ಹಾಸನ: 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯವಾಗಿ ಕರ್ನಾಟಕವನ್ನು ಘೋಷಿಸುವ ಸಲುವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಡೆಂಗಿ ಮತ್ತು ಮಲೇರಿಯಾ ಪ್ರಕರಣಗಳು ಕಡಿಮೆಯಾಗಿವೆ. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಿಗೆ ಸ್ಥಳೀಯ ಸಂಸ್ಥೆಗಳು ಸಾಕಷ್ಟು ನೆರವು ನೀಡಿವೆ ಎಂದು ಗುರುವಾರ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಹೇಳಿದರು. ಡೆಂಗಿ ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬಂದಿವೆ. ಇಲಾಖೆ ಸಿಬ್ಬಂದಿ ಲಾರ್ವಾ ಸರ್ವೆ ನಡೆಸಿದ್ದಾರೆ. ಕೆರೆ, ಬಾವಿ, ಹಳ್ಳ ಸೇರಿದಂತೆ ನೀರು ನಿಲ್ಲುವ ತಾಣಗಳಲ್ಲಿ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗಾಂಬೂಸಿಯಾಗಳನ್ನು ಬಿಡಲಾಗಿದೆ. ಇದರಿಂದ ಸೋಂಕು ಹರಡುವ ಸೊಳ್ಳೆಗಳ ಸಂತಾನ್ಪೋತ್ತತ್ತಿ ಹತೋಟಿಗೆ ಬರುತ್ತದೆ ಎಂದರು.
ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಆರೋಗ್ಯ ಕಾರ್ಯಕರ್ತರು ಲಾರ್ವಾ ಸಮೀಕ್ಷೆ ಮತ್ತು ನಾಶ ಪಡಿಸುವ ಕಾರ್ಯ ನಡೆಸುತ್ತಿದ್ದಾರೆ. ಈಗ ಲಾರ್ವಾಗಳನ್ನು ಹುಡುಕಿದರೂ ಸಿಗುತ್ತಿಲ್ಲ. ಇಲಾಖೆಯ ಪರಿಶ್ರಮದಿಂದ ಲಾರ್ವಾಗಳನ್ನು ನಾಶ ಮಾಡಲಾಗಿದೆ ಎಂದು ಹೇಳಿದರು.
ಜ್ವರದಿಂದ ಬಳಲುತ್ತಿದ್ದ ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ ಆತ ಡೆಂಗಿ ಅಥವಾ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾನಾ ಎಂಬುದನ್ನು ಆರೋಗ್ಯ ಇಲಾಖೆಯಿಂದ ದೃಢಪಡಿಸಬೇಕಾಗುತ್ತದೆ. ಅಲ್ಲಿವರೆಗೆ ಸಾರ್ವಜನಿಕರು ತಪ್ಪು ನಿರ್ಧಾರಕ್ಕೆ ಬರುವುದು ಬೇಡ ಎಂದು ಸಲಹೆ ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜ್‍ಗೋಪಾಲ್ ಮಾತನಾಡಿ, ಜೂನ್ ತಿಂಗಳನ್ನು ಮಲೇರಿಯಾ ಹಾಗೂ ಜುಲೈ ಅನ್ನು ಡೆಂಗಿ ವಿರೋಧಿ ಮಾಸಾಚರಣೆಯಾಗಿ ಹಮ್ಮಿಕೊಳ್ಳಲಾಗಿದೆ. ಡೆಂಗಿ ಮತ್ತು ಚಿಕೂನ್ ಗುನ್ಯ ರೋಗಗಳು ಈಡಿಸ್ ಈಜಿಪ್ಲೈ ಎಂಬ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಡೆಂಗಿ ಜ್ವರದ ಲಕ್ಷಣಗಳೆಂದರೆ ಜ್ವರ, ಮೈ-ಕೈ ನೋವು, ಸ್ನಾಯು ಸೆಳೆತ, ಕಣ್ಣಿನ ಹಿಂಭಾಗದಲ್ಲಿ ನೋವು, ಅಲ್ಲಲ್ಲಿ ರಕ್ತಸ್ರಾವ ಉಂಟಾಗುತ್ತದೆ ಎಂದರು.
ಹಾಸನ ಜಿಲ್ಲೆಯಲ್ಲಿ ಈ ವರ್ಷ 120 ಡೆಂಗಿ ಪ್ರಕರಣ ವರದಿಯಾಗಿದೆ. ಹಾಸನದಲ್ಲಿ 69, ಬೇಲೂರು 21, ಅರಸೀಕೆರೆ 13, ಹೊಳೆನರಸೀಪುರ 7, ಅರಕಲಗೂಡು 5, ಆಲೂರು 3, ಚನ್ನರಾಯಪಟ್ಟಣ ಮತ್ತು ಸಕಲೇಶಪುರದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದರು.
ಈಡಿಸ್ ಸೊಳ್ಳೆಗಳ ಲಾರ್ವಾ ನಾಶ ಪ್ರಕ್ರಿಯೆಯನ್ನು ಆಶಾ ಹಾಗೂ ಕಾರ್ಯಕರ್ತೆಯರು, ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಮತ್ತು ನಾಶ ಕ್ರಿಯೆ ಕೈಗೊಂಡಿದ್ದಾರೆ. ಈ ವರೆಗೆ ಜಿಲ್ಲೆಯಲ್ಲಿ 2,89,446 ಮನೆಗಳ ಸರ್ವೆ ಮಾಡಿದ್ದು, ಈ ಪೈಕಿ 4,984 ಮನೆಗಳಲ್ಲಿ ಈಡಿಸ್ ಲಾರ್ವ ಪತ್ತೆ ಮಾಡಿದ್ದಾರೆ. 8,06,143 ನೀರಿನ ಸಂಗ್ರಹಕಗಳಲ್ಲಿ ಟಾರ್ಚ್ ಮುಖಾಂತರ ಲಾರ್ವ ಪತ್ತೆ ಮಾಡಿ 9,406 ಲಾರ್ವಾಗಳನ್ನು ನಾಶ ಮಾಡಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಈರಣಯ್ಯ, ಕೀಟಶಾಸ್ತ್ರ ತಜ್ಞ ರಾಜೇಶ್ ಕುಲಕರ್ಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.