ಡೆಂಗಿ ಪ್ರಕರಣ ( ಸಾಂಕೇತಿಕ ಚಿತ್ರ)
ಹಾಸನ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳು, ಹಿರಿಯರು ಸೇರಿದಂತೆ ಜಿಲ್ಲೆಯಲ್ಲಿ ಈ ವರ್ಷ ಜುಲೈ 19 ರವರೆಗೆ 530ಕ್ಕೂ ಹೆಚ್ಚು ಜನರಿಗೆ ಡೆಂಗಿ ಜ್ವರ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿಯೇ 25 ಡೆಂಗಿ ಪ್ರಕರಣಗಳು ದೃಢವಾಗಿವೆ.
ಸದ್ಯಕ್ಕೆ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ನಾಲ್ವರು ಸೇರಿದಂತೆ ಒಟ್ಟು 35 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ ಡೆಂಗಿಯಿಂದ ಬಳಲುತ್ತಿರುವ 142 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವರ್ಷ ಇಲ್ಲಿಯವರೆಗೆ 291 ಜನರು ಡೆಂಗಿ ಜ್ವರದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯಿಂದ ನೀಡಿರುವ ಅಂಕಿ–ಅಂಶಗಳು ಇದಾಗಿದ್ದು, ಇನ್ನು ಖಾಸಗಿ ಆಸ್ಪತ್ರೆಯಲ್ಲಿಯೂ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾಗುತ್ತಿವೆ. ಹಿಮ್ಸ್ ಆಸ್ಪತ್ರೆಯಲ್ಲಿ ಈ ವರ್ಷ ಇದುವರೆಗೆ 1700 ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಲಾಗಿದೆ.
ಡೆಂಗಿ ನಿರ್ಮೂಲನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುತ್ತಿದೆ. ಅಲ್ಲದೇ ಲಾರ್ವಾ ನಿರ್ಮೂಲನೆ ಮಾಡುತ್ತಿದೆ. ಆದರೆ, ಇದೀಗ ಆರಂಭವಾಗಿರುವ ಜಿಟಿಜಿಟಿ ಮಳೆಯಿಂದಾಗಿ ಎಲ್ಲೆಡೆ ಕೊಳಚೆ ನೀರು ನಿಂತು. ಸೊಳ್ಳೆ ಉತ್ಪತ್ತಿ ಹೆಚ್ಚುತ್ತಿರುವುದು ಡೆಂಗಿ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಮನೆಯ ಸುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಇಲ್ಲದೇ ಇರುವುದೇ ಸೊಳ್ಳೆಗಳು ಹೆಚ್ಚಲು ಕಾರಣವಾಗುತ್ತಿದೆ. ಹಗಲು ಹೊತ್ತಿನಲ್ಲಿ ಮಕ್ಕಳು ಶಾಲೆಯಲ್ಲಿ ಇರುತ್ತಿದ್ದು, ಈ ಸಮಯದಲ್ಲಿ ಸೊಳ್ಳೆ ಕಚ್ಚುವುದರಿಂದ ಮಕ್ಕಳಲ್ಲಿ ಡೆಂಗಿ ಹೆಚ್ಚಾಗಿದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ಮಾತು.
ಜ್ವರದಿಂದ ಬಳಲುತ್ತಿರುವ ಕೆಲವರು ಖಾಸಗಿ ಕ್ಲಿನಿಕ್ ವೈದ್ಯರ ಸಲಹೆ ಪಡೆದರೆ, ಇನ್ನು ಕೆಲವರು ಮೆಡಿಕಲ್ ಸ್ಟೋರ್‌ಗಳಲ್ಲಿ ಮಾತ್ರೆ ಖರೀದಿಸಿ ಮನೆಯಲ್ಲೆ ವಿಶ್ರಾಂತಿ ಪಡೆಯುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡವರು ಮಾತ್ರ ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಂಗಿ ಜ್ವರದಿಂದ ಬಳಲುತ್ತಿರುವವರಲ್ಲಿ ಮಕ್ಕಳೇ ಹೆಚ್ಚು. ಮಕ್ಕಳನ್ನು ಆರೈಕೆ ಮಾಡುತ್ತಿರುವ ತಾಯಂದಿರಲ್ಲೂ ಕೆಲ ದಿನದಲ್ಲೇ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಪತಿಯನ್ನು ಆರೈಕೆ ಮಾಡುತ್ತಿದ್ದ ಪತ್ನಿ ಇಲ್ಲವೇ ಮಕ್ಕಳು, ಸಂಬಂಧಿಕರು ಜ್ವರ ಕಾಣಿಸಿಕೊಂಡು ನಿತ್ರಾಣರಾಗುತ್ತಿದ್ದಾರೆ. ಹೀಗಾಗಿ ಪತಿ, ಪತ್ನಿ ಇಲ್ಲವೇ ಮಕ್ಕಳು ಒಂದೆರಡು ದಿನದ ಅಂತರದಲ್ಲಿ ಆಸ್ಪತ್ರೆಗೆ ದಾಖಲಾಗಿ ಒಂದೇ ವಾರ್ಡ್‌ನಲ್ಲಿ ಅಕ್ಕಪಕ್ಕದ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ 530 ಡೆಂಗಿ ಪ್ರಕರಣ ದೃಢವಾಗಿವೆ. ಬಹುತೇಕ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ಬಾಧಿಸುತ್ತಿದ್ದು, ಇದುವರೆಗೆ 1 ರಿಂದ 18 ವರ್ಷದೊಳಗಿನ 147 ಮಕ್ಕಳಿಗೆ ಡೆಂಗಿ ಇರುವುದು ದೃಢವಾಗಿದೆ.
ಡೆಂಗಿ ಜೊತೆಗೆ ಚಿಕೂನ್ ಗುನ್ಯ ಕೂಡ ಕಾಣಿಸಿಕೊಳ್ಳುತ್ತಿದೆ. ಜ್ವರ, ಚಳಿ ಎನ್ನುತ್ತಲೇ ಬರುವ ರೋಗಿಗಳಿಗೆ ಮೊದಲು ರಕ್ತ ಪರೀಕ್ಷೆ ಮಾಡಿಸಿ ಎಂದು ವೈದ್ಯರು ಸಲಹೆ ನೀಡುತ್ತಿದ್ದು, ಪ್ರಯೋಗಾಲಯಗಳಲ್ಲಿ ರಕ್ತ ಮತ್ತಿತರ ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.