ಗದಗ: ‘ದಿಂಗಾಲೇಶ್ವರ ಸ್ವಾಮೀಜಿ ಒಬ್ಬ ತಂತ್ರಗಾರ ರಾಜಕಾರಣಿಗೆ ಸಮನಾದವರು. ತಂತ್ರ– ಕುತಂತ್ರ ಮಾಡುವುದರಲ್ಲಿ ಎತ್ತಿದ ಕೈ. ಬ್ಲಾಕ್‌ಮೇಲ್ ಮಾಡುವುದರಲ್ಲೂ ನಿಸ್ಸೀಮ. ಹಾಗಾಗಿ, ಅವರು ಮಠ ತ್ಯಜಿಸಿ, ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಳ್ಳಬೇಕು. ಇಲ್ಲವಾದರೆ ಭಕ್ತರೇ ಅವರನ್ನು ತ್ಯಜಿಸುತ್ತಾರೆ’ ಎಂದು ಸಾಹಿತಿ ಬಸವರಾಜ ಸೂಳಿಬಾವಿ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನನ್ನ ವಿರೋಧ ಇರುವುದು ಪ್ರಹ್ಲಾದ ಜೋಶಿ ವಿರುದ್ಧವೇ ಹೊರತು; ಬಿಜೆಪಿ ಮೇಲಲ್ಲ ಅನ್ನುತ್ತಾರೆ. ಜೋಶಿ ಅವರಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅನ್ನುತ್ತಾರೆ. ಆದರೆ, ಯಾವ ರೀತಿ ಅನ್ಯಾಯ ಆಗಿದೆ? ಎಲ್ಲೆಲ್ಲಿ ಅನ್ಯಾಯ ಆಗಿದೆ? ಎಂಬ ವಿಷಯಗಳನ್ನು ಸ್ಪಷ್ಟಪಡಿಸುವುದಿಲ್ಲ. ಅಂಕಿ ಸಂಖ್ಯೆಗಳ ಸಮೇತವಾಗಿ ಆರೋಪ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದು ಹೇಳಿದರು.
‘ನಿಜಾರ್ಥದಲ್ಲಿ ಹಿಂದೂ ಧರ್ಮದ ಅಡಿಯೊಳಗೆ ಎಲ್ಲ ಧರ್ಮಗಳನ್ನು ಆಪೋಶನ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ. ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಾಗ ಇದೇ ಕಾರಣಕ್ಕೆ ಬಿಜೆಪಿ ಅದನ್ನು ಬೆಂಬಲಿಸಲಿಲ್ಲ. ಅಷ್ಟೇ ಏಕೆ, ದಿಂಗಾಲೇಶ್ವರ ಸ್ವಾಮೀಜಿ ಕೂಡ ಇದನ್ನು ವಿರೋಧಿಸಿದ್ದರು. ಅಂತವರು ಇವತ್ತು ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಇದೇ ಮೊದಲಬಾರಿಗೆ ಅವರ ಬಾಯಿಂದ ಲಿಂಗಾಯತ ಎಂಬ ಪದ ಹೊರಬಂದಿದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
‘ಲಿಂಗಾಯತ ಪರಂಪರೆ ಹತ್ತಿಕ್ಕುವ, ನಾಶಗೊಳಿಸುವ ಪ್ರಯತ್ನ ವಿರುದ್ಧದ ಹೋರಾಟ ನಡೆಸುತ್ತೇನೆ ಅಂದರೆ ಅದಕ್ಕೊಂದು ಅರ್ಥ ಇದೆ. ಆದರೆ, ಅವರು ಆ ಮಾತನ್ನು ಹೇಳುತ್ತಿಲ್ಲ. ಜೋಶಿ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಅನ್ನುತ್ತಾರೆ. ಈ ಸ್ಪರ್ಧೆ ಹಿಂದೆ ಅನೇಕ ತಂತ್ರಗಾರಿಕೆ ಅಡಗಿದೆ’ ಎಂಬ ಅನುಮಾನ ವ್ಯಕ್ತಪಡಿಸಿದರು.
‘ದಿಂಗಾಲೇಶ್ವರ ಸ್ವಾಮೀಜಿ ತಂತ್ರಗಳ ಮೂಲಕವೇ ಮೂರುಸಾವಿರ ಮಠಕ್ಕೆ ಪೀಠಾಧೀಶರಾಗಲು ಹೊರಟ್ಟಿದ್ದರು. ಹುಬ್ಬಳ್ಳಿಯ ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ವಿರೋಧಿಸಿದ್ದರು. ಅವರಲ್ಲಿ ಜೋಶಿ ಕೂಡ ಒಬ್ಬರು ಇದ್ದರು. ಆಗ ವಿರೋಧ ಮಾಡಿದವರ ವಿರುದ್ಧ ಸ್ಪರ್ಧೆ ಮಾಡುವುದು ಇವರ ಈಗಿನ ಉದ್ದೇಶ. ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದರೆ ಕಾಂಗ್ರೆಸ್ ಬೆಂಬಲಿಸುತ್ತದೆ. ಜೋಶಿ ಕೂಡ ಹೊಂದಾಣಿಕೆ ಬರಬಹುದು ಎಂಬ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ. ಮೂರುಸಾವಿರ ಮಠದ ಪೀಠಾಧೀಶರಾಗಲು ಇದ್ದ ವಿರೋಧ ತಣ್ಣಗೆ ಮಾಡಲು, ಇವತ್ತಿನ ರಾಜಕಾರಣವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು; ಜೋಶಿ ಅವರ ಮೇಲೆ ತಾತ್ವಿಕ ವಿರೋಧಗಳು ಏನಿಲ್ಲ’ ಎಂದು ಹೇಳಿದರು.
‘ಶಿರಹಟ್ಟಿ ಫಕೀರೇಶ್ವರ ಮಠ ಸೌಹಾರ್ದಕ್ಕೆ ಹೆಸರುವಾಸಿ. ಎಲ್ಲರನ್ನೂ ಪ್ರೀತಿಸು ಎಂಬುದೇ ಈ ಮಠದ ಮೂಲಮಂತ್ರ. ದಿಂಗಾಲೇಶ್ವರ ಶ್ರೀ ಈ ಮಠದ ಉತ್ತರಾಧಿಕಾರಿಯಾಗಿ ಎರಡು ವರ್ಷಗಳಾದವು. ಈ ಅವಧಿಯಲ್ಲಿ ಸೌಹಾರ್ದ ಪೂರಕವಾಗಿರುವ ಯಾವೊಂದು ಕಾರ್ಯಕ್ರಮ ಮಾಡಿಲ್ಲ. ದೇಶದ ಅನೇಕ ಕಡೆಗಳಲ್ಲಿ ಸೌಹಾರ್ದ ಕದಡುವ ಘಟನೆಗಳ ಸಾಕಷ್ಟು ನಡೆದಿವೆ. ರಾಜಕೀಯ ಹಿತಾಸಕ್ತಿ ಹೊಂದಿರುವ ಸಂಘಟನೆಗಳು ಉದ್ದೇಶಪೂರ್ವಕವಾಗಿ ಕೋಮುಗಲಭೆ ನಡೆಸುತ್ತ ಬಂದಿವೆ. ಇಷ್ಟಾದರೂ ಅವರು ಬಹಿರಂಗವಾಗಿ ವಿರೋಧಿಸಿದ್ದಾರೆಯೇ? ಸೌಹಾರ್ದ ಪರವಾಗಿ ನಿಂತಿದ್ದಾರೆಯೇ? ಈ ಬಗ್ಗೆ ಕನಿಷ್ಠ ಒಂದು ಹೇಳಿಕೆಯನ್ನಾದರೂ ಕೊಟ್ಟಿದ್ದಾರೆಯೇ?’ ಎಂದು ಹರಿಹಾಯ್ದರು.
‘ಸೌಹಾರ್ದದ ಪರವಾಗಿ ಕೆಲಸ ಮಾಡುವ ಮಠದ ಉತ್ತರಾಧಿಕಾರಿಯಾಗಿ ಈ ದೇಶದಲ್ಲಿ ಸೌಹಾರ್ದ ಕದಡುವ ಕೆಲಸ ಆದಾಗ ವಿರೋಧ ಮಾಡದೇ ಅವರು ಬಾಯಿಗೆ ಪಟ್ಟಿ ಕಟ್ಟಿಕೊಂಡು ಕುಳಿತಿದ್ದರು. ಇವರಿಗೆ ತತ್ವ ಯಾವತ್ತೂ ಮುಖ್ಯವಾಗಿಲ್ಲ. ಪರಂಪರೆಯೂ ಮುಖ್ಯವಲ್ಲ. ಅವಕಾಶಗಳನ್ನು ಬಳಸಿಕೊಳ್ಳುವ ಅವಕಾಶವಾದಿತನ ಧಾರಾವಾಳವಾಗಿದೆ’ ಎಂದು ತಿಳಿಸಿದರು.
‘ಒಂದು ಊರಿನ ಸೌಹಾರ್ದ ಉಳಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಜನರ ವೈಮನಸ್ಸನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಬದಲಾಗಿ ಅವರನ್ನು ವ್ಯವಸ್ಥಿತವಾಗಿ ಹಣಿಯುವ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಅನೇಕ ಪ್ರಕರಣಗಳಿದ್ದು, ಬಂಧಿಸುವಂತೆ ನಿರಂತರ ಹೋರಾಟ ಮಾಡಿದ್ದೇವೆ. ಸ್ವಾಮಿತ್ವಕ್ಕೆ ಬೇರೆ ಅರ್ಥ ಇದೆ. ಆದರೆ, ಸ್ವಾಮಿ ಅನ್ನಿಸಿಕೊಳ್ಳುವ ಯಾವ ಅರ್ಹತೆಯೂ ಇವರಿಗೆ ಇಲ್ಲ. ರಾಜಕಾರಣದ ಎಲ್ಲ ಗುಣಗಳೂ ಇವರಲ್ಲಿದ್ದು, ಮಠ ಬಿಟ್ಟು ನೇರವಾಗಿ ರಾಜಕಾರಣಕ್ಕೆ ಇಳಿಯಲಿ. ಅದುಬಿಟ್ಟು, ಮಠವನ್ನು, ಸ್ವಾಮಿತ್ವವನ್ನು ಬೆದರುಬೊಂಬೆ ರೀತಿ ಇನ್ನೊಬ್ಬರ ವಿರುದ್ಧ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ’ ಎಂದು ದೂರಿದರು.
ಮುತ್ತು ಬಿಳಿಯಲಿ, ಶೇಖಣ್ಣ ಕವಳಿಕಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.