ಹಾಸನ: ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜ್ಞಾನದ ಕಣಜ ಎಂದು ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಸ್ಕೃತಿ ಚಿಂತಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಡಾ.ಗೊರೂರು ಸಾಹಿತ್ಯ ಮರು ಓದು’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಸ್ವಾಮಿ ಅಯ್ಯಂಗಾರ್ ಜ್ಞಾನಾರ್ಜನೆ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಸಾಧನೆಗೆ ಮಿತಿ ಇರಲಿಲ್ಲ. ಪ್ರಸ್ತುತ ಗ್ರಾಮೀಣ ಪ್ರದೇಶಗಳನ್ನು ಮತದಾರರ ಸಂತೆಗಳನ್ನಾಗಿ ಗುರುತಿಸಲಾಗುತ್ತಿದೆ. ಒಬ್ಬ ಸಂಸ್ಕೃತಿ ಚಿಂತಕ ಮೊದಲು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕು. ಇಂದು ನಮ್ಮ ಆಲೋಚನಾ ಕ್ರಮ ಕುರುಡಾಗಿದೆ. ಒಬ್ಬ ಉದ್ಯಮಿ ಸ್ಥಳೀಯ ಚಿಂತನೆ ಹೊರತುಪಡಿಸಿ ಕೇವಲ ಅಂತರರಾಷ್ಟ್ರೀಯ ಚಿಂತನೆಗಳಿಗೆ ಮನ್ನಣೆ ನೀಡುತ್ತಿದ್ದಾನೆ ಎಂದರು.
ಗೊರೂರರ ಲೇಖನಗಳಲ್ಲಿ ರಾಷ್ಟ್ರ ಮತ್ತು ದೇಶಿಯ ಸತ್ವ ಅಡಗಿದೆ. ಸಾಹಿತ್ಯದ ಅಭಿವ್ಯಕ್ತಿ ಹಾಗೂ ಸಂಸ್ಕೃತಿ ಚಿಂತನೆಗಳಾಗಿ ವಿಂಗಡಿಸಬಹುದು. ಅವರ ಜೀವನ ರಥ ಖಾದಿ ಬಟ್ಟೆ ಮಾರಾಟ ಮಾಡುವುದರಿಂದ ಪ್ರಾರಂಭವಾಗಿ ದೇಶ ಕಟ್ಟುವ ವ್ಯಕ್ತಿಯಾಗಿ ಬೆಳೆದರು. ವ್ಯಕ್ತಿ ತನ್ನನ್ನು ತಾನು ಮೊದಲು ವಿಮರ್ಶಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಗೊರೂರರು ದಟ್ಟ ಗ್ರಾಮೀಣ ಬದುಕಿನ ಸೊಗಡನ್ನು ಹತ್ತಿರದಿಂದ ಸವಿದಿದ್ದರು. ಹಳ್ಳಿ ಹಾಗೂ ನಗರ ಪ್ರದೇಶವನ್ನು ಸಮಾನವಾಗಿ ಸ್ವೀಕರಿಸಿದ್ದರು. ಅಲ್ಲದೆ, ಕಥೆ, ಪ್ರಬಂಧ, ಕಾದಂಬರಿ, ಪ್ರವಾಸಿ ಸಾಹಿತ್ಯ ವಿವಿಧ ಕ್ಷೇತ್ರದಲ್ಲಿ ತಮ್ಮದೆ ಛಾಪು ಮೂಡಿಸಿ ದ್ದಾರೆ. ಅವರ ಬರವಣಿಗೆಯನ್ನು ಯುವ ಪೀಳಿಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಗೊರೂರರು ಕೇವಲ ಒಬ್ಬ ಕನ್ನಡದ ಸಾಹಿತಿ ಅಲ್ಲ, ಸಾಮಾಜಿಕ ವಿಜ್ಞಾನದ ತತ್ವಜ್ಞಾನಿ. ಅವರಲ್ಲಿ ಅರಿವು ಅಗಾಧವಾಗಿತ್ತು. ಜತೆಗೆ ಹಾಸ್ಯ ಭರಿತ ಮತ್ತು ವಿಡಂಬನಾತ್ಮಕವಾಗಿತ್ತು ಎಂದು ಬಣ್ಣಿಸಿದರು.
ಮೊದಲ ಗೋಷ್ಠಿಯಲ್ಲಿ ಗೊರೂರರ ಗಾಂಧಿವಾದ ಮತ್ತು ಸ್ವರಾಜ್ಯ ಪರಿಕಲ್ಪನೆ ವಿಷಯ ಕುರಿತು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಧುವನ ಶಂಕರ್ ಪ್ರಬಂಧ ಮಂಡಿಸಿದರು. ‘ಗೊರೂರರ ಜಾನಪದ ಸಾಧನೆ’ ವಿಷಯ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಜಿ.ವೆಂಕಟಯ್ಯ ಮಾತನಾಡಿದರು.
‘ಗೊರೂರ ಸಾಹಿತ್ಯದಲ್ಲಿ ಗ್ರಾಮ ಸಮಾಜ’ ವಿಷಯ ಕುರಿತು ಉಜಿರೆ ಎಸ್‌ಡಿಎಂ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ವಿ.ನಾಗರಾಜಪ್ಪ ಮಾತನಾಡಿ ದರು. ಪ್ರಾಧ್ಯಾಪಕರಾದ ಡಾ.ಕೆ. ಶಾರದಾ, ಟಿ.ಪಿ.ಪುಟ್ಟರಾಜು, ರಾಘವೇಂದ್ರ ಕರ್ಜೆ, ಪಿ.ಶಿವಪ್ರಸಾದ್, ಡಾ.ಎಚ್.ಎನ್.ಹರಿಣಿ, ಎಂ.ಇ. ಶೋಭಾ, ಎಸ್.ರಾಮಚಂದ್ರ, ವೈ.ಪಿ. ಮಲ್ಲೇಗೌಡ, ಎಚ್.ಡಿ.ಆನಂದಸ್ವಾಮಿ, ಪಾಲಾಕ್ಷಿನಾಯಕ್, ಸೋಮಶೇಖರ ದೇಸಾಯಿ, ರಶ್ಮೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.