ADVERTISEMENT

ಅಭಿವೃದ್ಧಿಯಲ್ಲಿ ಮಹಿಳೆಗೆ ಸ್ಥಾನ ನೀಡಿಲ್ಲ: ರೂಪಾ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2014, 6:54 IST
Last Updated 26 ಡಿಸೆಂಬರ್ 2014, 6:54 IST

ಹಾಸನ: ‘ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಉತ್ಪಾದನೆ, ವಿದೇಶ ವಿನಿಮಯ, ರಸ್ತೆ, ಕಟ್ಟಡ, ಭೂಮಿಯ ಒಡೆತನ, ಆಸ್ತಿಪಾಸ್ತಿ ಮುಂತಾದ ವಿಚಾರಗಳ ಬಗ್ಗೆ ಮಾತನಾಡುತ್ತೇವೆಯೇ ವಿನಾ ಮಹಿಳೆಯ ಅಭಿವೃದ್ಧಿ ಎಲ್ಲಿಯೂ ಉಲ್ಲೇಖವಾಗುವುದಿಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ರೂಪಾ ಹಾಸನ ವಿಷಾದ ವ್ಯಕ್ತಪಡಿಸಿದರು.

ನಗರದ ಸಿಐಟಿಯು ಕಚೇರಿಯ ‘ಶ್ರಮ’ದಲ್ಲಿ ಹಾಸನ ಜಿಲ್ಲಾ ಬಿಜಿವಿಎಸ್, ಎಸ್ಎಫ್ಐ, ಡಿವೈಎಫ್ಐ, ಕೆಪಿಆರ್ಎಸ್, ಸಿಐಟಿಯು ಹಾಗೂ ಇತರ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಹಾಸನ ಜಿಲ್ಲೆಯ ಅಭಿವೃದ್ಧಿಯ ಪ್ರಶ್ನೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ‘ಜಿಲ್ಲೆಯ ಮಹಿಳೆ ಮತ್ತು ಮಕ್ಕಳ ಪ್ರಶ್ನೆ’ಗಳ ಕುರಿತು ಮಾತನಾಡಿದರು.

‘2011–-12ರ ಜನಗಣತಿಯ ಅನುಸಾರ ಜಿಲ್ಲೆಯ ಸರಾಸರಿ ಸಾವಿರ ಪುರುಷರಿಗೆ 1004 ಮಹಿಳೆಯರಿದ್ದಾರೆ, ಸಾವಿರಕ್ಕೆ 37 ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ, ಮಹಿಳೆಯರ ಸಾಕ್ಷರತೆ ಶೇ 68.60ರಷ್ಟಿದೆ. ಅದರಲ್ಲೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಸಾಕ್ಷರತೆ ಶೇ 40 ಮಾತ್ರ ಇದೆ. ಗೃಹಿಣಿ ಎಂದರೆ ಕೆಲಸಕ್ಕೆ ಬಾರದವಳು ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರಾಗಿರುವ ಮಹಿಳೆಯರು ಹೆಚ್ಚು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಜಿಲ್ಲೆಯ ಮಟ್ಟಿಗೆ ಸ್ತ್ರೀಶಕ್ತಿ ಸಂಘಗಳು ರಚನೆಯಾದಾಗಿನಿಂದ ಆರ್ಥಿಕವಾಗಿ ಸಬಳಲಾಗುತ್ತಿರುವ ಮಹಿಳೆಯರು,

ಶೇ 99ರಷ್ಟು ಸಾಲ ಮರುಪಾವತಿ ಸಾಧಿಸಿದ್ದಾರೆ ಎಂದರು. ‘ಜಿಲ್ಲೆಯಲ್ಲಿ ಈಗಲೂ ಬಾಲ್ಯ ವಿವಾಹಗಳು, ಹೆಣ್ಣು ಭ್ರೂಣ ಹತ್ಯೆಗಳು ವರದಿಯಾಗುತ್ತಿವೆ. ಪಕ್ಕದ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನದಲ್ಲಿ ಹೆಚ್ಚು ಸ್ಯ್ಕಾನಿಂಗ್ ಕೇಂದ್ರಗಳಿವೆ. ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಪೊಲೀಸ್ ಠಾಣೆಯ ಅವಶ್ಯಕತೆ ಇದೆ ಎಂದು  ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಕ್ಕಳ ಸಮಗ್ರ ರಕ್ಷಣಾಧಿಕಾರಿ ವಿ. ಗೀತಾ, ‘ಮಹಿಳೆಯರ ಮೇಲಿನ ಶೋಷಣೆಗೆ ಕುಟುಂಬದ ಹಿನ್ನೆಲೆಯೂ ಕಾರಣವಾಗಿರುತ್ತದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಕೆಲಸವನ್ನು ನಾವು ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮತಾ ಅಧ್ಯಕ್ಷೆ ಮಮತಾ ಶಿವು, ‘ಮಹಿಳಾ ಅಭಿವೃದ್ಧಿಯಲ್ಲಿ ಹಾಸನ ಜಿಲ್ಲೆ ತುಂಬಾ ಹಿಂದುಳಿದಿದೆ. ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇದ್ದು, ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕು’ ಎಂದರು. ಕಾರ್ಮಿಕ ಮುಖಂಡ ಧರ್ಮೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.