ADVERTISEMENT

ಗದಗ: ಆಲಾಪ ನಿಲ್ಲಿಸಿದ ‘ಉದಯರಾಗ ಸಂಧ್ಯಾರಾಗ’

ಕಾರ್ಯಕ್ರಮಕ್ಕೆ ನಿರ್ದಿಷ್ಟ ಅನುದಾನವೇ ಇಲ್ಲ; ಕಲಾವಿದರ ಗೌರವಧನ ಬಾಕಿ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 25 ಜೂನ್ 2024, 5:29 IST
Last Updated 25 ಜೂನ್ 2024, 5:29 IST
ವೈಶಾಲಿ ಎಂ.ಎಲ್‌.
ವೈಶಾಲಿ ಎಂ.ಎಲ್‌.   

ಗದಗ: ಅವಳಿ ನಗರದ ಉದ್ಯಾನಗಳಿಗೆ ಬರುವ ವಾಯುವಿಹಾರಿಗಳಿಗೆ ಪ್ರತಿ ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಸಂಗೀತದ ರಸದೌತಣ ಉಣಬಡಿಸುತ್ತಿದ್ದ ‘ಉದ್ಯಾನದಲ್ಲಿ ಉದಯರಾಗ, ಸಂಧ್ಯಾರಾಗ’ ಸಂಗೀತ ಕಾರ್ಯಕ್ರಮಕ್ಕೆ ಮತ್ತೆ ಗ್ರಹಣ ಬಡಿದಿದ್ದು, ಕಲಾವಿದರಿಗೆ ಗೌರವಧನ ಕೊಡಲು ನಿರ್ದಿಷ್ಟ ಅನುದಾನವೇ ಇಲ್ಲವಾದ್ದರಿಂದ ಕಾರ್ಯಕ್ರಮ ನಿಂತುಹೋಗಿದೆ.

‘‘ಸಂಗೀತ ಕ್ಷೇತ್ರದಲ್ಲಿ ಗದಗ ಜಿಲ್ಲೆಗೆ ದೊಡ್ಡ ಮಟ್ಟದ ಹೆಸರಿದೆ. ಸಂಗೀತ ಕಲಾವಿದರು ಸಭಾ ಕಾರ್ಯಕ್ರಮಗಳಲ್ಲಿ ಪ್ರಾರ್ಥನೆ ಹಾಡುವುದಕ್ಕಷ್ಟೇ ಸೀಮಿತಗೊಳ್ಳಬಾರದು. ಇಲ್ಲಿನ ಉದಯೋನ್ಮುಖ ಸಂಗೀತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ‘ಉದ್ಯಾನದಲ್ಲಿ ಉದಯರಾಗ, ಸಂಧ್ಯಾರಾಗ’ ಕಾರ್ಯಕ್ರಮ ಪ್ರಾರಂಭಿಸಲಾಗಿದೆ’’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರು ವರ್ಷದ ಹಿಂದೆ ಈ ಕಾರ್ಯಕ್ರಮ ಉದ್ಘಾಟಿಸಿ, ಮೇಲಿನಂತೆ ಹೇಳಿದ್ದರು.

ಅಲ್ಲಿಂದ ಮುಂದೆ, ಒಂದು ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದರು. ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಉದ್ಯಾನದಲ್ಲಿ ಕೇಳಿಬರುತ್ತಿದ್ದ ಸುಗಮ ಸಂಗೀತ, ಜಾನಪದ ಸಂಗೀತ, ಭಾವಗೀತೆ ಹೀಗೆ ವೈವಿಧ್ಯಮಯ ಸಂಗೀತವನ್ನು ಎದೆಗಿಳಿಸಿಕೊಂಡು ಉಲ್ಲಸಿತರಾಗುತ್ತಿದ್ದರು. ಆದರೆ, ವಾರಾಂತ್ಯದಲ್ಲಿ ವರ್ಷಪೂರ್ತಿ ಸಂಗೀತ ಕಾರ್ಯಕ್ರಮ ನೀಡಿದ ಯಾವೊಬ್ಬ ಕಲಾವಿದರಿಗೂ ಈವರೆಗೆ ಗೌರವಧನ ಪಾವತಿಯಾಗಿಲ್ಲ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮ; ನೀತಿ ಸಂಹಿತೆ ಮುಗಿದ ನಂತರವೂ ಪ್ರಾರಂಭಗೊಳ್ಳಲಿಲ್ಲ.

ADVERTISEMENT

‘‘ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಆಸಕ್ತಿ ಮೇರೆಗೆ ‘ಉದ್ಯಾನದಲ್ಲಿ ಉದಯರಾಗ, ಸಂಧ್ಯಾರಾಗ’ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿ, ವರ್ಷದ ಹಿಂದೆ ಕಾರ್ಯಕ್ರಮ ಉದ್ಘಾಟಿಸಲಾಗಿತ್ತು. ಅದನ್ನು ಒಂದು ವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮುಂದುವರಿಸಲಾಗಿತ್ತು. ಆದರೆ, ಈವರೆಗೆ ಕಾರ್ಯಕ್ರಮ ನೀಡಿದ ಕಲಾವಿದರಿಗೆ ಗೌರವಧನ ಬಾಕಿ ಉಳಿದಿದೆ’’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಹೇಳಿದರು.

‘ಜಿಲ್ಲಾಧಿಕಾರಿ ಮೂಲಕ ಎರಡು, ಮೂರು ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಲಾಗಿದ್ದು, ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು. ಅವರು ಇಲಾಖೆ ಸಚಿವರೊಂದಿಗೆ ಮಾತನಾಡಿ ಹಣ ಬಿಡುಗಡೆ ಮಾಡಿಸಿದರೆ ಕಲಾವಿದರಿಗೆ ಗೌರವಧನ ಕೊಡಲಾಗುವುದು. ಜತೆಗೆ ಈ ಕಾರ್ಯಕ್ರಮಕ್ಕೆಂದೇ ವಿಶೇಷ ಅನುದಾನ ಕೊಡಿಸಿದರೆ ಕಾರ್ಯಕ್ರಮವನ್ನು ಮತ್ತೇ ಮುಂದುವರಿಸುತ್ತೇವೆ’ ಎಂದು ಹೇಳಿದರು.

ಎಲೆಮರೆ ಕಾಯಿಯಂತಿರುವ ಜಿಲ್ಲೆಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸುವುದರ ಜತೆಗೆ ಬಡ ಕಲಾವಿದರ ಆರ್ಥಿಕ ಸಬಲೀಕರಣಕ್ಕೆ ‘ಉದಯರಾಗ, ಸಂಧ್ಯಾರಾಗ’ ಕಾರ್ಯಕ್ರಮ ಸಹಕಾರಿಯಾಗಿತ್ತು. ಈ ಹಿಂದೆ ಕಾರ್ಯಕ್ರಮ ನೀಡಿದವರಿಗೆ ಗೌರವಧನ ಬಿಡುಗಡೆ ಮಾಡುವುದರ ಜತೆಗೆ; ವಿಶೇಷ ಅನುದಾನ ಮೀಸಲಿರಿಸುವ ಮೂಲಕ ಕಾರ್ಯಕ್ರಮವನ್ನು ಮತ್ತೇ ಪ್ರಾರಂಭಿಸಬೇಕು ಎಂದು ಕಲಾವಿದರು ಆಗ್ರಹಿಸಿದ್ದಾರೆ.

ವೀರಯ್ಯಸ್ವಾಮಿ ಹಿರೇಮಠ
ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಕಾರಣ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಮುಂದುವರಿಸುವ ಕುರಿತು ಸಭೆ ನಡೆಸಿ ತೀರ್ಮಾನಿಸಲಾಗುವುದು. ಗೌರವಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ವೈಶಾಲಿ ಎಂ.ಎಲ್‌. ಜಿಲ್ಲಾಧಿಕಾರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ ಅನುದಾನ ಇಟ್ಟಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಮುಂದುವರಿಯುತ್ತೇವೆ.
ವೀರಯ್ಯಸ್ವಾಮಿ ಹಿರೇಮಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.