ADVERTISEMENT

ಗದಗ: ಕಪ್ಪತ್ತಗುಡ್ಡದಲ್ಲಿ ಹೆಚ್ಚಿದ ವನ್ಯಜೀವಿಗಳ ಸಂತತಿ

ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ: ಪರಿಸರಪ್ರಿಯರಿಗೆ ಸಂತಸ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 5:13 IST
Last Updated 21 ಜುಲೈ 2023, 5:13 IST
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಚಿರತೆ
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಚಿರತೆ   

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳ ಸಂಖ್ಯೆ ವೃದ್ಧಿಸಿರುವುದು, ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಇದೇ ಮೊದಲಬಾರಿಗೆ ಅತಿ ಅಪರೂಪದ ಪ್ರಾಣಿಗಳಾದ ಚಿಂಕಾರ ಹಾಗೂ ರೆಸ್ಟಿ ಸ್ಪಾಟೆಡ್‌ ಬೆಕ್ಕುಗಳು ಕಪ್ಪತ್ತಗುಡ್ಡಲ್ಲಿ ಕಂಡು ಬಂದಿವೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮವು ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ಸುಮಾರು 65 ಕಿ.ಮೀ. ಉದ್ದಕ್ಕೆ ಚಾಚಿಕೊಂಡಿದೆ. ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ ನಂತರ ಇಲ್ಲಿ ಸಸ್ಯ ಹಾಗೂ ವನ್ಯಜೀವಿಗಳ ಸಂತತಿ ನಿಧಾನವಾಗಿ ವೃದ್ಧಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಪ್ಪತ್ತಗುಡ್ಡದಲ್ಲಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ನೆಲೆ ಕಂಡುಹಿಡಿಯಲು ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ಡೆಹರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ, ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ಘಟಕದ ಸಿಬ್ಬಂದಿ ನೆರವಿನಿಂದ ಮೇ 07ರಿಂದ ಜುಲೈ 15ರವರೆಗೆ ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿ ಪ್ರಾಥಮಿಕ ಅಧ್ಯನ ನಡೆಸಲಾಗಿದೆ. ಇದರಿಂದ ನಮಗೆ ಅಚ್ಚರಿಯ ಫಲಿತಾಂಶ ಲಭಿಸಿದ್ದು, ಕಪ್ಪತ್ತಗುಡ್ಡದಲ್ಲಿ ಎಷ್ಟೆಲ್ಲಾ ವೈವಿಧ್ಯದ ಪ್ರಾಣಿಗಳಿವೆ ಎಂಬುದು ಆಶ್ಚರ್ಯ ತರಿಸಿದೆ’ ಎಂದು ಡಿಸಿಎಫ್‌ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ.

ADVERTISEMENT

‘ಸೈನ್‌ ಸರ್ವೆ ವಿಧಾನದಲ್ಲಿ 128 ಕಿ.ಮೀ. ಸಂಚರಿಸಿ ಪ್ರಾಣಿಗಳ ಮಲದ ನಮೂನೆ, ಮರ ಮತ್ತು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಪರಚಿದ ಗುರುತುಗಳನ್ನು ವೀಕ್ಷಿಸಲಾಗಿದೆ. ಲೈನ್ಸ್‌ ಟ್ರಾನ್ಸಕ್ಟ್‌ ವಿಧಾನದಲ್ಲಿ ಪ್ರಾಣಿಗಳ ಸಂಚಾರ ಮಾರ್ಗ ಗಮನಿಸಲಾಗಿದೆ. ಜತೆಗೆ ಕ್ಯಾಮೆರಾ ಟ್ರ್ಯಾಪ್‌ ವಿಧಾನದಲ್ಲಿ ಕಪ್ಪತ್ತಗುಡ್ಡದಲ್ಲಿ 98 ಕ್ಯಾಮೆರಾ ಅಳವಡಿಸಿ 30 ದಿನಗಳ ಕಾಲ ನಿರಂತರ ವೀಕ್ಷಣೆ ಮಾಡಲಾಗಿದೆ. ಈ ಮೂರು ವಿಧಾನಗಳಿಂದ ಪ್ರಾಣಿಗಳ ಸಂತತಿ ಸಂಖ್ಯೆ, ಅವುಗಳ ನೆಲೆ ಹಾಗೂ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಕಪ್ಪತ್ತಗುಡ್ಡದಲ್ಲಿ ಹಿಂದೆ ಎಷ್ಟು ಸಂಖ್ಯೆಯಲ್ಲಿ ಪ್ರಾಣಿಗಳಿದ್ದವು ಎಂಬುದಕ್ಕೆ ಮೂಲ ದಾಖಲೆಗಳಿಲ್ಲ. ಸಮೀಕ್ಷೆಗಳು ನಡೆದಿಲ್ಲ. ಆದರೆ, ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆಯಾದ ನಂತರ ಹೆಚ್ಚಿನ ಅನುದಾನ ಸಿಗುತ್ತಿರುವುದು, ಕಾಡಿನ ರಕ್ಷಣೆಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿರುವುದು, ಕುಡಿಯುವ ನೀರಿನ ಹೊಂಡಗಳ ನಿರ್ಮಾಣ, ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಒತ್ತು ನೀಡಿರುವುದು, ಕಳ್ಳೆಬೇಟೆ ನಿಯಂತ್ರಣ ಮೊದಲಾದ ಕಾರಣಗಳಿಂದ ಪ್ರಾಣಿಗಳ ಸಂತತಿ ಹೆಚ್ಚಿದೆ. ಮುಂದಿನ ಐದತ್ತು ವರ್ಷಗಳಲ್ಲಿ ಪ್ರಾಣಿಗಳ ಸಂಖ್ಯೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಡಿಸಿಎಫ್‌ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ.

ಪ್ರಾಣಿಗಳ ಸಮೀಕ್ಷೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಶಿವಕುಮಾರ ಸ್ವಾಮೀಜಿ ನಂದಿವೇರಿ ಮಠ
ದೀಪಿಕಾ ಬಾಜಪೇಯಿ
ಮಾನವ ಹಸ್ತಕ್ಷೇಪ ಕಡಿಮೆ ಆಗಿದ್ದರಿಂದ ಕಾಡು ಬೆಳೆದಿದೆ. ಕಾಡು ವೃದ್ಧಿಸುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಅರಣ್ಯ ಇಲಾಖೆಯವರು ಜನರ ಸಹಕಾರ ಪಡೆದು ಕಪ್ಪತ್ತಗುಡ್ಡಕ್ಕೆ ಇನ್ನೂ ಹೆಚ್ಚಿನ ಕಾವಲು ಹಾಕಬೇಕು. ಕಾಳಜಿ ಮಾಡಬೇಕು.
-ಶಿವಕುಮಾರ ಸ್ವಾಮೀಜಿ ನಂದಿವೇರಿ ಮಠ
ವೈಜ್ಞಾನಿಕ ಸಮೀಕ್ಷೆಯಿಂದ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಕತ್ತೆಕಿರುಬ ಚಿರತೆ ನರಿ ತೋಳ ಕಾಡುಬೆಕ್ಕು ಚುಕ್ಕೆ ಜಿಂಕೆ ಕೃಷ್ಣಮೃಗ ಮೂರು ಜಾತಿಯ ಹುಲ್ಲೆಗಳು ಸೇರಿದಂತೆ ಹಲವು ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳು ಸರಿಸೃಪಗಳು ಕಂಡುಬಂದಿವೆ.
--ದೀಪಿಕಾ ಬಾಜಪೇಯಿ, ಡಿಸಿಎಫ್‌ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.