ಗದಗ: ಕರ್ನಾಟಕದ ವಿರಕ್ತ ಪರಂಪರೆಯ ಹೆಬ್ಬಾಗಿಲು ವಿಶ್ವ ತತ್ವಜ್ಞಾನಿಗಳ ಸಾಲಿನಲ್ಲಿ ನಿಲ್ಲುವ ಯೋಗ್ಯತೆಯುಳ್ಳ ಅಲ್ಲಮ ಪ್ರಭುವಿನ ನೇತೃತ್ವದಲ್ಲಿ ಪ್ರಾರಂಭವಾದ ಸಮಾಜೋ ಧಾರ್ಮಿಕ ಆಂದೋಲನವು, ಕಾಲದಿಂದ ಕಾಲಕ್ಕೆ ತನ್ನ ಸ್ವರೂಪದಲ್ಲಿ ಬದಲಾದರೂ ತಾತ್ವಿಕ ನೆಲೆಯಲ್ಲಿ ಮಾತ್ರ ಯಾವ ರಾಜಿಯನ್ನೂ ಮಾಡಿಕೊಂಡಿಲ್ಲ. ಅಲ್ಲಮಪ್ರಭು ಪೀಠ ಪರಂಪರೆಯ 19ನೇ ಯತಿಗಳು ಎಡೆಯೂರು ಸಿದ್ಧಲಿಂಗರು. ಅವರ ನಂತರ ಪೀಠಾಧಿಪತಿಯಾಗಿ ಬಂದವರು ಸಿದ್ಧಲಿಂಗ ಸ್ವಾಮೀಜಿ. ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರು, ‘ವಿರಕ್ತ ಪರಂಪರೆಯ ಆ ತುದಿ ಕಲ್ಯಾಣದ ಅಲ್ಲಮಪ್ರಭು. ಈ ತುದಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ’ ಎಂದು ಹೇಳಿದ್ದರು.
ತಾಯಿಯಾದವಳು ಹೊಟ್ಟೆ, ನೆತ್ತಿ ನೋಡುವಳು’ ಎನ್ನುವ ಮಾತಿನಂತೆ ‘ತಾಯಿ’ ಪದದ ಅನ್ವರ್ಥದಂತಿದ್ದ ತೋಂಟದ ಶ್ರೀಗಳು ಭಕ್ತ ಸಮೂಹಕ್ಕೆ ನಿಜಧರ್ಮದ ‘ಅನ್ನಪೂರ್ಣೆ’ ಆಗಿದ್ದರು. 1978ರಲ್ಲಿ ಆರಂಭವಾದ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಠೇವಣಿ ಹಣದ ಆಡಳಿತ ಟ್ರಸ್ಟ್‌ನಿಂದ ಶ್ರೀಗಳ ಮಾರ್ಗದರ್ಶನದಲ್ಲಿ ಎಡೆಯೂರು ಸಿದ್ಧಲಿಂಗ ಶಿವಯೋಗಿಗಳ ಗದ್ದುಗೆಯ ಹಿಂಭಾಗದ ಪ್ರದೇಶದಲ್ಲಿ ಪ್ರತಿನಿತ್ಯ ದಾಸೋಹ ಪ್ರಾರಂಭವಾಯಿತು. ಮಠಕ್ಕೆ ಭಕ್ತರು ನೀಡಿದ ದೇಣಿಗೆ ಹಣವನ್ನು ಪ್ರಸಾದ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಎಡೆಯೂರು ಸಿದ್ಧಲಿಂಗ ಶ್ರೀಗಳ ತಪೋ ಭೂಮಿ ಕಗ್ಗೆರೆಯಲ್ಲಿ ನಿತ್ಯ ದಾಸೋಹ ನಡೆಯುತ್ತಿದೆ. ಗದುಗಿನ ತೋಂಟದಾರ್ಯ ಮಠದ ಪ್ರಸಾದ ನಿಲಯ, ರಾಮೇಶ್ವರ ಪ್ರಸಾದ ನಿಲಯ,ಚಿಕ್ಕಪಡಸಲಗಿ, ಶಿರೋಳ, ಡಂಬಳ, ಅಣ್ಣಿಗೇರಿ, ರುದ್ನೂರು, ಮುಂಡರಗಿ ಪ್ರಸಾದ ನಿಲಯ ಹಾಗೂ ಹಾವೇರಿಯಲ್ಲಿ ಶಾಂತವೀರ ಪಟ್ಟಾಧ್ಯಕ್ಷರ ಪ್ರಸಾದ ನಿಲಯದಲ್ಲಿ ಪ್ರತಿದಿನ ದಾಸೋಹ ನೆಡಯುತ್ತಿರುವುದು ಮಠದ ವಿಶಿಷ್ಟತೆಯನ್ನು ತೋರುತ್ತದೆ.
ವೈಚಾರಿಕ ಕ್ರಾಂತಿ: ತೋಂಟದಾರ್ಯ ಮಠದ ಜಾತ್ರೆಯು ವೈಚಾರಿಕೆ ಕ್ರಾಂತಿಯನ್ನೇ ಉಂಟು ಮಾಡಿದೆ.ಈ ಜಾತ್ರೆಯಲ್ಲಿ ತೇರಿಗೆ ಅನ್ನ ಸುರಿಯುದಿಲ್ಲ. ಸ್ವಾಮೀಜಿಯ ಅಡ್ಡಪಲ್ಲಕ್ಕಿ ಸೇವೆ ನಡೆಯುವುದಿಲ್ಲ. ಹಿಂದೆ ತೇರು ಸಾಗುವಷ್ಟು ದೂರ ಜನಸಾಮಾನ್ಯರ ಜತೆಗೆ ಕಾಲ್ನಡಿಗೆಯಲ್ಲೇ ಸ್ವಾಮೀಜಿ ಸಾಗುತ್ತಾರೆ.
‘ಮನುಷ್ಯ ಮನುಷ್ಯನನ್ನು ಹೊತ್ತುಕೊಂಡು ನಡೆಯುವುದು ಮಾನವೀಯತೆ ವಿರೋಧಿ‘ ಎಂದು ತೋಂಟದ ಶ್ರೀಗಳು ನಂಬಿದ್ದರು. ರಥೋತ್ಸವದ ನಂತರ ಸಾಹಿತ್ಯ, ಸಂಗೀತ, ಲಲಿತಕಲೆಗಳ ಅಭೂತಪೂರ್ವ ಸಂಗಮವಾಗಿ ಮಠ ಕಂಗೊಳಿಸುತ್ತಿತ್ತು. ವಿವಿಧ ಜಿಲ್ಲೆ, ನೆರೆಯ ರಾಜ್ಯಗಳಿಂದಲೂ ಸಾಹಿತಿಗಳು, ಕಲಾವಿದರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ತೋಂಟದಾರ್ಯ ಮಠದ ಜಾತ್ರೆಯು ‘ನಮ್ಮೂರ ಜಾತ್ರೆ’ ಎಂದೇ ಜನಪ್ರಿಯವಾಗಿತ್ತು. ಜಾತ್ರೆಯನ್ನು ಧಾರ್ಮಿಕ ಕಾರ್ಯಕ್ರಮಗಳ ಚೌಕಟ್ಟಿನಿಂದ ಹೊರತಂದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಶವನ್ನು ತೋಂಟದ ಶ್ರೀಗಳು ನೀಡಿದ್ದರು. ಜಾತ್ರೆಯನ್ನು ಜನಮುಖಿಗೊಳಿಸಿದ್ದು, ಎಲ್ಲ ಧರ್ಮದವರು ಭಾಗವಹಿಸುವಂತೆ ಮಾಡಿದ್ದು ಅವರ ಅಭೂತಪೂರ್ವ ಸಾಧನೆ. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವ
ಬದಲು ಬಡಮಕ್ಕಳಿಗೆ ಹಾಲುಣಿಸುವುದು, ಪವಾಡ ಬಯಲು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಜನ ಮಾನಸದಲ್ಲಿ ಶ್ರೀಗಳು ವೈಚಾರಿಕ ಕ್ರಾಂತಿ ಮೂಡಲು ಶ್ರಮಿಸಿದ್ದರು.
ಕನ್ನಡ ನಾಡು– ನುಡಿಗೆ ಸೇವೆ: ಕನ್ನಡ ನಾಡು, ನುಡಿ, ಜಲ, ಭಾಷೆಗೆ ಗಂಡಾಂತರ ಎದುರಾದಾಗಲೆಲ್ಲ ಅದನ್ನು ಪ್ರತಿಭಟಿಸಿ, ಜನ ಜಾಗೃತಿ ಮೂಡಿಸಿದವರು ತೋಂಟದ ಶ್ರೀಗಳು. ಗೋಕಾಕ ಚಳುವಳಿಯಲ್ಲಿ ತೋಂಟದ ಶ್ರೀಗಳ ನಿರಂತರ ಹೋರಾಟ ಸ್ಮರಣೀಯ. ಶ್ರೀಗಳ ನೇತೃತ್ವದಲ್ಲಿ ಗೋಕಾರ ವರದಿ ಜಾರಿಗಾಗಿ 1982ರಲ್ಲಿ ಸಿಂದಗಿಯಲ್ಲಿ ಮೊದಲ ಬಹಿರಂಗ ಉಪವಾಸ ಸತ್ಯಾಗ್ರಹ ನಡೆಯಿತು. ಶ್ರೀಗಳ ದಿಟ್ಟಿ ನಿರ್ಧಾರ ಫಲವಾಗಿ ನೂರಾರು ಹೋರಾಟಗಾರರು ಚಳುವಳಿಯಲ್ಲಿ ಧುಮುಕಿದರು. ಅನೇಕರು ಜೈಲು ಪಾಲಾಗಿದ ನಂತರ ಹೋರಾಟಕ್ಕೆ ಜಯ ಲಭಿಸಿದ್ದು ಇತಿಹಾಸ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ, ನಂಜುಂಡಪ್ಪ ವರದಿ ಅನುಷ್ಠಾನಗೊಳಿಸುವಂತೆ, ಬೆಳಗಾವಿ ಗಡಿ ಸಮಸ್ಯೆ ಪರಿಹಾರಕ್ಕಾಗಿ, ಪೋಸ್ಕೊ ವಿರುದ್ಧದ ಗಟ್ಟಿಯಾದ ಹೋರಾಟ ಹಾಗೂ ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ತೋಂಟದ ಶ್ರೀಗಳ ನೇತೃತ್ವದಲ್ಲಿ ಪಟ್ಟು ಬಿಡದೆ ನಡೆದ ನಿರಂತರ ಹೋರಾಟ, ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.