ಶ್ರವಣಬೆಳಗೊಳ (ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ): ‘ಈ ಮುಂಚೆ ಕನ್ನಡಕ್ಕೆ ಸಂಸ್ಕೃತದಿಂದ ಎದುರಾಗಿದ್ದ ಆತಂಕವೇ ಇಂದು ಇಂಗ್ಲಿಷಿನಿಂದ ಆಗುತ್ತಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಮಲ್ಲಿಕಾ ಘಂಟಿ ಹೇಳಿದರು.
‘ಕನ್ನಡ ಬದುಕು– ಚಳವಳಿಗಳು’ ಕುರಿತ ಎರಡನೇ ಗೋಷ್ಠಿಯಲ್ಲಿ, ‘ಸಾಹಿತ್ಯ, ಭಾಷೆ, ಸಂಸ್ಕೃತಿ– ಚಳವಳಿಗಳು’ ಕುರಿತು ಮಾತನಾಡಿದ ಅವರು, ‘ಜಾಗತೀಕರಣವು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಉಂಟು ಮಾಡಿರುವ ಪರಿಣಾಮಗಳನ್ನು ಭಿನ್ನನೆಲೆಯಲ್ಲಿ ಚರ್ಚಿಸಬೇಕಾದ ಅಗತ್ಯವಿದೆ’ ಎಂದರು.
‘ಸಮಾಜದಲ್ಲಿ ಬಹುಮುಖಿ ಸಂಸ್ಕೃತಿಗೆ ವಿರುದ್ಧವಾಗಿ ವೈದಿಕ ಮತ್ತು ಏಕಮುಖಿ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಎಲ್ಲರೂ ಒಂದುಗೂಡಿ ಬಹುಮುಖಿ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಸವಾಲು ನಮ್ಮ ಮುಂದಿದೆ’ ಎಂದು ಅಭಿಪ್ರಾಯಪಟ್ಟರು.
‘ಸಂದರ್ಭಕ್ಕೆ ತಕ್ಕಂತೆ ಆಗಾಗ ಚಳವಳಿಗಳು ಜೀವ ತಳೆಯುತ್ತಾ ಬಂದಿರುವುದನ್ನು ನಾವು ಕಂಡಿದ್ದೇವೆ. ಸದ್ಯದ ಕೊರತೆಯೆಂದರೆ, ಚಳವಳಿಗಳನ್ನು ಮುನ್ನಡೆಸಿಕೊಂಡು ಹೋಗಬೇಕಾದವರೇ ಇಂದು ಅಂಧಕಾರದಲ್ಲಿದ್ದಾರೆ. ಇದು ಪ್ರಗತಿಪರ ಚಳವಳಿಗಳು ತಮ್ಮ ಪ್ರಖರತೆ ಹೆಚ್ಚಿಸಿಕೊಳ್ಳಲು ಅಡ್ಡಿಯಾಗಿದೆ’ ಎಂದು ಮಲ್ಲಿಕಾ ಘಂಟಿ ನುಡಿದರು.
‘ಸಾಮಾಜಿಕ ಚಳವಳಿಗಳು’ ಕುರಿತು ಮಾತನಾಡಿದ ಪ್ರೊ.ನಟರಾಜ ಹುಳಿಯಾರ್, ‘ಈ ದೇಶದ ಮಣ್ಣಿನಲ್ಲಿ ಹುಟ್ಟಿದ ಚಳವಳಿಗಳು ಐದು ಸಾವಿರ ವರ್ಷದ ಚರಿತ್ರೆಯನ್ನು ಕೇವಲ ನೂರು ವರ್ಷಗಳಲ್ಲಿ ಬದಲಿಸಿವೆ’ ಎಂದು ಹೇಳಿದರು.
‘ಕೊಲ್ಲಾಪುರದ ಶಾಹು ಮಹಾರಾಜ ಹಾಕಿಕೊಟ್ಟ ಮಾದರಿಯನ್ನು ಆಧರಿಸಿ, ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯ ಚಳವಳಿಯನ್ನು ಆರಂಭಿಸಿದರು’ ಎಂದರು.
‘ರೈತ ಚಳವಳಿಯ ಮೇರು ನಾಯಕ ಪ್ರೊ.ಎಂ. ನಂಜುಂಡಸ್ವಾಮಿ ಅವರು ಮೊದಲಿಗೆ ಬಜೆಟ್‌ನಲ್ಲಿ ರೈತರ ಪ್ರಾತಿನಿಧ್ಯ ಕುರಿತು ವಿಶ್ಲೇಷಿಸಿ ಚರ್ಚಿಸಿದರು. ತದನಂತರ ದಲಿತ ಸಂಘಟನೆಗಳು ಕೂಡ ಸಾಮಾಜಿಕ ನ್ಯಾಯ ತತ್ವದಡಿ ಬಜೆಟ್‌ನಲ್ಲಿ ತಮಗೆ ಸಿಗಬೇಕಾದ ಪ್ರಾತಿನಿಧ್ಯದ ಪ್ರಜ್ಞೆ ಬೆಳೆಸಿಕೊಂಡು ಕೇಳತೊಡಗಿದರು’ ಎಂದರು.
‘ಈ ನೆಲದಲ್ಲಿ ಭಾಷೆಯು ಜಡಗೊಂಡಾಗ ಅದಕ್ಕೆ ಚುರುಕು ಮಟ್ಟಿಸಿ ಎಚ್ಚರಗೊಳಿಸುತ್ತಾ ಬರುವಲ್ಲಿ ಚಳವಳಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾಮಾಜಿಕ ಚಳವಳಿಗಳಿಗೆ ಅದರದೇ ಆದ ಭಾಷೆಯ ಅಗತ್ಯವಿದೆ. ಅದನ್ನೂ ಕಾಲ ಕಾಲಕ್ಕೆ ಜನರ ಮುಂದಿಟ್ಟಾಗ, ಜನರ ಮನಸ್ಸಿನಲ್ಲಿ ಚಳವಳಿಯೊಂದು ಹೆಚ್ಚು ಕಾಲ ನೆಲೆಗೊಳ್ಳುತ್ತದೆ’ ಎಂದು ಕಿವಿಮಾತು ಹೇಳಿದರು.
‘ಸಿದ್ದರಾಮಯ್ಯ ಸರ್ಕಾರದ ಎರಡು ಅಹಿಂದ ಬಜೆಟ್‌ಗಳನ್ನು ಇಂದಿಗೂ ಅರ್ಥಮಾಡಿಕೊಳ್ಳದಿರುವುದು ಹಿಂದುಳಿದ ವರ್ಗದವರಿನ್ನೂ ಎಚ್ಚರಗೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಹಿಂದುಳಿದವರು ದಲಿತರ ನಾಯಕತ್ವವನ್ನು ಒಪ್ಪಿಕೊಂಡಾಗ ಮಾತ್ರ ಅವರ ಕಣ್ಣು ತೆರೆಯುತ್ತದೆ’ ಎಂದು ಹುಳಿಯಾರ್ ಕರೆ ನೀಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗತಜ್ಞ ಕೆ. ಮರುಳಸಿದ್ದಪ್ಪ ಅವರು, ‘ಶಿಕ್ಷಣ ಪದ್ಧತಿಯಲ್ಲಿ ಕನ್ನಡ ಮಾಧ್ಯಮ ಜಾರಿಯಾಗಬೇಕಾದರೆ ಮಾತೃಭಾಷೆ ಮತ್ತು ರಾಜ್ಯ ಭಾಷೆಗಳ ಸ್ಥಾನಮಾನ ಏನು ಎಂದು ಚರ್ಚೆಯಾಗಬೇಕು. ಈ ಚರ್ಚೆ ರಾಷ್ಟ್ರಮಟ್ಟದಲ್ಲಿ ನಡೆದು ಜನಾಭಿಪ್ರಾಯದೊಂದಿಗೆ ಚಳವಳಿಯ ರೂಪ ತಾಳಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಗೊಂದಲ ಬಗೆಹರಿಯಬಲ್ಲದು’ ಎಂದರು.
ಸಮ್ಮೇಳನಕ್ಕೆ ಬಸ್ ಸೌಕರ್ಯ
ಹಾಸನ: ಶ್ರವಣಬೆಳಗೊಳದಲ್ಲಿ ಭಾನುವಾರದಿಂದ ಆರಂಭವಾಗಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಲು ಅನುಕೂಲವಾಗುವಂತೆ ಜನರಿಗೆ ಸಂಸ್ಥೆಯವರು ಸುಮಾರು 40 ಬಸ್ಸುಗಳ ವ್ಯವಸ್ಥೆ ಮಾಡಿದ್ದು, ಭಾನುವಾರ ಈ ಬಸ್ಸುಗಳೆಲ್ಲ ಜನರಿಂದ ತುಂಬಿದ್ದವು.
ನಗರದ ಹೊಸ ಬಸ್ ನಿಲ್ದಾಣದಿಂದ ಶ್ರವಣಬೆಳಗೊಳಕ್ಕೆ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಭಾನುವಾರ ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮ ಇದ್ದುದರಿಂದ ಮುಂಜಾನೆಯಿಂದಲೇ ಸಮ್ಮೇಳನಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು.
ಮಧ್ಯಾಹ್ನ 11.30ರ ಸುಮಾರಿಗೆ 30ಕ್ಕೂ ಹೆಚ್ಚು ಬಸ್‌ಗಳು ಸಮ್ಮೇಳನಕ್ಕೆ ಹೀಗಿದ್ದವು. ಭಾನುವಾರ ರಜೆ ಇದ್ದುದರಿಂದ ಯುವಕ ಯುವತಿಯರು ಅನೇಕ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ತೆರಳುತ್ತಿದ್ದು ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.