ಸಕಲೇಶಪುರ: ಮುಂಗಾರು ಮಳೆ ಆರಂಭವಾದುದರ ಹಿಂದೆಯೇ ತಾಲ್ಲೂಕು ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹಸಿರಿನ ವೈಭವ ತಲೆಎತ್ತಿದೆ. ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಈಗ ಅರಣ್ಯ ಸಂಪತ್ತಿನ ಮೇಲೆ ಮೋಡಗಳ ತೂಗುಯ್ಯಾಲೆ ಸಾಗಿದೆ.
ಹಸಿರಿನಿಂದ ಕಂಗೊಳಿಸುತ್ತಿರುವ ಇಲ್ಲಿಯ ಬೆಟ್ಟ, ಗುಡ್ಡ, ದಿಣ್ಣೆ, ಮಳೆ ಕಾಡುಗಳ ನಡುವೆ ಆಗಸದಲ್ಲಿ ವಿವಿಧ ಭಂಗಿಗಳ ನರ್ತಿಸಿದಂತೆ ಚಲಿಸುವ ಮೋಡಗಳ ಪ್ರಕೃತಿಯ ಮನಮೋಹಕ ದೃಶ್ಯ ಕಣ್ಣಿಗೆ ಹಬ್ಬವುಂಟು ಮಾಡುತ್ತಿದೆ.
ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನಲ್ಲಿರುವ ಹಾನುಬಾಳು, ಹೆತ್ತೂರು, ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಕಂಡುಬರುವ ಬಿಸಿಲೆ, ಕಾಗಿನಹರೆ, ಕೆಂಚನಕುಮರಿ, ಕೆಂಪುಹೊಳೆ, ಮೂರುಕಣ್ಣು ಗುಡ್ಡ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಪ್ರಕೃತಿ ಹಸಿರು ಸೀರೆಯುಟ್ಟಿದ್ದಾಳೆ.
ಮುಗಿಲಿಗೆ ಮುಖಮಾಡಿ ನಿಂತಿರುವ ಗುಡ್ಡ, ಬೆಟ್ಟ, ಗಿರಿ, ಶಿಖರಗಳ ಮೇಲೆ ಶ್ವೇತಧಾರಿಯಂತೆ ಮೋಡಗಳು ಹಾಸುಹೊಕ್ಕಿವೆ. ಸಕಲೇಶಪುರದ ನೈಸರ್ಗಿಕ ಸೌಂದರ್ಯ ಕಣ್ತುಂಬಿಕೋಳ್ಳಲು ಪ್ರವಾಸಿಗರನ್ನು ಆಕರ್ಷಿಸಿಸಲು ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.