ADVERTISEMENT

ನರೇಗಲ್: ಇಲ್ಲಿ ದಿನಾ ಮೊಳಗುತ್ತೆ ‘ನೀರಿನ ಗಂಟೆ’..!

ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಡಿಸೆಂಬರ್ 2019, 19:45 IST
Last Updated 5 ಡಿಸೆಂಬರ್ 2019, 19:45 IST
ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೀರು ಕುಡಿಯುತ್ತಿರುವುದು
ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೀರು ಕುಡಿಯುತ್ತಿರುವುದು   

ನರೇಗಲ್: ಶಾಲಾ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು ಕೇರಳ ಸರ್ಕಾರ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ 'ವಾಟರ್‌ ಬೆಲ್‌' ವ್ಯವಸ್ಥೆ ಜಾರಿಗೊಳಿಸಿದೆ. ಇದೇ ಮಾದರಿಯಲ್ಲಿ ಹೋಬಳಿಯ ನಾರಾಯಣಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ‘ನೀರಿನ ಗಂಟೆ’ ಅಳವಡಿಸಲಾಗಿದೆ. ಈ ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೂ ಈ ಶಾಲೆ ಪಾತ್ರವಾಗಿದೆ.

ಈ ಶಾಲೆಯಲ್ಲಿ ಪ್ರತಿದಿನ ಬೆಳಿಗ್ಗೆ 11ಕ್ಕೆ, ಮಧ್ಯಾಹ್ನ 2.30ಕ್ಕೆ ಹಾಗೂ ಸಂಜೆ 4ಕ್ಕೆ ಮೂರು ಬಾರಿ ‘ನೀರಿನ ಗಂಟೆ’ ಮೊಳಗುತ್ತದೆ. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ನೀರು ಕುಡಿಯುತ್ತಾರೆ. ‘ಬೆಸಿಗೆಯಲ್ಲಿ ನಾಲ್ಕು ಬಾರಿ ನೀರಿನ ಗಂಟೆ ಭಾರಿಸಲಾಗುತ್ತದೆ’ ಎಂದು ಮುಖ್ಯ ಶಿಕ್ಷಕಿ ಮಮತಾ ಟಿ. ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ‘ನೀರಿನ ಗಂಟೆ’ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದರು. ಆದರೆ, ನಾರಾಯಣಪುರ ಶಾಲೆಯಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ.

ADVERTISEMENT

‘ನೀರಿನ ಗಂಟೆ’ ಯೋಜನೆಗೆ ಬಾರಿ ಮಹತ್ವ ಇದೆ. ನೀರು ಜೀವ ಜಲ. ಯಾವುದೇ ವೈದ್ಯರ ಬಳಿ ಹೋದರೂ ಚೆನ್ನಾಗಿ ನೀರು ಕುಡಿಯಿರಿ ಎನ್ನುತ್ತಾರೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಉತ್ತಮ ಆರೋಗ್ಯ ಹವ್ಯಾಸ ಕಲಿಸುವುದು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಕುಡಿಯಲು ಸುಲಭವಾಗಿ ಶುದ್ದ ನೀರು ಸಿಗುವುದಿಲ್ಲ. ಇದನ್ನು ಮನಗಂಡ ಧಾರವಾಡದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ನಿರ್ದೇಶಕ ಎಸ್.ಎಸ್.ಹಿರೇಮಠ ಅವರು ಶಾಲೆಗೆ ಈ ನೀರಿನ 'ನೀರಿನ ಗಂಟೆಯನ್ನು' ನೀಡಿದ್ದಾರೆ.

ನಾರಾಯಣಪುರ ಗ್ರಾಮದಲ್ಲಿರುವುದು ಸರ್ಕಾರಿ ಶಾಲೆ ಮಾತ್ರ. ಇಲ್ಲಿಗೆ ಬರುವರೆಲ್ಲ ರೈತರು, ಕೂಲಿ ಕಾರ್ಮಿಕರ ಮಕ್ಕಳು. ಇವರು ಮನೆಗಿಂತ ಹೆಚ್ಚು ಸಮಯವನ್ನು ಶಾಲೆಯಲ್ಲೇ ಕಳೆಯುತ್ತಾರೆ.ಮಕ್ಕಳ ಆರೋಗ್ಯ ದೃಷ್ಟಿಯಿಂದ ನೀರು ಎಷ್ಟು ಮಹತ್ವ ಎನ್ನುವುದನ್ನು ಈ ಗಂಟೆ ನೆನಪಿಸುತ್ತಾ ಇರುತ್ತದೆ.

‘ಕೇರಳ ಯೋಜನೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದ ಇಂದ್ರಪ್ರಸ್ಥ ಎಂಬ ಖಾಸಗಿ ಶಾಲೆಯಲ್ಲಿ ಇದನ್ನು ಅಳವಡಿಸಿರುವ ಮಾಹಿತಿ ಲಭಿಸಿತು. ಸರ್ಕಾರಿ ಶಾಲೆಯಲ್ಲಿ ಯಾಕೆ ಇದನ್ನು ಅಳವಡಿಸಿಕೊಳ್ಳಬಾರದು ಎಂದು ಯೋಜನೆ ರೂಪಿಸಿ, ಇದನ್ನು ಜಾರಿಗೆ ತಂದಿದ್ದೇವೆ’ ಎಂದು ಸಿಬ್ಬಂದಿ ಲಲಿತಾ ದಾಸರ, ಗ್ಯಾನಪ್ಪ ಡೊಣ್ಣಿ, ಜರೀನಾ ರಿಸಲ್ದಾರ, ರವಿ ಪಡೆಸೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.