ಗದಗ: ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿ ಜನ್ಮದಿನವಾದ ಫೆಬ್ರುವರಿ 21 ಅನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗದುಗಿನ ತೋಂಟದಾರ್ಯ ಮಠದಲ್ಲಿ ನಿರ್ಮಾಣಗೊಂಡಿರುವ ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಐಕ್ಯಮಂಟಪವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶ್ರೀಗಳ ಐಕ್ಯ ಮಂಟಪವನ್ನು ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ನಾನು ಮುಖ್ಯಮಮತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಬದಲಾಗಿ ಭಕ್ತನಾಗಿ ಬಂದಿದ್ದೇನೆ ಎಂದರು.
ಸ್ವಾಮಿ ವಿವೇಕಾನಂದರ ಮಾತಿನಂತೆ 'ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ಸಾಧಕ. ಶ್ರೀಗಳು ನಮ್ಮೊಂದಿಗೆ ಬದುಕಿದ್ದು, ಅವರ ಒಡನಾಟ ಸಿಕ್ಕಿದ್ದು ನಮ್ಮ ಪುಣ್ಯ. ತೋಂಟದಾರ್ಯ ಮಠದೊಂದಿಗೆ 35 ವರ್ಷದ ಒಡನಾಟವಿದ್ದು, ನನ್ನ ಮೇಲೆ ಲಿಂಗೈಕ್ಯ ಹಿರಿಯ ಶ್ರೀಗಳ ಆಶೀರ್ವಾದವಿದೆ. ಅವರ ಐಕ್ಯ ಮಂಟಪ ನಮ್ಮೆಲ್ಲರ ಭಕ್ತಿಭಾವಗಳು ಐಕ್ಯಗೊಳ್ಳುವ ಕೇಂದ್ರವಾಗಿದೆ ಎಂದು ಹೇಳಿದರು.
ಫೆಬ್ರುವರಿ 21 ಅನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಬೇಕು ಎಂಬುದು ಶ್ರೀ ಮಠದ ಭಕ್ತರ ಬಹುದಿನಗಳ ಆಶಯವಾಗಿತ್ತು. ಈ ಸಂಬಂಧ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದಂದೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಆದೇಶಿಸಲಾಗುವುದು ಎಂದು ಹೇಳಿದ್ದು ಶ್ರೀಮಠದ ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.