ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಶ್ರದ್ಧಾ-ಭಕ್ತಿಯಿಂದ ತುಳಸಿ ವಿವಾಹ ನೆರವೇರಿತು.
ಪಟ್ಟಣದ ನಾಲಬಂದ ಬಡಾವಣೆಯ ಅಂಬಾಸಾ ಶಿಂಗ್ರಿ ಅವರ ನಿವಾಸದಲ್ಲಿ ಮಹಿಳೆಯರು, ಮಕ್ಕಳ ಜೊತೆಗೂಡಿ ಮನೆಯಲ್ಲಿರುವ ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಮಂಟಪ ತಯಾರಿಸಿ, ಜಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗರಿಸಿ, ಚಿತ್ತಾರದ ರಂಗೋಲಿ ಬಿಡಿಸಿ, ಸಿಂಧೂರ, ನೆಲ್ಲಿ ಹಾಗೂ ಹುಣಸೆ ಟೊಂಗೆ, ಮಾವಿನ ತೋರಣ ಮತ್ತು ನಾನಾ ಫಲ ಪುಷ್ಪಗಳಿಂದ ಅಲಂಕರಿಸಿದ್ದರು.
ತುಳಸಿಸನ್ನಿಧಿಯಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅರಿಸಿಣ, ಕುಂಕುಮ ಕಂಠ ಸೂತ್ರಗಳೊಂದಿಗೆ ಮಂಗಳಾಲಂಕಾರ ಮಾಡಿ, ದೀಪೋತ್ಸವ ಆಚರಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪದ್ಮಾವತಿ ಶಿಂಗ್ರಿ, ಶಕುಂತಲಾ ಪಾಟೀಲ, ಬಿಬಿಜಾನ ನಾಲಬಂದ, ಅಶ್ವಿನಿ ಶಿಂಗ್ರಿ, ಶಮಶಾದಬೇಗಂ ನಾಲಬಂದ ಇದ್ದರು.
ಬಣಗಾರ ಓಣಿ: ಪಟ್ಟಣದ ಬಣಗಾರ ಬಡಾವಣೆಯಲ್ಲಿನ ಸಿದ್ದು ಗೌಡರ ಅವರ ನಿವಾಸದ ಆವರಣದಲ್ಲಿ ಮಹಿಳೆಯರು ತುಳಸಿ ವಿವಾಹ ಆಚರಿಸಿದರು.
ಮಲ್ಲಮ್ಮ ಗೌಡರ, ಭಾರತಿ ಗೌಡರ, ಚೈತ್ರಾ ಗೌಡರ, ಗಿರಿಜಾ ಗೌಡರ, ಕವಿತಾ ಗೌಡರ,ಹರಪ್ರಿಯಾ ಗೌಡರ ಇದ್ದರು.
ವಿಶೇಷ ಪೂಜೆ
ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ತುಳಸಿ ಮದುವೆ ಸಂಭ್ರಮದಿಂದ ನಡೆಯಿತು.
ಬಹುತೇಕ ಎಲ್ಲರ ಮನೆಗಳ ಮುಂದೆ ತುಳಸಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮದುವೆಯ ವಿಧಿವಿಧಾನಗಳನ್ನು ಪೂರೈಸಿದರು.
ಮಹಿಳೆಯರು ತುಳಸಿ ಗಿಡಕ್ಕೆ ಆರತಿ ಮಾಡಿ ಹಾಡುಗಳನ್ನು ಹಾಡಿ, ಶ್ಲೋಕಗಳನ್ನು ಹೇಳಿದರು. ಮಾರುಕಟ್ಟೆಯಲ್ಲೂ ತುಳಸಿ ಮದುವೆಗಾಗಿ ವಿವಿಧ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.