ಗದಗ: ಎಷ್ಟು ಜಾತಿಯ ಹಾವುಗಳಿವೆ? ಅವುಗಳಲ್ಲಿ ಎಲ್ಲವೂ ವಿಷಕಾರಿಯೇ? ಅವು ಪೊರೆ ಕಳಚುವುದು ಯಾಕೆ? ಕಟ್ಟುಹಾವಿನಲ್ಲಿ ಎಷ್ಟು ಪಟ್ಟು ಹೆಚ್ಚು ವಿಷ ಇದೆ? ಹಾವಿಗೆ ವಿಷ ಇರುವುದು ರಕ್ಷಣೆಗೆ ಮಾತ್ರವೇ? ಹಾವಿನ ಬಾಯಿಯಲ್ಲಿರುವ ಹಲ್ಲುಗಳ ಸಂಖ್ಯೆ ಎಷ್ಟು ಗೊತ್ತೆ? ಹಾವುಗಳ ರಾಜ ಕಿಂಗ್ ಕೋಬ್ರಾ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಎಲ್ಲಿ?
– ಹಾವುಗಳ ಜಗತ್ತಿನ ಕುರಿತಾದ ಇಂತಹ ಹತ್ತು ಹಲವಾರು ಕುತೂಹಲಕಾರಿ ಸಂಗತಿಗಳನ್ನು ಮೈ ರೋಮಾಂಚನಗೊಳ್ಳುವ ರೀತಿಯಲ್ಲಿ ಬಿಚ್ಚಿಡುತ್ತಾರೆ ಗದಗ ಮೃಗಾಲಯದ ಸಿಬ್ಬಂದಿ ನಿಖಿಲ್ ಕುಲಕರ್ಣಿ. ಹಾವುಗಳ ಲೋಕದ ಕೌತುಕ ಸಂಗತಿಗಳನ್ನು ಅವರ ಮಾತುಗಳಲ್ಲೇ ಓದಿರಿ...
‘ಹಾವುಗಳು ರೈತ ಸ್ನೇಹಿ. ಬೆಳೆಗಳನ್ನು ತಿನ್ನಲು ಬರುವ ಇಲಿಗಳನ್ನು ಹಾವುಗಳು ಭಕ್ಷಿಸುತ್ತವೆ. ಈ ಮೂಲಕ ರೈತರು ಉತ್ತಮ ಫಸಲು ಪಡೆಯಲು ನೆರವಾಗುತ್ತವೆ. ಆದರೆ, ಹಾವು ಕಡಿತದಿಂದ ಸಾಯುವವರ ಪೈಕಿ ಅತಿ ಹೆಚ್ಚು ಮಂದಿ ರೈತರು.
ಪ್ರತಿ ವರ್ಷ ನಮ್ಮ ದೇಶದಲ್ಲಿ ಕಟ್ಟುಹಾವು, ನಾಗರಹಾವು, ಕೊಳಕುಮಂಡಲಹಾವು ಮತ್ತು ಗರಗಸ ಮಂಡಲ ಹಾವುಗಳ ಕಡಿತದಿಂದ 58 ಸಾವಿರ ಮಂದಿ ಸಾಯುತ್ತಿದ್ದು, ಅದರಲ್ಲಿ ಶೇ 90 ರಷ್ಟು ಮಂದಿ ರೈತರು. ರಾತ್ರಿ ವೇಳೆ ಹೊಲ, ಜಮೀನುಗಳಿಗೆ ತೆರಳುವ ರೈತರು ಬೂಟ್‌ಗಳನ್ನು ಧರಿಸದೇ, ಟಾರ್ಚ್‌ಗಳನ್ನು ಬಳದಿರುವುದೇ ಇದಕ್ಕೆ ಕಾರಣ.
ಹಾವುಗಳಿಗೆ ಎರಡು ಅಥವಾ ನಾಲ್ಕು ಹಲ್ಲು ಇರುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ. ಆದರೆ, ಹಾವುಗಳ ಬಾಯಲ್ಲಿ 300ಕ್ಕೂ ಜಾಸ್ತಿ ಹಲ್ಲುಗಳಿರುತ್ತವೆ. ಆದರೆ, ಕಚ್ಚುವಾಗ ವಿಷ ದಾಟಿಸಲು ಅವು ಎರಡು ದೊಡ್ಡ ಹಲ್ಲುಗಳನ್ನು ಬಳಕೆ ಮಾಡುತ್ತವೆ. ನಮ್ಮ ದೇಶದಲ್ಲಿ 300ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಅದರಲ್ಲಿ 60 ಬಗೆಯ ಹಾವುಗಳು ಮಾತ್ರ ವಿಷಪೂರಿತ.
ಹಾವಿನ ತಲೆಯ ಭಾಗದಲ್ಲಿ ವಿಷ ಸಂಗ್ರಹವಿದ್ದು, ಅದು ದಾಳಿಯ ಸಂದರ್ಭದಲ್ಲಿ ಕಚ್ಚುವ ಮೂಲಕ ಇನ್ನೊಂದು ದೇಹಕ್ಕೆ ದಾಟಿಸುತ್ತದೆ. ಹುಟ್ಟಿನಿಂದಲೇ ವಿಷ ಹೊಂದಿರುವುದರಿಂದ ಮರಿಹಾವುಗಳು ಕಚ್ಚಿದರೂ ಸಾಯುತ್ತಾರೆ.
ದೇಶದಲ್ಲಿ ಹಾವು ಕಡಿತದಿಂದ ಸಾಯುವ 58 ಸಾವಿರ ಮಂದಿ ಪೈಕಿ 30 ಸಾವಿರ ಮಂದಿ ಕಟ್ಟುಹಾವಿನಿಂದಲೇ ಸಾಯುತ್ತಾರೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಟ್ಟುಹಾವು ನಾಗರಹಾವಿಗಿಂತಲೂ 14 ಪಟ್ಟು ಹೆಚ್ಚು ವಿಷ ಹೊಂದಿರುತ್ತದೆ. ಆದರೆ, ಈ ಹಾವು ಕಡಿದಾಗ ದೇಹದಲ್ಲಿ ನೋವು ಕಾಣಿಸುವುದಿಲ್ಲ. ಇರುವೆ ಕಡಿದಂತೆ ಆಗುತ್ತದೆ. ಆದರೆ, ಸಾಯುವ ಹತ್ತು ಹದಿನೈದು ನಿಮಿಷಕ್ಕೆ ಮುಂಚೆ ಭಯಂಕರ ನೋವು ಕಾಣಿಸಿಕೊಳ್ಳುತ್ತದೆ. ಬೇರೆ ಹಾವುಗಳು ಕಚ್ಚಿದರೆ ವಿಪರೀತ ನೋವು ಇರುತ್ತದೆ.
ವಿಷಕಾರಿ ಹಾವುಗಳು ಎರಡು ಬಗೆಯಲ್ಲಿ ವಿಷ ಬಿಡುತ್ತವೆ. ನಾಗರಹಾವು ಕಚ್ಚಿದರೆ ಅದರ ವಿಷ ನರವ್ಯೂಹ ಪ್ರವೇಶಿಸಿ, ಕೊನೆಗೆ ಮೆದುಳು ನಿಷ್ಕ್ರೀಯಗೊಳಿಸುತ್ತದೆ. ಆಗ ಸಾವು ಸಂಭವಿಸುತ್ತದೆ. ಕೆಲವು ಹಾವುಗಳು ಕಚ್ಚಿದಾಗ ರಕ್ತದ ಮೂಲಕ ವಿಷ ಪ್ರವೇಶಿಸುತ್ತದೆ. ರಕ್ತ ಹೆಪ್ಪುಗಟ್ಟಿ ಮನುಷ್ಯ ಸಾಯುತ್ತಾನೆ.
ಏಷ್ಯಾ ಖಂಡದೊಳಗೆ ಅತಿಹೆಚ್ಚು ಕಿಂಗ್‌ಕೋಬ್ರಾಗಳು ಇರುವುದು ಕರ್ನಾಟಕದ ಆಗುಂಬೆಯಲ್ಲಿ. ಅತಿಹೆಚ್ಚು ವಿಷದ ಸಂಗ್ರಹ ಹೊಂದಿರುವುದು ಕೂಡ ಕಾಳಿಂಗ ಸರ್ಪವೇ. ಈ ಹಾವು ಕಚ್ಚಿದರೆ ಮನುಷ್ಯ 6ರಿಂದ 10 ನಿಮಿಷದಲ್ಲಿ ಸಾಯುತ್ತಾನೆ. ಆದರೆ, ಇಡೀ ಕಾಳಿಂಗ ಸರ್ಪದ ಇತಿಹಾಸದಲ್ಲಿ ಕಿಂಗ್‌ಕೋಬ್ರಾ ಕಡಿತದಿಂದ ಈವರೆಗೆ ಸತ್ತವರ ಸಂಖ್ಯೆ 50ಕ್ಕಿಂತಲೂ ಕಡಿಮೆ!
ಕಾಳಿಂಗಸರ್ಪ ಕಡಿಯುವುದಕ್ಕಿಂತಲೂ ಬೆದರಿಸಲು ಹೆಚ್ಚು ಪ್ರಯತ್ನಿಸುತ್ತದೆ. ವಯಸ್ಕ ಕಾಳಿಂಗ ಸರ್ಪ 18ರಿಂದ 20 ಅಡಿ ಉದ್ದವಿರುತ್ತದೆ. ಈ ಹಾವು ಕಚ್ಚಿದರೆ ನಮ್ಮ ದೇಶದಲ್ಲಿ ಆ್ಯಂಟಿವೆನಂ ಲಭ್ಯವಿಲ್ಲ.
ಹಾವು ಕಡಿತಕ್ಕೆ ಚಿಕಿತ್ಸೆ ಎಲ್ಲಿ?: ಹಾವು ಕಚ್ಚಿದರೆ ನಾಟಿ ವೈದ್ಯರ ಬಳಿ ಕರೆದೊಯುತ್ತಾರೆ. ಆದರೆ, ಹಾವು ಕಚ್ಚಿದ ನಂತರ ಬದುಕುವ ಅವಧಿ ತುಂಬ ಕಡಿಮೆ ಇರುತ್ತದೆ. ಹಾಗಾಗಿ, ತಕ್ಷಣವೇ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಕರೆದೊಯ್ಯಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿಸ್ನೇಕ್ ವೆನಂ ಅಂದರೆ ಹಾವಿನ ವಿಷದಿಂದಲೇ ತಯಾರಿಸಿದ ಔಷಧಿ ಲಭ್ಯವಿದ್ದು, ಸರಿಯಾದ ಸಮಯಕ್ಕೆ ಕೊಡಿಸಬೇಕು.
ಹಾವುಗಳು ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಪೊರೆ ಬಿಡುತ್ತವೆ ಎಂಬುದು ಜನಸಾಮಾನ್ಯರಲ್ಲಿರುವ ನಂಬಿಕೆ. ಆದರೆ, ಹಾವುಗಳು ತನ್ನ ಗಾತ್ರ ಹೆಚ್ಚಿಸಿಕೊಳ್ಳಲು ಪೊರೆ ಬಿಡುತ್ತವೆ. ಜತೆಗೆ ಉಣ್ಣೆ, ಜಿಗಣೆ ಅಂಟಿಕೊಂಡಿದ್ದರೆ ಪೊರೆ ಕಳಚುತ್ತದೆ. ಪೊರೆ ಕಳಚಿದ ನಂತರ ಹಾವಿಗೆ ಹೊಸ ಚರ್ಮ ಬರುತ್ತದೆ.
ಹಾವುಗಳಿಗೆ ವಿಷ ಇರುವುದು ಬೇರೆಯವರನ್ನು ಕಚ್ಚಿ ಸಾಯಿಸುವುದಕ್ಕಲ್ಲ. ಮನುಷ್ಯನ ಜೀರ್ಣಾಂಗ ವ್ಯವಸ್ಥೆಯಲ್ಲಿ ಜೊಲ್ಲು ಪ್ರಮುಖ ಪಾತ್ರ ವಹಿಸುವಂತೆ; ಹಾವುಗಳು ಆಹಾರ ಜೀರ್ಣಿಸಿಕೊಳ್ಳಲು ವೆನಂ ಸಹಕಾರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.