ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ನಿತ್ಯ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿದುಹೋಗುತ್ತಿದೆ. ತಮ್ಮ ಪಾಲಿನ ನೀರು ವ್ಯರ್ಥವಾಗುತ್ತಿರುವ ಬಗ್ಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಹಮ್ಮಿಗಿ ಬ್ಯಾರೇಜಿನಲ್ಲಿ ಗರಿಷ್ಠ ಮೂರು ಟಿ.ಎಂ.ಸಿ ನೀರು ಸಂಗ್ರಹಿಸಿಕೊಳ್ಳಬಹುದು. ಇದರಿಂದ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಕೊಪ್ಪಳ ಮೊದಲಾದ ನಗರ, ಪಟ್ಟಣ ಹಾಗೂ ನೂರಾರು ಗ್ರಾಮಗಳಿಗೆ ವರ್ಷಪೂರ್ತಿ ನಿರಾತಂಕವಾಗಿ ನೀರು ಒದಗಿಸಬಹುದು.
ಆದರೆ, ಶಿಂಗಟಾಲೂರ ಏತ ನೀರಾವರಿ ಯೋಜನೆಯಂತೆ ಬ್ಯಾರೇಜಿನ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಹಾಗೂ ಹೂವಿನಹಡಗಲಿ ತಾಲ್ಲೂಕಿನ ಅಲ್ಲಿಪುರ ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ನಿಗದಿಯಂತೆ ನೀರು ಸಂಗ್ರಹಿಸಲಾಗುತ್ತಿಲ್ಲ. 1.9 ಟಿಎಂಸಿ ನೀರು ಮಾತ್ರ ಸಂಗ್ರಹಿಸಿಕೊಳ್ಳಬಹುದಾಗಿದೆ.
ಶಿವಮೊಗ್ಗ, ಮಲೆನಾಡು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಲವು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಅಕ್ಟೋಬರ್ 9ರಂದು 10,477 ಕ್ಯುಸೆಕ್, 10ರಂದು 21,965 ಕ್ಯುಸೆಕ್, 11ರಂದು 48,300 ಕ್ಯುಸೆಕ್, 12ರಂದು 46,580, ಕ್ಯುಸೆಕ್, 13ರಂದು 61,695 ಕ್ಯುಸೆಕ್ ಹಾಗೂ 14ರಂದು 29,841 ಕ್ಯುಸೆಕ್ ನೀರು ಬ್ಯಾರೇಜಿಗೆ ಹರಿದುಬಂದಿದೆ. ಅಷ್ಟೇ ಪ್ರಮಾಣದ ನೀರನ್ನು ನಿತ್ಯ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
‘ಬ್ಯಾರೇಜಿನಲ್ಲಿ 3 ಟಿ.ಎಂ.ಸಿ. ನೀರು ಸಂಗ್ರಹವಾದರೆ ಜಿಲ್ಲೆಯ ಜನತೆಗೆ ವರ್ಷಪೂರ್ತಿ ಕುಡಿಯುವ ನೀರು ಪೂರೈಸಬಹುದು. ಗದಗ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಹಲವು ಭಾಗಗಳ ಜಮೀನುಗಳಿಗೂ ನೀರು ಒದಗಿಸಬಹುದು. ಮೂರು ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ಮೂರು ಜಿಲ್ಲೆಗಳ ಜನರು ಹಾಗೂ ರೈತರು ಹಲವು ದಶಕಗಳಿಂದ ನೀರಿಲ್ಲದೆ ಪರದಾಡುವಂತಾಗಿದೆ’ ಎಂದು ರೈತರು ತಿಳಿಸುತ್ತಾರೆ.
‘ಸ್ಥಳಾಂತರ ಮಾಡದಿದ್ದರೆ ಹೋರಾಟ’
‘ನಿರಂತರವಾಗಿ ನೀರು ಹರಿದರೆ ರೈತರ ಬದುಕು ಬಂಗಾರವಾಗಲಿದೆ. ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಬೇಸಿಗೆಯೊಳಗೆ ಗ್ರಾಮಗಳನ್ನು ಸ್ಥಳಾಂತರಿಸಿ, ಬ್ಯಾರೇಜಿನಲ್ಲಿ 3 ಟಿಎಂಸಿ ನೀರು ಸಂಗ್ರಹಿಸದಿದ್ದರೆ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಇಟಗಿ ಎಚ್ಚರಿಸಿದರು.
‘ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪುರ ಗ್ರಾಮಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಳೆಬಿದರಳ್ಳಿ ಗ್ರಾಮದ ಶೇ 75ರಷ್ಟು ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತಗೊಂಡಿದ್ದಾರೆ’ ಎಂದು ನೀರಾವರಿ ಇಲಾಖೆಯ ಅಧಿಕಾರಿ ವಿನಯಕುಮಾರ ಬಿ.ಎಂ. ತಿಳಿಸಿದರು.
‘ಗುಮ್ಮಗೋಳ ಗ್ರಾಮಸ್ಥರು ನೂತನ ಗ್ರಾಮಕ್ಕೆ ತೆರಳಲು ಈವರೆಗೂ ಹಿಂದೇಟು ಹಾಕುತ್ತಿದ್ದರು. ಈಗ ಅವರು ಸಹ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಠಲಾಪುರ ಗ್ರಾಮದ ಸ್ಥಳಾಂತರಕ್ಕೆ ಈಚೆಗೆ ಜಮೀನು ಖರೀದಿಸಲಾಗಿದ್ದು, ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ನಂತರ ಸ್ಥಳಾಂತರಿಸಲಾಗುವುದು’ ಎಂದರು.
‘ಗುಮ್ಮಗೋಳ ಗ್ರಾಮದ ಪ್ರಾಚೀನ ಗೋಣಿಬಸವೇಶ್ವರ ದೇವಸ್ಥಾನ ಹಾಗೂ ಬಿದರಳ್ಳಿ ಗ್ರಾಮದ ಪ್ರಾಚೀನ ಬಿದರಳ್ಳೆಮ್ಮನ ದೇವಸ್ಥಾನಕ್ಕೆ ತಡೆಗೋಡೆ ನಿರ್ಮಿಸಬೇಕೆಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎರಡೂ ಬೇಡಿಕೆಗಳು ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.