ಗದಗ: ಗ್ರೇಟ್ ಇಂಡಿಯನ್ ಬಸ್ಟರ್ಡ್‌ನ (ಹೆಬ್ಬಕ) ಜಾಡು ಹಿಡಿದು ಬಂದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್) ಸಂಶೋಧಕರ ತಂಡಕ್ಕೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ವೂಲ್ಫ್‌ಡಾಗ್ (ತೋಳ–ನಾಯಿಯ ಮಿಶ್ರತಳಿ) ಕಾಣಸಿಕ್ಕಿದೆ. ಅವರ ಪ್ರಕಾರ, ಈ ಬಗೆಯ ಪ್ರಾಣಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.
ಗಂಡು ತೋಳಗಳು ಹೆಣ್ಣುನಾಯಿ ಜತೆಗೆ ಸಲುಗೆ ಬೆಳೆಸಿದಾಗ ‘ವೂಲ್ಫ್‌ಡಾಗ್’ ಜನಿಸುತ್ತವೆ. ಗಜೇಂದ್ರಗಡದಲ್ಲಿ ಪತ್ತೆಯಾಗಿದ್ದು ಇದೇ ಮಾದರಿಯ ಪ್ರಾಣಿ. ಇದಕ್ಕೂ ಮೊದಲಿನ ದಾಖಲೆಗಳ ಪ್ರಕಾರ, ಹೆಣ್ಣುತೋಳಗಳು ಗಂಡುನಾಯಿಗಳ ಜತೆಗೆ ಸಲುಗೆ ಬೆಳೆಸಿದ್ದು ಗೊತ್ತಾಗಿದೆ. ತೋಳಗಳ ಹಿಂಡಿನಲ್ಲಿ ನಾಯಿ ಹೋಲಿಕೆಯ ‘ವೂಲ್ಫ್‌ಡಾಗ್’ಗಳು ಇರುವುದನ್ನು ಸಂಶೋಧಕರು ಈ ಹಿಂದೆಯೇ ದಾಖಲಿಸಿದ್ದಾರೆ.
‘ಹೆಬ್ಬಕ ಪಕ್ಷಿ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು 2023ರ ಅಕ್ಟೋಬರ್‌ನಲ್ಲಿ ನಾವು ಗಜೇಂದ್ರಗಡಕ್ಕೆ ಬಂದೆವು. ಆಗ ನಾಯಿಗಳ ಹಿಂಡಿನಲ್ಲಿ ತೋಳದ ರೀತಿಯ ನಾಯಿ ಕಂಡಿತು. ಅದರ ಚಿತ್ರವನ್ನು ನೋಡಿದ ತಜ್ಞರು ಅದು ವೂಲ್ಫ್‌ಡಾಗ್ ತಳಿಯ ಪ್ರಾಣಿಯೆಂದು ದೃಢಪಡಿಸಿದರು. ವೂಲ್ಫ್‌ಡಾಗ್ ಪತ್ತೆಯಾಗಿದ್ದು ರಾಜ್ಯದಲ್ಲಿ ಅದೇ ಮೊದಲು’ ಎಂದು ಬಿಎನ್‌ಎಚ್‌ಎಸ್ ಸಂಸ್ಥೆಯ ರಾಜ್ಯ ಘಟಕದ ಸಂಯೋಜಕ ಕಾರ್ತಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವೂಲ್ಫ್‌ಡಾಗ್‌ಗಳ ಬಗ್ಗೆ ಈವರೆಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ಅವುಗಳ ವರ್ತನೆ, ಫಲವಂತಿಕೆ ಶಕ್ತಿ ಮತ್ತು ತೋಳದ ಸಂತತಿ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ. ವೂಲ್ಫ್‌ಡಾಗ್‌ಗಳ ವಂಶವಾಹಿ ಜೊತೆಗೆ ವೈಜ್ಞಾನಿಕ ಅಧ್ಯಯನ ನಡೆದರೆ, ಹಲವು ಆಸಕ್ತಿಕರ ವಿಷಯ ಗೊತ್ತಾಗಲಿದೆ’ ಎಂದು ಗದಗ ಮೃಗಾಲಯದ ಅಧಿಕಾರಿ ನಿಖಿಲ್ ಕುಲಕರ್ಣಿ ತಿಳಿಸಿದರು.
ಕಾಡಿನ ಪ್ರಮಾಣ ಕಡಿಮೆ ಆಗುತ್ತಿದೆ. ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ವನ್ಯಜೀವಿ ಸಂತತಿ ರಕ್ಷಣೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಆಗಬೇಕುಕಾರ್ತಿಕ್ ರಾಜ್ಯ ಸಂಯೋಜಕ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ
ಪತ್ತೆಯಾದ ವೂಲ್ಫ್‌ಡಾಗ್ ರಕ್ಷಣೆ ಮಾಡಿ ತಜ್ಞರು ಅದರ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದರೆ ಹೆಚ್ಚಿನ ವಿವರಗಳು ಗೊತ್ತಾಗಲಿವೆನಿಖಿಲ್ ಕುಲಕರ್ಣಿ ಅಧಿಕಾರಿ ಗದಗ ಮೃಗಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.