ADVERTISEMENT

ಕಾಂಗ್ರೆಸ್‌ಗೆ ತಕ್ಕ ಪಾಠ: ವಿಜಯಶಂಕರ್‌

​ಪ್ರಜಾವಾಣಿ ವಾರ್ತೆ
Published 27 ಮೇ 2014, 9:04 IST
Last Updated 27 ಮೇ 2014, 9:04 IST

ಅರಸೀಕೆರೆ: ಕೇಂದ್ರದ ಯುಪಿಎ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನರು ಹಾಗೂ ಯುವಕ–ಯುವತಿಯರು ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಸೋಮುವಾರ ತಿಳಿಸಿದರು.

ಪಟ್ಟಣದ ವಾಚನಾಲಯ ರಸ್ತೆ ಬದಿಯಿರುವ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಆಯೋಜಿಸಿದ್ದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ವಾಜಪೇಯಿ ಆಡಳಿತ ಮತ್ತು ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಬಿಜೆಪಿ ಬೆಂಬಲಿಸಿದ್ದಾರೆ ಎಂದರು. ಮೋದಿ ಅಲೆಯ ಹೊಡೆತಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಿದೆ. ಇನ್ನಾದರೂ ಕಾಂಗ್ರೆಸ್‌ ಮುಖಂಡರು ಮೋದಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನರಹಂತಕ, ಸರ್ವಾಧಿಕಾರಿ ಎಂದೆಲ್ಲಾ ಮೋದಿಯನ್ನು ಸಿದ್ದರಾಮಯ್ಯ ನಿಂದಿಸಿದ್ದರು ಎಂದರು.

ಅಭಿನಂದನೆ: ಕಡೇ ಗಳಿಗೆಯಲ್ಲಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ, ಎಲ್ಲಾ ಮತದಾರರನ್ನು ಖುದ್ದು ಭೇಟಿ ಮಾಡಲಾಗದಿದ್ದರೂ  ಅರಸೀಕೆರೆ ಕ್ಷೇತ್ರದ  ಮತದಾರರು ಹಾಗೂ ಬಿಜೆಪಿ ಅಭಿಮಾನಿಗಳು ಮತ ನೀಡಿದ್ದಾರೆ. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರೇಣುಕುಮಾರ್‌, ತಾಲ್ಲೂಕು ಘಟಕದ ಅಧ್ಯಕ್ಷ ಹರಳಕಟ್ಟದ ರಮೇಶ್‌, ಜಿಲ್ಲಾ ಬಿಜೆಪಿ ವಕ್ತಾರ ಎನ್‌.ಡಿ. ಪ್ರಸಾದ್‌ ಮಾತನಾಡಿದರು. ಮಾಜಿ ಶಾಸಕ ಬಸವರಾಜು, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಟಿ. ಬಸವರಾಜು, ಎಪಿಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್‌, ತಾ.ಪಂ ಸದಸ್ಯರಾದ ಬಿ.ಆರ್‌. ಜಯಣ್ಣ, ಕಣಕಟ್ಟೆ ದಿನೇಶ್‌, ಮುಖಂಡ ಕೆ.ಎನ್‌. ದುರ್ಗಪ್ಪಶೆಟ್ಟಿ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಸುವರ್ಣ, ಕಾರ್ಯದರ್ಶಿಗಳಾದ ಮನೋಜ್‌ ಕುಮಾರ್‌, ಬೆಳಗುಂಬ ಲೋಕೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.