ADVERTISEMENT

ನರೇಗಲ್ | ರಸ್ತೆಯಲ್ಲೇ ನಿಲ್ಲುವ ವಾಹನ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 13:48 IST
Last Updated 31 ಮೇ 2024, 13:48 IST
ನರೇಗಲ್‌ ಬಸ್‌ ನಿಲ್ದಾಣದಿಂದ ಗಜೇಂದ್ರಗಡ ಕಡೆಗೆ ಹೋಗುವಾಗ ರಸ್ತೆಯಲ್ಲಿ ನಿಂತ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗಿದೆ
ನರೇಗಲ್‌ ಬಸ್‌ ನಿಲ್ದಾಣದಿಂದ ಗಜೇಂದ್ರಗಡ ಕಡೆಗೆ ಹೋಗುವಾಗ ರಸ್ತೆಯಲ್ಲಿ ನಿಂತ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗಿದೆ   

ನರೇಗಲ್:‌ ಪಟ್ಟಣದ ಬಸ್‌ ನಿಲ್ದಾಣದಿಂದ ಗಜೇಂದ್ರಗಡ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಅಲ್ಲಿನ ಅಂಗಡಿಗಳ ಮಾಲೀಕರು ಬೆಳಿಗ್ಗೆ ಮತ್ತು ಸಂಜೆ ವೇಳೆ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಲು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಶರಣಪ್ಪ ಬಳಗೋಡ, ಕಿರಣಕುಮಾರ ಮಾರನಬಸರಿ, ಮಂಜುನಾಥ ಕುರ್ತಕೋಟಿ ಆಗ್ರಹಿಸಿದ್ದಾರೆ.

ಇಲ್ಲಿನ ರಸ್ತೆಯು ಮೊದಲೇ ಇಕ್ಕಟ್ಟಾಗಿರುವ ಕಾರಣ ಕೇವಲ ಒಂದು ವಾಹನ ನಿಂತರು ತೊಂದರೆ ಆಗುತ್ತದೆ. ಆದರೆ ಅಂಗಡಿ ಸಾಮಗ್ರಿಗಳನ್ನು ಇಳಿಸಲು ಗೂಡ್ಸ್‌ ವಾಹನಗಳನ್ನು, ಗೊಬ್ಬರ ಬೀಜ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್‌, ಟಾಟಾ ಏಸ್‌, ಟಂಟಂ ನಂತ ವಾಹನಗಳನ್ನು ಹಾಗೂ ಅಂಗಡಿಯ ವ್ಯಾಪರಕ್ಕೆ ಬರುವ ಕಾರ್‌ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಎರಡೂ ಬದಿಗೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಬಸ್‌, ದೂರದ ಊರಿಗೆ ಹೋಗುವ ಇತರೆ ವಾಹನಗಳು, ಶಾಲಾ ಕಾಲೇಜಿಗೆ ಹೋಗುವ ವಾಹನಗಳು ಹೋಗದಂತೆ ರಸ್ತೆ ಅಡ್ಡಲಾಗಿ ನಿಲ್ಲಿಸಲಾಗುತ್ತದೆ.

ಇದೊಂದು ಮುಖ್ಯ ರಸ್ತೆ ಆಗಿರುವ ಕಾರಣದಿಂದ ಇತರೆ ಪಟ್ಟಣಗಳಲ್ಲಿ ಮಾಡಿರುವ ನಿಯಮದಂತೆ ನಮ್ಮೂರಲ್ಲೂ ಅಳವಡಿಸಲು ಪೊಲೀಸ್‌ ಇಲಾಖೆಯವರು ಮುಂದಾಗಬೇಕು. ಅಂಗಡಿಗಳ ಮಾಲೀಕರಿಗೆ ಸಾಮಗ್ರಿಗಳನ್ನು ಲೋಡ್‌ ಮಾಡಲು, ಇಳಿಸಲು ಸಮಯ ನಿಗದಿ ಮಾಡಬೇಕು. ಕೇವಲ ಒಂದು ಬದಿಯಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವ ನಿಯಮ ಮಾಡಬೇಕು. ಇಲ್ಲವಾದರೆ ಸಂಚಾರಕ್ಕೆ ತುಂಬಾ ತೊಂದರೆ ಆಗಲಿದೆ. ಅಪಘಾತ ಸಂಭವಿಸುವ ಸಂದರ್ಭಗಳೂ ಇರುತ್ತವೆ. ಆದ್ದರಿಂದ ಎಲ್ಲಾ ಅಂಗಡಿಗಳ ಮಾಲೀಕರ ಸಭೆ ಕರೆದು ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಬಸ್‌ ನಿಲ್ದಾಣದ ಒಳಗೆ ಹಾಗೂ ಹೊರಗೆ ವಿಂಡ್‌ ಕಂಪನಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಅಲ್ಲಿನ ಬಸ್‌ ನಿಲ್ದಾಣದ ಹಿಂದುಗಡೆ ಕಾಯಿಪಲ್ಲೆ ಅಂಗಡಿ ಎದುರಿಗೆ, ದುರ್ಗಾ ಹೋಟೆಲ್‌ ಎದುರಿಗೆ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವ ಕಾರಣ ಸುಮಗ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ತೊಂದರೆ ಆಗದಂತೆ ಜಾಗೃತಿ ಮೂಡಿಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಆನಂದ ಕೆಂಚನಗೌಡ್ರ, ಸುಹಾಸ ವ್ಯಾಪಾರಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.