ಗದಗ: ‘ರಾಜ್ಯದಾದ್ಯಂತ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 17ರಂದು ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಮುಂಡರಗಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಅಧ್ಯಕ್ಷ ಬಸವರಾಜ ನವಲಗುಂದ ತಿಳಿಸಿದ್ದಾರೆ.
‘ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನುಸರ್ಕಾರ ಈಡೇರಿಸಬೇಕು ಎಂದು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, 12 ತಿಂಗಳೂ ಸಂಬಳ ನೀಡುವುದು, ಯುಜಿಸಿ ನಿಯಮಾವಳಿ ಪ್ರಕಾರ ಪ್ರತಿ ತಿಂಗಳು ವೇತನ ಪಾವತಿಸುವುದು, ಸೇವೆ ಕಾಯಂಗೊಳಿಸುವುದು, ಈಗಾಗಲೇ ಕೆಲಸಕ್ಕೆ ತೆಗೆದುಕೊಂಡ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸಬಾರದು, ಅವರನ್ನು ಪ್ರತಿ ವರ್ಷ ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
‘ಪದವಿಪೂರ್ವ ಇಲಾಖೆ ಸುತ್ತೋಲೆಯಂತೆ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವವರೆಗೂ ವಾರಕ್ಕೆ 10 ಗಂಟೆಗಳು ಮಾತ್ರ ಅವರಿಂದ ಸೇವೆ ಪಡೆದುಕೊಳ್ಳಬೇಕು. ಆದರೆ, ಅತಿಥಿ ಉಪನ್ಯಾಸಕರ ಅಸಹಾಯಕತೆಯನ್ನು ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಬಳಸಿಕೊಳ್ಳುತ್ತಿದ್ದು, ಅವರ ಮೇಲೆ ಒತ್ತಡ ಹೇರುವುದು, ಕಿರುಕುಳ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
‘ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡಲು ಮೌಖಿಕವಾಗಿ ಆದೇಶಿಸುತ್ತಿದ್ದಾರೆ. ನಾವು ಒಂದು ತಿಂಗಳಿಗೆ 160 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧವಿದ್ದು, ಅದರ ಪ್ರಕಾರ ಸಂಬಳ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸದಿದ್ದಲ್ಲಿ ಜುಲೈ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು’ ಎಂದು ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬಸಪ್ಪ ತಿಮ್ಮಪ್ಪ ವಡ್ಡರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.