ADVERTISEMENT

ಆಧುನಿಕ ಶಿಕ್ಷಣದ ಜತೆ ಸಂಸ್ಕೃತಿ ಕಲಿಸಿ: ಶಾಸಕ ಸಿ.ಸಿ.ಪಾಟೀಲ

ಬಚಪನ್ ಪ್ಲೇ ಸ್ಕೂಲ್ ಉದ್ಘಾಟನೆ: ಶಾಸಕ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:52 IST
Last Updated 16 ಜೂನ್ 2024, 13:52 IST
ನರಗುಂದದಲ್ಲಿ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಡಿ ಆರಂಭವಾಗುತ್ತಿರುವ ಬಚಪನ್ ಪ್ಲೇ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು
ನರಗುಂದದಲ್ಲಿ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಡಿ ಆರಂಭವಾಗುತ್ತಿರುವ ಬಚಪನ್ ಪ್ಲೇ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು   

ನರಗುಂದ: ‘ಶಿಕ್ಷಣವು ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಸಮರ್ಥವಾಗಿ ಪಡೆಯಬೇಕು. ಬಾಲ್ಯದಿಂದ ಅಂತಿಮ ಹಂತದವರೆಗೂ ಶಿಕ್ಷಣದ ಜೊತೆಗೆ ದೇಶಿ ಸಂಸ್ಕೃತಿ ಬೋಧಿಸಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಗಾಂಧಿ ಚೌಕ ಬಳಿ ಭಾನುವಾರ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಡಿ ಆರಂಭವಾಗುತ್ತಿರುವ ಬಚಪನ್ ಪ್ಲೇ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಶಿಕ್ಷಣ ಪದ್ಧತಿಯಲ್ಲಿ ಆಧುನಿಕತೆಯನ್ನು ಬೆಳೆಸಿಕೊಳ್ಳುವ ದಾವಂತದಲ್ಲಿ ಮಕ್ಕಳಿಗೆ ನಮ್ಮ ಮೂಲ ಸಂಸ್ಕೃತಿಯನ್ನು ರೂಢಿಸದೇ, ಪಾಶ್ಚಾತ್ಯ ಸಂಸ್ಕೃತಿ ಮೂಡಿಸುವಂತಾಗಬಾರದು. ಮಗುವಿನ ಆಸಕ್ತಿ ಅರಿತು ಕಲಿಸಬೇಕು. ಒತ್ತಡ ಹೇರದೇ ಮಗುವಿನ ಮಾತೃ ಭಾಷೆಯಲ್ಲೇ ಕಲಿಸಬೇಕು. ಬಾಲ್ಯದಲ್ಲೇ ಅಕ್ಷರದ ಭದ್ರ ಬುನಾದಿ ಹಾಕಬೇಕು’ ಎಂದರು.

ADVERTISEMENT

ಅಂತರರಾಷ್ಟ್ರೀಯ ಸಂಸ್ಥೆಯ ಬಚಪನ್ ಶಾಖೆ ನರಗುಂದದಲ್ಲಿ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಬಚಪನ್ ಸಂಸ್ಥೆ ಕೊಡುಗೆಯಾಗಿ ನೀಡಲಿ’ ಎಂದು ಶಾಸಕ ಪಾಟೀಲ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ ಮಾತನಾಡಿ, ‘ಭಾರತವು ಅಧ್ಯಾತ್ಮಿಕ ತಳಹದಿ ಹೊಂದಿದೆ. ಶಿಕ್ಷಣದಲ್ಲಿ ಅಧ್ಯಾತ್ಮ, ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳಬೇಕು. ಬುದ್ಧಿವಂತಿಕೆಯ ಜೊತೆ ಹೃದಯವಂತಿಕೆಯಿಂದ ಶಿಕ್ಷಕರು ಕಲಿಸಬೇಕು’ ಎಂದರು.

ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪವನ ಗುಜಮಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬಚಪನ್ ಪ್ಲೇ ಸ್ಕೂಲ್ ಕಲಿಕಾ ಚಟುವಟಿಕೆಯಿಂದ ಕೂಡಿದೆ. ಮನೆಯ ಸಂಸ್ಕಾರದ ಜೊತೆ ತಂತ್ರಜ್ಞಾನ, ದೇಸಿ ಸಂಸ್ಕೃತಿಯ ಶಿಕ್ಷಣ ಇಲ್ಲಿ ನೀಡಲಾಗುವುದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಮಾತನಾಡಿ, ‘ಆರಂಭದಲ್ಲಿಯೇ ಮಗುವಿಗೆ ಉತ್ತಮ ಮೌಲ್ಯಯುತ ಶಿಕ್ಷಣ ನೀಡಬೇಕು. ಅದು ಈ ಶಾಲೆಯಿಂದ ಸಾಕಾರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಗುಜಮಾಗಡಿ, ಮುಖ್ಯ ಶಿಕ್ಷಕಿ ಪ್ರಿಯಾಂಕಾ ಗುಜಮಾಗಡಿ, ಪ್ರಿಯಾಂಕಾ ಬಾಲಾಜಿ, ಬಚಪನ್ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಇದ್ದರು.

ನರಗುಂದದಲ್ಲಿ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಡಿ ಆರಂಭವಾದ ಬಚಪನ್ ಪ್ಲೇ ಸ್ಕೂಲ್ ಉದ್ಘಾಟನೆಯನ್ನು ಶಾಸಕ ಸಿ.ಸಿ.ಪಾಟೀಲ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.