ADVERTISEMENT

12 ಸ್ಥಾನ ಬಿಟ್ಟು ಕೊಡಿ, ಇಲ್ಲವಾದರೆ ಫ್ರೆಂಡ್ಲಿ ಫೈಟ್‌: ರೇವಣ್ಣ ಖಡಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 12:05 IST
Last Updated 20 ಫೆಬ್ರುವರಿ 2019, 12:05 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಕೋಮುವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನ ಕೊಡಬೇಕು ಎಂದು ಕೇಳಿದ್ದೇವೆ. ಕಾಂಗ್ರೆಸ್ ನವರು ನೀಡಿದರೆ ಸಂತೋಷ. ಒಪ್ಪದಿದ್ದರೆ ಫ್ರೆಂಡ್ಲಿ ಫೈಟ್ಗೂ ರೆಡಿ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

‘ಮೈತ್ರಿ ಹಾಗೂ ಸೀಟು ಹಂಚಿಕೆ ಸಂಬಂಧ ಜೆಡಿಎಸ್ ರಾಷ್ಟ್ರೀಯ ನಾಯಕ ದೇವೇಗೌಡರು ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ. ಅಲ್ಲಿ ಸೀಟು ಹಂಚಿಕೆ ಸಂಬಂಧ ಹೊಂದಾಣಿಕೆಯಾದರೆ ಸಂತೋಷ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ಮುಂದೆಯೂ ರಾಜ್ಯದ 28 ಕ್ಷೇತ್ರಗಳನ್ನೂ ಮೈತ್ರಿ ಪಕ್ಷ ಗೆಲ್ಲಬೇಕಾದರೆ ಹೊಂದಾಣಿಕೆಗೆ ಬರುವುದು ಅನಿವಾರ್ಯ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 18 ಸ್ಥಾನಗಳನ್ನು ಗೆದ್ದು ತೋರಿಸಿದ್ದಾರೆ’ ಎಂದರು.

ADVERTISEMENT

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಅವರು ಅಭ್ಯರ್ಥಿಯಾಗುತ್ತಾರೆ’ ಎಂಬ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕಿದ ರೇವಣ್ಣ, ಯಾರು ಚುನಾವಣೆಗೆ ನಿಲ್ಲಬೇಕು ಎಂಬ ವಿಚಾರದಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮ’ ಎಂದು ಪ್ರಶ್ನೆಗೆ ಉತ್ತರಿಸಿದರು.

‘ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲು ನನ್ನ ಯಾವುದೇ ಅಭ್ಯಂತರವಿಲ್ಲ. ಬೇಕಿದ್ದರೆ, ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿ’ ಎಂದು ತಿರುಗೇಟು ನೀಡಿದ ಅವರು, ‘ಕೊನೆ ಚುನಾವಣೆಯಾಗಿರುವ ಕಾರಣ ಹಾಸನದಿಂದ ಎಚ್‌.ಡಿ.ದೇವೇಗೌಡರೇ ಸ್ಪರ್ಧಿಸಬೇಕೆಂಬುದು ನನ್ನ ಅಭಿಪ್ರಾಯ. ಪ್ರಜ್ವಲ್‌ ಕಣ್ಣಕ್ಕಿಳಿಸಬೇಕೋ, ಮತ್ತೊಬ್ಬರು ಸ್ಪರ್ಧಿಸುತ್ತಾರೋ ಎಂಬುದನ್ನು ಪಕ್ಷದ ನಾಯಕರು ತೀರ್ಮಾನಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.