ಬೇಲೂರು: ಮುಂಗಾರು ಮಳೆ ಕೊರತೆಯಿಂದಾಗಿ ಇಲ್ಲಿಗೆ ಸಮೀಪದ ಯಗಚಿ ಜಲಾಶಯಕ್ಕೆ ಈ ವರ್ಷ ನೀರು ಹರಿದು ಬಂದಿಲ್ಲ. ಇದರಿಂದಾಗಿ ಬೇಲೂರು ಪಟ್ಟಣ ಸೇರಿದಂತೆ ಇತರ ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಯಗಚಿ ಅಣೆಕಟ್ಟೆ ನಿರ್ಮಾಣಗೊಂಡ ನಂತರ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿದ್ದು, ಇದರಿಂದಾಗಿ ಕೊರತೆ ತೀವ್ರವಾಗಿದೆ.ಪಟ್ಟಣಕ್ಕೆ ಸಮೀಪದ ಚಿಕ್ಕಬ್ಯಾಡಿಗೆರೆ ಬಳಿ ನಿರ್ಮಿಸಿರುವ ಯಗಚಿ ಜಲಾಶಯದಲ್ಲಿ 2002–03ನೇ ಸಾಲಿನಿಂದ ನೀರಿನ ಸಂಗ್ರಹಿಸಲಾಗುತ್ತಿದೆ. 14 ವರ್ಷಗಳ ಬಳಿಕ ಜಲಾಶಯ ನೀರಿನ ಕೊರತೆ ಎದುರಿಸುತ್ತಿದೆ.
964.6 ಮೀಟರ್ ಎತ್ತರದ ಯಗಚಿ ಅಣೆಕಟ್ಟೆಯಲ್ಲಿ ಮಂಗಳವಾರ 960 ಮೀಟರ್ ನೀರಿದೆ. 3.6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 1.59 ಟಿಎಂಸಿ ಅಡಿ ನೀರಿದೆ. ಈ ಪೈಕಿ 0.6 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಆಗಿದ್ದು, ಈ ನೀರು ಬಳಕೆಗೆ ದೊರೆಯುವುದಿಲ್ಲ. ಉಳಿಕೆ 0.9 ಟಿಎಂಸಿ ಅಡಿ ನೀರಿನ ಪೈಕಿ ಬೇಲೂರು, ಚಿಕ್ಕಮಗಳೂರು, ಫ್ಲೋರೈಡ್ ಪೀಡಿತ ಅರಸೀಕೆರೆ ತಾಲ್ಲೂಕಿನ 17 ಹಳ್ಳಿಗಳು, ಜಾವಗಲ್, ಹಳೇಬೀಡು ಸೇರಿದಂತೆ ವಿವಿಧ ಪಟ್ಟಣಗಳಿಗೆ ಕುಡಿಯುವ ನೀರು ನೀಡಲು 0.6 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ.
ತಾಲ್ಲೂಕಿನಲ್ಲಿ ಈ ವರ್ಷ ಶೇ 40ರಷ್ಟು ಮಳೆ ಕೊರತೆ ಉಂಟಾಗಿದೆ. ಯಗಚಿ ಜಲಾನಯನ ಪ್ರದೇಶದಲ್ಲೂ ಈ ಬಾರಿ ಮಳೆ ಬಿದ್ದಿಲ್ಲ. ಜುಲೈ ತಿಂಗಳಿನಲ್ಲಿ ಅಣೆಕಟ್ಟೆಗೆ 0.75 ಟಿಎಂಸಿ ಅಡಿ ನೀರು ಮಾತ್ರ ಹರಿದು ಬಂದಿದ್ದು, ಜುಲೈ 3ರಂದು ಗರಿಷ್ಠ 1735 ಕ್ಯುಸೆಕ್ ನೀರು ಬಂದಿದೆ. ಜೂನ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ತಾಲ್ಲೂಕಿನಾದ್ಯಂತ ಮಳೆ ಬೀಳದ ಕಾರಣ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ.
ಕಳೆದ ವರ್ಷ ಜುಲೈ ಅಂತ್ಯದ ವೇಳೆಗೆ ಜಲಾಶಯಕ್ಕೆ 2 ಟಿಎಂಸಿ ಅಡಿ ನೀರು ಹರಿದು ಬಂದಿತ್ತು. ಹೀಗಾಗಿ ಜಲಾಶಯ ಭರ್ತಿಯಾಗಿ 3.5 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿತ್ತು.
‘ಯಗಚಿ ಅಣೆಕಟ್ಟೆಯಿಂದ ಸುಮಾರು 36 ಸಾವಿರ ಎಕರೆ ಪ್ರದೇಶಕ್ಕೆ ಜಮೀನಿಗೆ ನೀರು ಹರಿಸಬೇಕಾಗಿದೆ ಯಾದರೂ ಪ್ರಸಕ್ತ ವರ್ಷ ಮಳೆ ಕೊರತೆಯಿಂದಾಗಿ ಬೆಳೆಗೆ ನೀರು ನೀಡಲು ಸಾಧ್ಯವಿಲ್ಲ. ಕುಡಿಯುವುದಕ್ಕೆ ಮಾತ್ರ ನೀರು ನೀಡುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ’ ಎಂದು ಯಗಚಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ರಾಜ ಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆಕೊರತೆ ಇದೇ ರೀತಿ ಮುಂದುವರಿದರೆ, ಬೇಲೂರು, ಚಿಕ್ಕಮ ಗಳೂರು, ಅರಸೀಕೆರೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿಗೂ ತತ್ವಾರವಾಗುವ ಸಾಧ್ಯತೆ ಹೆಚ್ಚಾಗಿದ್ದು, ಜನರು ನೀರನ್ನು ಮಿತವಾಗಿ ಬಳೆಸುವ ಅನಿವಾರ್ಯತೆ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.