ADVERTISEMENT

ಕಾರವಾರ: ನಾರಿಯರೇ ತಂಗುದಾಣ ಕಟ್ಟಿದರು!

ಬಿಸಿಲಿನಲ್ಲಿ ನಿಂತು ಹೈರಾಣಾಗುತ್ತಿದ್ದ ಮಕ್ಕಳು: ಬೇಡಿಕೆಗೆ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
ಗಣಪತಿ ಹೆಗಡೆ
Published 7 ಮೇ 2024, 5:15 IST
Last Updated 7 ಮೇ 2024, 5:15 IST
ಬಸ್ ತಂಗುದಾಣ ನಿರ್ಮಾಣದಲ್ಲಿ ಕಾರ್ಯನಿರತರಾಗಿದ್ದ ಹಾರವಾಡ ಗ್ರಾಮದ ಮಹಿಳೆಯರು
ಬಸ್ ತಂಗುದಾಣ ನಿರ್ಮಾಣದಲ್ಲಿ ಕಾರ್ಯನಿರತರಾಗಿದ್ದ ಹಾರವಾಡ ಗ್ರಾಮದ ಮಹಿಳೆಯರು   

ಕಾರವಾರ: ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ರಾಷ್ಟ್ರೀಯ ಹೆದ್ದಾರಿ–66ರ ಬದಿಯಲ್ಲಿ ಬಿರು ಬಿಸಿಲಿನಲ್ಲಿ ನೆರಳಿಲ್ಲದೆ ಬಿಸಿಲ ಝಳದಲ್ಲೂ ಬಸ್‍ಗೆ ಕಾಯುತ್ತಿದ್ದ ಮಕ್ಕಳ ಸ್ಥಿತಿಗೆ ಮರುಗಿ ಗ್ರಾಮದ ಮಹಿಳೆಯರೇ ಸೇರಿಕೊಂಡು ತಂಗುದಾಣ ನಿರ್ಮಿಸಿದ್ದಾರೆ.

ಹಾರವಾಡ ಗ್ರಾಮದ ಸುಮಾರು 10ಕ್ಕೂ ಹೆಚ್ಚು ಮಹಿಳೆಯರು ಸೇರಿ ಸತತ ಎರಡು ದಿನಗಳ ಶ್ರಮದಿಂದ ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಿದ್ದಾರೆ. ತೆಂಗಿನಗರಿಗಳಿಂದ ತಂಗುದಾಣ
ನಿರ್ಮಿಸಿ ಅಲ್ಲಿ ‘ಹಾರವಾಡ ಬಸ್ ತಂಗುದಾಣ’ ಎಂಬ ಫಲಕವನ್ನೂ ಅಳವಡಿಸಿದ್ದಾರೆ.

ಚತುಷ್ಪಥ→ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆ ವಿಸ್ತರಣೆ ಉದ್ದೇಶಕ್ಕೆ ಹಾರವಾಡದಲ್ಲಿದ್ದ ಎರಡು ತಂಗುದಾಣಗಳನ್ನು ತೆರವುಗೊಳಿಸಲಾಗಿತ್ತು. ಹಲವು ವರ್ಷ ಕಳೆದರೂ ತಂಗುದಾಣ ಮರು ನಿರ್ಮಿಸದ ಪರಿಣಾಮ ಜನರು ರಸ್ತೆ ಬದಿಯಲ್ಲೇ ನಿಂತು ಬಸ್‍ಗೆ ಕಾಯುವ ಸ್ಥಿತಿ ಉಂಟಾಗಿತ್ತು.

ADVERTISEMENT

‘ನೂರಕ್ಕೂ ಹೆಚ್ಚು ಮೆನಗಳಿರುವ ಹಾರವಾಡ ಗ್ರಾಮದಲ್ಲಿ ಹತ್ತಾರು ವಿದ್ಯಾರ್ಥಿಗಳು ನಿತ್ಯ ಅವರ್ಸಾ ಪ್ರೌಢಶಾಲೆಗೆ, ಕಾರವಾರ ಮತ್ತು ಅಂಕೋಲಾದ ಕಾಲೇಜುಗಳಿಗೆ ತೆರಳಬೇಕಾಗುತ್ತಿದೆ. ಕೆಲಸಕ್ಕೆ
ಪಟ್ಟಣಕ್ಕೆ ತೆರಳುವ ಮಹಿಳಾ ಕಾರ್ಮಿಕರು ಬಸ್‍ಗೆ ಕಾಯಲು ಹೆದ್ದಾರಿ ಪಕ್ಕ ನೆರಳಿನ ವ್ಯವಸ್ಥೆ ಇಲ್ಲದಂತಾಗಿದೆ. ಬಸ್ ತಂಗುದಾಣ ನಿರ್ಮಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ತಾತ್ಕಾಲಿಕ ತಂಗುದಾಣ ನಿರ್ಮಿಸಬೇಕಾಯಿತು’ ಎಂದು ಗ್ರಾಮದ ಮಹಿಳೆಯರು ಪ್ರತಿಕ್ರಿಯಿಸಿದರು.

‘ಕಾಲೇಜುಗಳ ವಿದ್ಯಾರ್ಥಿನಿಯರು ಬಿಸಿಲಿನಲ್ಲಿ ನಿಂತು ತಾಸುಗಟ್ಟಲೇ ಬಸ್‍ಗೆ ಕಾಯುತ್ತಿದ್ದರು. ಬಸ್ ತಂಗುದಾಣ ಇಲ್ಲದ ಕಾರಣ ಹಲವು ಬಸ್‍ಗಳನ್ನು ಗ್ರಾಮದಲ್ಲಿ ನಿಲುಗಡೆ ಮಾಡುತ್ತಿರಲಿಲ್ಲ. ಬಿಸಿಲ ಝಳಕ್ಕೆ ವಿದ್ಯಾರ್ಥಿನಿಯರು ಸುಸ್ತಾಗಿ ಮೂರ್ಛೆಗೊಂಡು ಬಿದ್ದ ಘಟನೆಗಳೂ ನಡೆದಿದ್ದವು. ಗ್ರಾಮದ ಮಕ್ಕಳ ಸುರಕ್ಷತೆಗಾಗಿ ತಾತ್ಕಾಲಿಕವಾಗಿಯಾದರೂ ತಂಗುದಾಣ ಕಟ್ಟಲು ಮಹಿಳೆಯರು ಸೇರಿದ್ದಾಗ ಚರ್ಚಿಸಿದ್ದೆವು. ಎಲ್ಲರ ಶ್ರಮದಾನದಿಂದ ತಂಗುದಾಣ ರೂಪುಗೊಂಡಿತು’ ಎಂದು ಗ್ರಾಮಸ್ಥೆ ಶಿಲ್ಪಾ ನಾಯ್ಕ ಹೇಳಿದರು. 

ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಮಹಿಳೆಯರೇ ನಿರ್ಮಿಸಿದ ತಾತ್ಕಾಲಿಕ ಬಸ್ ತಂಗುದಾಣ
ಹೆದ್ದಾರಿ ವಿಸ್ತರಣೆಗೆ ಬಸ್ ತಂಗುದಾಣ ತೆರವುಗೊಂಡಿತ್ತು. ಜನರ ಬೇಡಿಕೆಗೆ ಅನುಗುಣವಾಗಿ ತಂಗುದಾಣ ಕಟ್ಟಿಕೊಡಲು ಗ್ರಾಮ ಸಭೆಗಳಲ್ಲಿ ಠರಾವು ಮಾಡಲಾಗಿತ್ತು
ಲಕ್ಷ್ಮೀ ಗೌಡ ಹಾರವಾಡ ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.