ADVERTISEMENT

ಅನ್ನದಾನೇಶ್ವರ ಮಠದ ಪ್ರಸಾದ ನಿಲಯದ ಪಹಣಿಯಲ್ಲಿ ವಕ್ಫ್ ಹೆಸರು

ಪ್ರಜಾವಾಣಿ ವಿಶೇಷ
Published 5 ನವೆಂಬರ್ 2024, 4:48 IST
Last Updated 5 ನವೆಂಬರ್ 2024, 4:48 IST
ನರೇಗಲ್ ಪಟ್ಟಣದ ಎಸ್‌ಎವಿವಿಪಿ ಸಮಿತಿಯ ಉಚಿತ ಪ್ರಸಾದ ನಿಲಯದ ಆಸ್ತಿಯ ಪಹಣಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿರುವುದು
ನರೇಗಲ್ ಪಟ್ಟಣದ ಎಸ್‌ಎವಿವಿಪಿ ಸಮಿತಿಯ ಉಚಿತ ಪ್ರಸಾದ ನಿಲಯದ ಆಸ್ತಿಯ ಪಹಣಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿರುವುದು   

ನರೇಗಲ್:‌ ಐದು ಶತಮಾನಗಳ ಇತಿಹಾಸ ಹೊಂದಿರುವ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ (ಎಸ್‌ಎವಿವಿಪಿ) ಸಮಿತಿಯ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಸರ್ವೆ ನಂ: 410/2ಬಿ ರ ಆಸ್ತಿಯಲ್ಲಿ ರಹಮಾನ ಶಾವಲಿ ದರ್ಗಾ ವಕ್ಫ್‌  ಆಸ್ತಿ ಎಂದು ದಾಖಲಾಗಿದ್ದು, ಮಠದ ಭಕ್ತರ, ವಿದ್ಯಾಸಂಸ್ಥೆಯಲ್ಲಿ ಕಲಿತವರ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ಆತಂಕ ಉಂಟು ಮಾಡಿದೆ.

ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮೀಜಿ ಅವರು ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11 ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್‌ ಆಸ್ತಿ ಎಂದು ಸೇರ್ಪಡೆಯಾಗಿದೆ. ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಆಸ್ತಿ ನಂ. 410/2ಬಿ ರ 15 ಎಕರೆ 06 ಗುಂಟೆ ಜಮೀನಿನಲ್ಲಿ 11 ಎಕರೆ 19 ಗುಂಟೆ ಜಮೀನು ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದ್ದು, ಚೇರಮನ್ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯ ನರೇಗಲ್ಲ ಹೆಸರಿಗೆ 3 ಎಕರೆ 27 ಗುಂಟೆ ಜಮೀನು ಎಂದು ನಮೂದಾಗಿರುವುದು ಮಠದ ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಅನ್ನದಾನೇಶ್ವರ ಸಂಸ್ಥಾನಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿತ್ತು. ಅಕ್ಷರದೊಂದಿಗೆ ಅನ್ನವನ್ನು ನೀಡುವ ಉದ್ಧೇಶದಿಂದ ಲಿಂ. ಗುರು ಅನ್ನದಾನ ಸ್ವಾಮೀಜಿ ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ (ಕೆ.ವಿ.ಬಿ.ಎಂ) ಉಚಿತ ಪ್ರಸಾದ ನಿಲಯವನ್ನು ಕೋಡಿಕೊಪ್ಪದ ಹಾಲಕೆರೆಯ ಶಾಖಾ ಮಠದಲ್ಲಿ 1956 ರಲ್ಲಿ ಆರಂಭಿಸಿದ್ದರು.

ADVERTISEMENT

ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಮಠಕ್ಕೆ ನೀಡಲಾಗಿತ್ತು. ಆದರೆ, 2019-20ರಲ್ಲಿ ಇದಬ ಪ್ರಶ್ನೆ ಮೂಡಿದೆ.

ಮಠಮಾನ್ಯಗಳ ಆಸ್ತಿ ವಕ್ಫ್‌ ಆಸ್ತಿ ಎನ್ನುತ್ತ ಹೊರಟರೆ ಪರಿಸ್ಥಿತಿ ಗಂಭೀರವಾಗುತ್ತದೆ. ನರೇಗಲ್‌ ವ್ಯಾಪ್ತಿಯ ದೇವಸ್ಥಾನ, ಮಠಗಳ ಆಸ್ತಿಯ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲ ಆಸ್ತಿ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಮುಖ್ಯಾಧಿಕಾರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯಿಸಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ‌ ಧರ್ಮ ಪ್ರಚಾರ ಸಂಪರ್ಕ ಮಂಜುನಾಥ ಹೆಗಡೆ‌ ಹೇಳಿದರು.

ಜಿ. ಎಸ್.‌ ಪಾಟೀಲ
ಕಳಕಪ್ಪ ಜಿ. ಬಂಡಿ
ಸದ್ಯ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿರುವೆ. ಊರಿಗೆ ಬಂದ ತಕ್ಷಣ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಮುಂದಾಗುವೆ.
ಜಿ.ಎಸ್.‌ ಪಾಟೀಲ ರೋಣ ಶಾಸಕ ಹಾಗೂ ಎಸ್‌ಎವಿವಿಪಿ ಸಮಿತಿ ಉಪಾಧ್ಯಕ್ಷ
ಮಠದ ಉಚಿತ ಪ್ರಸಾದ ನಿಲಯದ ಆಸ್ತಿ ವಕ್ಫ್‌ ಹೆಸರಿಗೆ ಹೇಗಾಯಿತೆಂದು ಪರಿಶೀಲನೆ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು
ಕಿರಣಕುಮಾರ ಜಿ. ಕುಲಕರ್ಣಿ ತಹಶೀಲ್ದಾರ್‌ ಗಜೇಂದ್ರಗಡ ತಾಲ್ಲೂಕು

ಸರ್ಕಾರ ಸಮಸ್ಯೆ ಬಗೆಹರಿಸಲಿ

ಯಾವುದೇ ನೋಟಿಸ್‌ ನೀಡದೇ 2019ರಲ್ಲಿ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಲಾಗಿದೆ ಎಂದು ಕೇಳಲ್ಪಟ್ಟಿದ್ದೇವೆ. ಆಗಿನ ವೇಳೆ ನಮ್ಮ ಹಿರಿಯ ಗುರುಗಳು ಹೈಕೋರ್ಟ್‌ಗೆ ಅಪೀಲ್‌ ಹೋಗಿದ್ದರು. ಅದು ಇನ್ನೂ ಇತ್ಯರ್ಥವಾಗಿಲ್ಲ. ಇದು ಕೇವಲ ನಮ್ಮ ಮಠದ ಸಮಸ್ಯೆ ಎಂದುಕೊಂಡಿದ್ದೆವು. ಆದರೆ ನಾಡಿನಾದ್ಯಂತ ಸಮಸ್ಯೆಯಾಗಿರುವ ಕಾರಣ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸುತ್ತದೆ ಎನ್ನುವ ಭರವಸೆ ನಮಗಿದೆ
ಮುಪ್ಪಿನ ಬಸವಲಿಂಗ ಸ್ವಾಮೀಜಿ, ಪೀಠಾಧಿಪತಿ, ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ

ಮಠಾಧೀಶರು ಎಚ್ಚೆತ್ತುಕೊಳ್ಳಲಿ

ರಾಜ್ಯದಾದ್ಯಂತ ಗುಡಿಗಳು, ಮಠ, ಶಾಲೆ, ರೈತರ ಹೊಲಗಳೆಲ್ಲವೂ ವಕ್ಫ್‌ ಆಸ್ತಿ ಎಂದು ದಾಖಲಿಸುತ್ತಿರುವುದು ಸರ್ಕಾರದ ಕೆಟ್ಟ ನಿರ್ಧಾರವಾಗಿದೆ. ಹಿಂದೂಗಳು ಹೀಗೇ ಕುಳಿತುಕೊಂಡರೆ ಆಸ್ತಿಗಳು ಉಳಿಯುವುದಿಲ್ಲ. ರಾಜ್ಯದ ಎಲ್ಲ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ನಾಳೆ ಅವರ ಮಠವೂ ವಕ್ಫ್‌ ಆಸ್ತಿ ಆಗಿರುತ್ತದೆ.
ಕಳಕಪ್ಪ ಜಿ. ಬಂಡಿ, ಮಾಜಿ ಸಚಿವ

ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ

ಹಿಂದೂ-ಮುಸ್ಲಿಂ, ಪರಿಶಿಷ್ಟ ಸಮುದಾಯ, ಹಿಂದುಳಿದ, ಎನ್ನದೇ ಎಲ್ಲರಿಗೂ ಅನ್ನ-ಅಕ್ಷರ ದಾನ ಮಾಡುವ ಮೂಲಕ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಅನ್ನದಾನೇಶ್ವರ ಮಠದ ಶ್ರೀ ಮಾಡಿದ್ದಾರೆ. ಆದರೆ ಈ ಮಠದ ಉಚಿತ ಪ್ರಸಾದ ನಿಲಯದ ಆಸ್ತಿ ವಕ್ಫ್‌ ಹೆಸರಿಗೆ ದಾಖಲಿಸಿರುವ ಬಗ್ಗೆ ನಮಗೆ ಗೊತ್ತಿಲ್ಲ. ಇದಕ್ಕೆ ನಮ್ಮ ವಿರೋಧವಿದೆ. ಸರ್ಕಾರದ ಮಟ್ಟದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಮೊದಲಿನಂತೆ ಮಾಡಬೇಕು.
ಎ.‌ಎ. ನವಲಗುಂದ, ಅಧ್ಯಕ್ಷ, ಅಂಜುಮನ್‌ ಇಸ್ಲಾಮಿಕ್‌ ಕಮಿಟಿ, ನರೇಗಲ್

ನಮಗೂ ವಕ್ಫ್‌ಗೂ ಸಂಬಂಧವಿಲ್ಲ

ನಮ್ಮದು ವಂಶಾವಳಿ ಇರುವ ದರ್ಗಾ. ನಮಗೆ ವಕ್ಫ್‌ ಸಂಬಂಧವಿಲ್ಲ. ಎಲ್ಲರೂ ದೂರವಾಣಿ ಕರೆ ಮಾಡಿ ಕೇಳುತ್ತಿರುವ ಆಸ್ತಿ ಎಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ಹೀಗಾಗಿ ಗ್ರಾಮದ ಹಿರಿಯರ ಸಭೆ ಕರೆದು ಚರ್ಚಿಸಿ ನಂತರ ಮುಂದಿನ ನಿರ್ಧಾರ ತಿಳಿಸಲಾಗುವುದು
ಸಯ್ಯದ್ ಮಂಜೂರ ಹುಸೇನ ಶ್ಯಾವಲಿ, ರಹಿಮಾನ ಶಾವಲಿ ದರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.