ADVERTISEMENT

ಬಸವರಾಜ ಬೊಮ್ಮಾಯಿಗೆ ಸಚಿವ ಸ್ಥಾನ ತಪ್ಪಿದ್ದೇಕೆ?

ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಬೊಮ್ಮಾಯಿಗೆ ಸಿಗದ ಸ್ಥಾನ: ಸ್ಥಳೀಯರಲ್ಲಿ ಬೇಸರ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 12 ಜೂನ್ 2024, 5:48 IST
Last Updated 12 ಜೂನ್ 2024, 5:48 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಾನ ಸಿಗದಿರುವುದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಜನರಲ್ಲಿ ನಿರಾಸೆ ಮೂಡಿಸಿದೆ.

ಲಿಂಗಾಯತ ಕೋಟಾದಲ್ಲಿ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೂ ಬೇಸರ ತರಿಸಿದೆ.

ಲೋಕಸಭಾ ಚುನಾವಣೆಗೆ ಇನ್ನೂ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಬೊಮ್ಮಾಯಿಗೆ ಪತ್ರ ಬರೆದು ಚುನಾವಣೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದ್ದರು. ‘ನೀವು ಸಂಸದರಾಗಿ ನನ್ನ ತಂಡ ಸೇರುತ್ತಿರುವುದು ದೊಡ್ಡ ಆಸ್ತಿ’ ಎಂದು ತಿಳಿಸಿದ್ದರು.

ADVERTISEMENT

‘ಬೊಮ್ಮಾಯಿ ಕುರಿತಾಗಿ ಪ್ರಧಾನಿ ಮೋದಿ ಅವರು ಹೇಳಿದ್ದ ಮಾತುಗಳು ಕ್ಷೇತ್ರದ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದವು. ಹಾವೇರಿ ಲೋಕಸಭಾ ಕ್ಷೇತ್ರದಿಂದ ಬೊಮ್ಮಾಯಿ ಅವರನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಸಚಿವ ಆಗುತ್ತಾರೆ. ಹಾವೇರಿ, ಗದಗ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಪರ್ವ ಶುರುವಾಗುತ್ತದೆ ಎಂದು ಭಾವಿಸಿದ್ದರು. ಅದರಂತೆ, ಕ್ಷೇತ್ರದ ಮತದಾರರು ಬೊಮ್ಮಾಯಿ ಅವರನ್ನು 45,513 ಮತಗಳ ಅಂತರದಿಂದ ಗೆಲ್ಲಿಸಿದ್ದರು. ಆದರೆ, ಮೈತ್ರಿ ಪಕ್ಷಕ್ಕೆ ಒಂದು ಸ್ಥಾನ ಕೊಟ್ಟಿದ್ದರಿಂದ ಬೊಮ್ಮಾಯಿಗೆ ಮಂತ್ರಿ ಭಾಗ್ಯ ಸಿಗಲಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

‘2024ರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಸಾಕಷ್ಟು ಬೆಳವಣಿಗೆಗಳು ನಡೆದವು. ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ 240 ಸ್ಥಾನಗಳಷ್ಟೇ ಸಿಕ್ಕವು. ಇದರಿಂದಾಗಿ ನಾವು ಮೈತ್ರಿ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸುವ ಅನಿವಾರ್ಯ ಸೃಷ್ಟಿ ಆಯಿತು. ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಎಲ್ಲರನ್ನೂ ಸಮಾಧಾನ ಪಡಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಸದ್ಯ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಗದಗ ಜಿಲ್ಲೆಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿರುವ ಹಿರಿಯ ನಾಯಕ ಕಾಂತಿಲಾಲ ಬನ್ಸಾಲಿ.

ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಂಗಾಯತ ಸಮುದಾಯ ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬನ್ಸಾಲಿ, ‘ಲಿಂಗಾಯತ ಸಮುದಾಯದಿಂದ ಗೆದ್ದಿರುವ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್‌ ಶೆಟ್ಟರ್‌ ಹಾಗೂ ಈಗ ಸಚಿವರಾಗಿರುವ ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಈ ಮೂವರು ಹುಬ್ಬಳ್ಳಿ ನಿವಾಸಿಗಳು. ಎಲ್ಲರಿಗೂ ಸಚಿವ ಸ್ಥಾನ ಕೊಟ್ಟರೆ ಒಂದೇ ಊರಿನವರಿಗೆ ಕೊಡುತ್ತೀರೇನು ಎಂಬ ಪ್ರಶ್ನೆಯನ್ನು ಮೇಲಿನವರು ಕೇಳುತ್ತಾರೆ’ ಎಂಬ ತರ್ಕ ಮುಂದಿಟ್ಟರು.

ರಾಜ್ಯದಿಂದ ಗೆಲುವು ಸಾಧಿಸಿರುವ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಸಂಸದರ ಪೈಕಿ ನಾಲ್ಕು ಮಂದಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಲ್ಹಾದ ಜೋಶಿ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ.

ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಲಿಲ್ಲ. ಮುಂದೆ ಕೇಂದ್ರ ಸಚಿವ ಅಥವಾ ಅದಕ್ಕೆ ಸಮನಾದ ಬೇರೆ ಯಾವುದರೂ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ.
ರಾಜು ಕುರಡಗಿ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ
ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿಯೇ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನಡೆ ಆಗಿರುವುದು ಬೇಸರ ತರಿಸಿದೆ. ಬೊಮ್ಮಾಯಿ ಅವರಿಗೆ ಎರಡು ವರ್ಷಗಳ ನಂತರ ಅವಕಾಶ ಸಿಗುವ ನಿರೀಕ್ಷೆ ಇದೆ.
ಕಾಂತಿಲಾಲ್‌ ಬನ್ಸಾಲಿ, ಬಿಜೆಪಿ ಹಿರಿಯ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.