ADVERTISEMENT

ಗದಗ: ಜಿಲ್ಲೆಯಾದ್ಯಂತ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಅಭಿಯಾನ: ಸಿಇಒ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:43 IST
Last Updated 19 ನವೆಂಬರ್ 2024, 15:43 IST
ಭರತ್‌ ಎಸ್‌.
ಭರತ್‌ ಎಸ್‌.   

ಗದಗ: ‘ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ ‘ನಮ್ಮ ಶೌಚಾಲಯ ನಮ್ಮ ಗೌರವ’ ಹಾಗೂ ‘ಅಂದದ ಶೌಚಾಲಯ ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ನ. 19ರಿಂದ ಡಿ. 10ರವರೆಗೆ ಜಿಲ್ಲೆಯಾದ್ಯಂತ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂಬ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಭರತ್‌ ಎಸ್‌. ತಿಳಿಸಿದ್ದಾರೆ. 

‘ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವದ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ. 19ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತಿದೆ. ಈ ವಿಶೇಷ ಆಂದೋಲನದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಳಸದಿರುವ, ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ, ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ತಿ, ಮರು ಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಸುಂದರೀಕರಣಗೊಳಿಸಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಅವರನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

‘ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಗೆ ಉತ್ತೇಜನ, ವೈಯಕ್ತಿಕ ಗೃಹ ಶೌಚಾಲಯಗಳಿಗೆ ಮಂಜೂರಾತಿ ಪತ್ರ ವಿತರಿಸಲಾಗುವುದು. ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು ಸಮುದಾಯ ಶೌಚಾಲಯಗಳ ಅಂತಿಮ ಸಮೀಕ್ಷೆ ಮಾಡಿ, ಶೌಚಾಲಯಗಳ ಕಾರ್ಯನಿರ್ವಹಣೆ, ಶೌಚಾಲಯಗಳನ್ನು ಅಂದಗೊಳಿಸಲು ಬಿಡಿಸಿರುವ ಚಿತ್ರಕಲೆ, ಗೋಡೆ ಬರಹ, ಸುಂದರೀಕರಣ ಹಾಗೂ ಉತ್ತಮ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಮೌಲ್ಯಮಾಪನ ಮಾಡಿ, ಪುರಸ್ಕಾರ, ನಗದು ಬಹುಮಾನ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಗಳಲ್ಲಿರುವ ಕೈಗಾರಿಕೆಗಳು, ಸ್ವಯಂ ಸೇವಾ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಇತರ ಸಾಂಸ್ಥಿಕ ಸಂಸ್ಥೆಗಳನ್ನು ಗುರುತಿಸಿ, ಈ ಆಂದೋಲನದ ಭಾಗವಾಗಿರುವ ಫಲಾನುಭವಿಗಳಿಗೆ ಪುರಸ್ಕಾರ ವಿತರಣೆ, ಶೌಚಾಲಯಗಳ ಸೌಂದರ್ಯೀಕರಣ ಪುರಸ್ಕಾರ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

‘ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಿ , ಅವುಗಳನ್ನು ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸಲಾಗುವುದು. ನೈರ್ಮಲ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸ್ವಚ್ಛತಾ ಕಾರ್ಮಿಕರು, ಸ್ವಚ್ಛತಾಗಾರರನ್ನು ಗುರುತಿಸಿ ಗೌರವಿಸುವುದರ ಜತೆಗೆ ಅವರಿಗೆ ವಿವಿಧ ಯೋಜನೆಗಳಡಿ ದೊರೆಯುವ ಸೌಲಭ್ಯಗಳನ್ನು ಒದಗಿಸಲು ನೋಂದಾಯಿಸಿ, ಅವರಿಗೆ ಮಂಜೂರಾತಿ ಆದೇಶಗಳನ್ನು ನೀಡಲಾಗುವುದು. ಜಿಲ್ಲೆಯಾದ್ಯಂತ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ ಸುಂದರ ವೈಯಕ್ತಿಕ ಗೃಹ ಶೌಚಾಲಯ (ಉತ್ತಮ ಶೌಚಾಲಯ) ಸ್ಪರ್ಧೆ ಮತ್ತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು
ಭರತ್‌ ಎಸ್‌. ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.