ADVERTISEMENT

ಸನಾತನ ಧರ್ಮ ಅಳಿಸಲು ಪ್ರಯತ್ನಿಸಿದವರು ಅಳಿದು ಹೋಗಿದ್ದಾರೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:26 IST
Last Updated 9 ಅಕ್ಟೋಬರ್ 2024, 16:26 IST
ಸಿ.ಟಿ.ರವಿ
ಸಿ.ಟಿ.ರವಿ   

ನರೇಗಲ್ (ಗದಗ ಜಿಲ್ಲೆ): ‘ಚುನಾವಣೆ ಸಂದರ್ಭದಲ್ಲಿ ಕೆಲವು ರಾಜಕೀಯ ನಾಯಕರು ಸನಾತನ ಧರ್ಮವನ್ನು ಅಳಿಸಿ ಹಾಕುವುದೇ ನಮ್ಮ ಉದ್ದೇಶ ಎನ್ನುವ ರೀತಿಯಲ್ಲಿ ಮಾತನಾಡಿದರು. ಅಳಿಸಿ ಹಾಕುವ ಪ್ರಯತ್ನ ಮಾಡಿದವರು ಅಳಿದು ಹೋಗಿದ್ದಾರೆ. ಸನಾತನ ಧರ್ಮ ಉಳಿದಿದೆ, ಬೆಳೆದಿದೆ ಮತ್ತು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದೆ. ಯಾಕೆಂದರೆ ಸನಾತನ ಧರ್ಮ ಜಗತ್ತಿನ ಕಲ್ಯಾಣವನ್ನು ಬಯಸಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಎಲ್ಲರನ್ನೂ ಸಮಾನವಾಗಿ ಕಾಣುವುದು ರಾಜಧರ್ಮ. ಜಾತಿ–ಮತ ಮೀರಿ ದೇಶಕ್ಕಾಗಿ ಒಂದಾಗಿ ನಿಲ್ಲುವುದು ರಾಷ್ಟ್ರಧರ್ಮವಾಗಿದೆ. ಆದರೆ, ನಮ್ಮಲ್ಲಿ ಕೆಲವರು ಭಾರತ-ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ನಡೆದಾಗ ಅಪ್ಪಿತಪ್ಪಿ ಪಾಕಿಸ್ತಾನ ಗೆದ್ದಾಗ ಪಟಾಕಿ ಹೊಡೆಯುತ್ತಾರೆ. ಕೆಲವರು, ‘ನಾನು ವಂದೇ ಮಾತರಂ ಅನ್ನಲ್ಲ’, ‘ಭಾರತ್‌ ಮಾತಾ ಕೀ ಜೈ ಕೂಗಲ್ಲ’ ಎಂದು ಹೇಳುತ್ತಾರೆ. ಇದು ರಾಷ್ಟ್ರಘಾತಕವಾಗುತ್ತದೆ’ ಎಂದರು.

ADVERTISEMENT

‘ಯಾರು ರಾಷ್ಟ್ರಧರ್ಮವನ್ನು ಅಳವಡಿಸಿಕೊಳ್ಳುವುದಿಲ್ಲವೋ ಅವರು ಭಾರತ ತೇರೆ ತುಕಡೆ ಹೊಂಗೆ ಎನ್ನುತ್ತಾರೆ. ಆದ್ದರಿಂದ ಇರುವ ಎಲ್ಲಾ ಅಡ್ಡಿಯನ್ನು ದೂರಗೊಳಿಸಿ ಭಾರತವನ್ನು ವಿಶ್ವಗುರುವಾಗಿ ಕಾಣಬೇಕು’ ಎಂದರು.

‘ಜಾತಿ ಮತ ಮೀರಿದ್ದು ಸನಾತನ ಧರ್ಮ. ದಯೆ ಇರಬೇಕು ಸಕಲ ಜೀವಾತ್ಮಗಳಿಗೆ ಎಂದು ಬಸವಣ್ಣನವರು ಬಹಳ ಸರಳವಾಗಿ ಹೇಳಿದ್ದಾರೆ. ಸನಾತನ ಧರ್ಮಕ್ಕೆ ಚೌಕಟ್ಟಿಲ್ಲ ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸಿದ್ದು ಸನಾತನ ಧರ್ಮವಾಗಿದೆ. ಸಂಕುಚಿತ ಮನೋಭಾವದಿಂದ ನೋಡುವಂತ ಜನ ಸನಾತನ ಧರ್ಮವನ್ನೇ ತಪ್ಪಾಗಿ ತಿಳಿದು ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ’ ಎಂದರು.

‘ವ್ಯಾವಹಾರಿಕವಾಗಿ ಜಾತಿ ಬಳಕೆಗೆ ಬಂದಿರಬಹುದು. ಆದರೆ ಭಾರತ ನೀತಿಗೆ ಆದ್ಯತೆ ಕೊಟ್ಟಂತಹ ಸಂಸ್ಕೃತಿಯನ್ನು ಹೊಂದಿದೆ. ಎಪಿಜೆ ಅಬ್ದುಲ್‌ ಕಲಾಂ ಅವರು ನಡೆದುಕೊಂಡ ಬದುಕಿನ ನೀತಿಯ ಕಾರಣಕ್ಕೆ ಎಲ್ಲರೂ ಗೌರವಿಸುತ್ತಾರೆ. ಅದೇ ರೀತಿ ರಾಮ, ಸತ್ಯಹರಿಶ್ಚಂದ್ರರನ್ನು ಇಂದಿಗೂ ಗೌರವಿಸುತ್ತೇವೆ. ಅದೇರೀತಿ, ನಾವು ನೀತಿಯ ದಾರಿಯಲ್ಲಿ ನಡೆಯಬೇಕು. ಆದರೆ ಇವತ್ತು ನೀತಿ ಬಿಟ್ಟು ಜಾತಿ ಹಿಡಿದಿದ್ದೇವೆ. ತಪ್ಪು ಮಾಡಿದ ವ್ಯಕ್ತಿ ನಮ್ಮ ಜಾತಿಯವನು ಇದ್ದರೆ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.