್ದರು. ಮುಸ್ಲಿಮರ ಕಲ್ಯಾಣದಲ್ಲಿ ವಕ್ಫ್‌ ಬೋರ್ಡ್‌ ಸರಿಯಾಗಿ ಕಾರ್ಯನಿರ್ವಹಿಸದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದರು’ ಎಂದು ತಿಳಿಸಿದರು.

‘ವಕ್ಫ್‌ ಬೋರ್ಡ್‌ನಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ವಕ್ಫ್‌ ಬೋರ್ಡ್‌ಗೆ ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರ ನೇಮಕ, ಮಂಡಳಿ ಅಧ್ಯಕ್ಷನಿಗೆ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುವ ಅಧಿಕಾರ, ಮಹಿಳೆಯರಿಗೆ ಪ್ರಾತಿನಿಧ್ಯ ಹಾಗೂ ವಕ್ಫ್‌ ಆಸ್ತಿಗಳ ಬಗ್ಗೆ ವಿವಾದ ಬಂದಾಗ ಅದು ನ್ಯಾಯಾಲಯದಲ್ಲಿಯೇ ತೀರ್ಮಾನ ಆಗಬೇಕು ಎಂಬ ಪ್ರಮುಖ ಶಿಫಾರಸುಗಳನ್ನು ಸಾಚಾರ್‌ ಕಮಿಟಿಯು ಮಾಡಿತ್ತು. ಪ್ರಧಾನಿ ಮೋದಿ ಅವರು ಈಗ ವಕ್ಫ್‌ ಬೋರ್ಡ್‌ನ ನಿಯಮಾವಳಿಗೆ ತಿದ್ದುಪಡಿ ತರುವ ಕಾರ್ಯ ಪ್ರಾರಂಭಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಬೆಂಬಲ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.