ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆ (ಶ್ರವಣಬೆಳಗೊಳ): ‘ದಲಿತ ಹಾಗೂ ರೈತ ಚಳವಳಿಗಳು ಜೊತೆಜೊತೆಯಲ್ಲೇ ನಡೆದ ಜಿಲ್ಲೆ ಹಾಸನ ಎಂಬುದು ಹೆಮ್ಮೆಯ ವಿಷಯ’ ಎಂದು ಉಪನ್ಯಾಸಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.
ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ‘ಹಾಸನ ಜಿಲ್ಲಾ ದರ್ಶನ’ ಕುರಿತು ನಡೆದ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘80ರ ದಶಕದಲ್ಲಿ ಹಾಸನ ಜಿಲ್ಲೆಯಲ್ಲಿ ನಡೆದ ರೈತ ಹಾಗೂ ದಲಿತ ಚಳವಳಿಗಳು ಸರ್ಕಾರವನ್ನು ನಡುಗಿಸಿದ್ದವು. ಈ ಎರಡೂ ಸಂಘಟನೆಗಳು ಒಟ್ಟಿಗೆ ಚಳವಳಿಗಳನ್ನು ನಡೆಸಿದ್ದರಿಂದ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆಗಳಾದವು. 1830ರಲ್ಲಿಯೇ ಪ್ರಬಲವಾಗಿ ರೈತ ಚಳವಳಿ ನಡೆಸಿದ 5 ಮಂದಿ ಹೋರಾಟಗಾರರನ್ನು ಅಂದಿನ ಮೈಸೂರು ಸರ್ಕಾರ ಗಲ್ಲಿಗೇರಿಸಿದ್ದನ್ನು ನೆನಪು ಮಾಡಿಕೊಂಡರೆ ಜಿಲ್ಲೆಯ ನೆಲ ಹೋರಾಟಗಾರರನ್ನು ಹುಟ್ಟುಹಾಕಿದೆ ಎಂಬುದು ಅರ್ಥವಾಗುತ್ತದೆ ಎಂದರು.
ರಾಷ್ಟ್ರೀಯವಾದ ಮತ್ತು ಸಮಾಜವಾದ ಚಳವಳಿಗೂ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ ಎಂದ ಅವರು, ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ರಾಮಸ್ವಾಮಿ ಅಯ್ಯಂಗಾರರ ಪುತ್ರ ರಾಮಚಂದ್ರ ತುಮಕೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು. ಜಿಲ್ಲೆಯ ಜಾವಗಲ್ ಗ್ರಾಮದ ರಾಮಸ್ವಾಮಿ ಎಂಬ ವಿದ್ಯಾರ್ಥಿ ಸ್ವಾತಂತ್ರ್ಯ ಚಳವಳಿಯಲ್ಲಿದ್ದಾಗ ಮೈಸೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ಇಂತಹ ಸಾಕಷ್ಟು ಉದಾಹರಣೆಗಳಿವೆ. ರಾಮಸ್ವಾಮಿ ಅಯ್ಯಂಗಾರ್ ಗಾಂಧಿವಾದಿ ಅಷ್ಟೇ ಅಲ್ಲ ಗಾಂಧಿಯನ್ನೇ ತನ್ನೊಳಗೆ ಆವಾಹಿಸಿಕೊಂಡಿದ್ದರು’ ಎಂದರು.
ಪ್ರಗತಿಪರ ಚಳವಳಿಗಳ ಬಗ್ಗೆ ಮಾತನಾಡಿದ ಮಂಜುನಾಥ್ ದತ್ತ, ‘70ರಿಂದ 80ರ ದಶದಲ್ಲಿ ಹಾಸನ ಜಿಲ್ಲೆಯ ಆಡಳಿತವನ್ನು ನಡುಗಿಸಿದ ರೈತ ಚಳವಳಿಯಲ್ಲಿ ಮಹಿಳೆಯರು ಹೆಜ್ಜೆ ಹಾಕಿದ್ದು ಇಂದು ಇತಿಹಾಸ. ರೈತ ಚಳವಳಿ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ಹುಟ್ಟಿದರೂ, ಪ್ರಬಲವಾಗಿ ಬೆಳೆದು ಒಂದು ಸರ್ಕಾರವನ್ನೇ ಕೆಳಗೆ ಇಳಿಸಿದ್ದು ಹಾಸನ ಜಿಲ್ಲೆ’ ಎಂದರು.
ಜಿಲ್ಲೆಯ ಶಾಸನಗಳ ಬಗ್ಗೆ ಡಾ.ಶ್ರೀವತ್ಸ ಎಸ್. ವಟಿ ಹಾಗೂ ಹಾಸನ ಜಿಲ್ಲೆಯ ಸಾಹಿತಿಗಳ ಬಗ್ಗೆ ಶೈಲಜಾ ಹಾಸನ ಮಾತನಾಡಿದರು.
ಜಾನೇಕರೆ ಆರ್. ಪರಮೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.