ADVERTISEMENT

ವಿದ್ಯುತ್‌ ಅವಘಡದಲ್ಲಿ ಮೂವರು ಸಾವು: ಶೋಕ ಸಾಗರದಲ್ಲಿ ಮುಳುಗಿದ ಗ್ರಾಮಸ್ಥರು

ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಮೂವರು ಯುವಕರು

ನಾಗರಾಜ ಹಣಗಿ
Published 9 ಜನವರಿ 2024, 5:36 IST
Last Updated 9 ಜನವರಿ 2024, 5:36 IST
ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಸೂರಣಗಿ ಗ್ರಾಮದ ಯುವಕರನ್ನು ಸಾಮೂಹಿವಾಗಿ ಅಂತ್ಯಸಂಸ್ಕಾರ ಮಾಡಲಾಯಿತು
ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಸೂರಣಗಿ ಗ್ರಾಮದ ಯುವಕರನ್ನು ಸಾಮೂಹಿವಾಗಿ ಅಂತ್ಯಸಂಸ್ಕಾರ ಮಾಡಲಾಯಿತು   

ಲಕ್ಷ್ಮೇಶ್ವರ: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನವನ್ನು ಆಚರಿಸುವ ತರಾತುರಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮವಾಗಿ ಗ್ರಾಮದ ಮೂವರು ಯುವಕರು ಮೃತಪಟ್ಟು ಮತ್ತೆ ಮೂವರು ಯುವಕರು ಗಂಭೀರವಾಗಿ ಗಾಯಗೊಂಡ ಕಾರಣ ತಾಲ್ಲೂಕಿನ ಸೂರಣಗಿ ಗ್ರಾಮ ದುಃಖದ ಮಡುವಿನಲ್ಲಿ ಮುಳುಗಿತ್ತು. ಇಡೀ ಊರಲ್ಲಿ ಸೋಮವಾರ ನೀರವ ಮೌನ ಆವರಿಸಿತ್ತು.

ಗ್ರಾಮದ ಬಿ.ಆರ್. ಅಂಬೇಡ್ಕರ್ ನಗರದ ಯುವಕರು ಪ್ರತಿವರ್ಷ ಯಶ್ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದರು. ಅದರಂತೆ ಈ ವರ್ಷ ಕೂಡ ಜನ್ಮದಿನ ಆಚರಿಸಲು ಓಣಿಯ ಯುವಕರು ಯಶ್ ಅವರ ಬೃಹತ್ ಕಟೌಟ್ ಮಾಡಿಸಿದ್ದರು. ಕಟೌಟ್ ನಿಲ್ಲಿಸುವಾಗ ದುರ್ಘಟನೆ ಸಂಭವಿಸಿ ಯಶ್‌ ಅಭಿಮಾನಿಗಳಾದ ಮುರಳಿ ನಡುವಿನಮನೆ (20), ನವೀನ ಗಾಜಿ (19) ಹಾಗೂ ಹನುಮಂತಪ್ಪ ಹರಿಜನ (21) ಮೃತಪಟ್ಟರು. ಈ ಘಟನೆ ನಂತರ ಭಾನುವಾರ ರಾತ್ರಿಯಿಂದಲೇ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣಗೊಂಡಿತ್ತು. ಯುವಕರ ಸಾವಿಗೆ ಎಲ್ಲರ ಮನ ಮಿಡಿಯಿತು.

ಮರಣೋತ್ತರ ಪರೀಕ್ಷೆ ನಂತರ ಯುವಕರ ಮೃತದೇಹಗಳನ್ನು ಊರಿಗೆ ತರುತ್ತಿದ್ದಂತೆ ಗ್ರಾಮದ ಜನರ ಕಣ್ಣಾಲಿಗಳು ತುಂಬಿ ಬಂದವು. ಅದರಲ್ಲೂ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಮೃತ ಯುವಕರೆಲ್ಲರೂ ಕೂಲಿ ಕೆಲಸ ಮಾಡುತ್ತಿದ್ದರು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಮುರಳಿ ನಡುವಿನಮನಿ ತಂದೆ ತಾಯಿಯ ಸಂಕಟ ನೆರೆದಿದ್ದವರಲ್ಲಿ ಕಣ್ಣೀರು ತರಿಸಿತ್ತಲ್ಲದೆ ಆತನ ಸಹೋದರಿಯರ ಗೋಳಾಟ ಗ್ರಾಮಸ್ಥರನ್ನೂ ದುಃಖದ ಮಡುವಿಗೆ ತಳ್ಳಿತು. ಓಣಿಯ ಮಹಿಳೆಯರು ಗುಂಪು ಗುಂಪಾಗಿ ಕುಳಿತು ಯುವಕರನ್ನು ನೆನೆದು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಮನಕಲಕುವಂತೆ ಮಾಡಿತು.

ಅಂತ್ಯಕ್ರಿಯೆಗಾಗಿ ದೇಹಗಳನ್ನು ಮೆರವಣಿಗೆಯೊಂದಿಗೆ ಸ್ಮಶಾನಕ್ಕೆ ತರಲಾಯಿತು. ಅಲ್ಲಿ ಯುವಕರ ಪಾಲಕರು ಮಕ್ಕಳ ಮೃತ ದೇಹಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಿದ್ದರು. ಅವರನ್ನು ಸಮಾಧಾನಪಡಿಸಲು ಗ್ರಾಮಸ್ಥರು ಸಾಕಷ್ಟು ಪ್ರಯತ್ನಪಟ್ಟರು. ಕೊನೆಗೆ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಗ್ರಾಮದಲ್ಲಿ ನಡೆದ ಈ ದುರ್ಘಟನೆಗೆ ಎಲ್ಲರೂ ಮಮ್ಮಲ ಮರುಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಯುವಕರ ಮೃತ ದೇಹಗಳ ಮೆರವಣಿಗೆ

‘ನಮ್ಮೂರಲ್ಲಿ ಇಂಥ ಘಟನೆ ಎಂದೂ ನಡೆದಿರಲಿಲ್ಲ. ಇದು ನಮಗೆ ಬಹಳಷ್ಟು ದುಃಖ ತಂದಿದೆ’ ಎಂದು ಓಣಿಯ ಮುಖಂಡ ಕೋಟೆಪ್ಪ ವರ್ದಿ ಹೇಳಿದರು.

‘ಬೆಳೆದು ದೊಡ್ಡವರಾಗಿ ಕುಟುಂಬ ನಿರ್ವಹಣೆ, ತಂದೆ ತಾಯಿ ಸಾಕಬೇಕಾಗಿದ್ದ ಮಕ್ಕಳು ಅವರ ಮುಂದೆಯೇ ಸಾವಿಗೀಡಾಗಿದ್ದು ಬಹಳ ನೋವು’ ಎಂದು ವಿಜಯಕುಮಾರ ಹಳ್ಳಿ ಸಂಕಟ ತೋಡಿಕೊಂಡರು.

ಮಗನನ್ನು ಕಳೆದುಕೊಂಡು ರೋಧಿಸುತ್ತಿರುವ ತಂದೆ ತಾಯಿ

ಜಿಮ್ಸ್‌ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಟ ಯಶ್ :

ನಟ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡು ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ನಟ ಯಶ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುನಾಥ ಹರಿಜನ ದೀಪಕ ಹರಿಜನ ಪ್ರಕಾಶ ಮ್ಯಾಗೇರಿ ಅವರನ್ನು ಭೇಟಿ ಮಾಡಿದ ಯಶ್ ಶೀಘ್ರ ಗುಣಮುಖರಾಗುವಂತೆ ತಿಳಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಂತರ ಹುಬ್ಬಳ್ಳಿಯತ್ತ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.