ಚನ್ನರಾಯಪಟ್ಟಣ: ರಾಜ್ಯದಲ್ಲಿಯೇ ಮನೆ ಮಾತಾಗಿರುವ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಅಯೋಧ್ಯೆಯ ರಾಮಮಂದಿರ ಮಾದರಿಯ ಮಂಟಪದಲ್ಲಿ ವಿರಾಜಮಾನವಾಗಿರುವ 9 ಅಡಿ ಎತ್ತರದ ನವಗ್ರಹ ಗಣಪತಿ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದೆ.
ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರದಲ್ಲಿ ಪೆಂಡಾಲ್ ಕಂಗೊಳಿಸುತ್ತಿದ್ದು, ನಾಗರಾಜು ನೇತೃತ್ವದಲ್ಲಿ ಕಲಾವಿದರ ಕೈಚಳಕದಿಂದ ವಿಶಿಷ್ಟ ಮಾದರಿಯ ಅಲಂಕಾರ ಮೂಡಿಬಂದಿದೆ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿಯೂ ಮೂರ್ತಿ ಪ್ರತಿಷ್ಠಾಪಿಸುವ ವಾಹನಕ್ಕೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ನಡೆಸುವುದು ಕಲಾವಿದರ ಹೆಗ್ಗಳಿಕೆ.
73 ನೇ ವರ್ಷದ ಗಣಪತಿ ಮಹೋತ್ಸವದಲ್ಲಿ 52 ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿ ವರ್ಷದಂತೆ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಗೆ ಪೂರಕ ಕಾರ್ಯಕ್ರಮ ರೂಪಿಸಲಾಗಿದೆ. ಕಲೆಯ ರಸದೌತಣದ ಜೊತೆಗೆ ಸಮಾಜಮುಖಿ ಕಾರ್ಯಕ್ರಮಕ್ಕೆ ಪ್ರಸನ್ನ ಗಣಪತಿ ಆಸ್ಥಾನ ಮಂಟಪ ಸಾಕ್ಷಿಯಾಗಿದೆ.
ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಿವಿಧ ಸಂಘ, ಸಂಸ್ಥೆಗಳು ವಹಿಸಿಕೊಂಡಿವೆ. 11 ವರ್ಷಗಳಿಂದ ನಿತ್ಯ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಬೇಲೂರಿನ ಚೇತನ್ ಗುರೂಜಿ, ನಾಗಮಂಗಲದ ಲಕ್ಷ್ಮಣ್ ಗುರೂಜಿ ಅವರು ಉಚಿತ ಯೋಗಾಸನ, ಪ್ರಾಣಾಯಾಮ, ಧ್ಯಾನದ ತರಬೇತಿ ನೀಡುತ್ತಿದ್ದಾರೆ.
ಅಕ್ಟೋಬರ್ 6 ರಂದು ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಜನ್ಮದಿನ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮೂರು ವರ್ಷದಿಂದ ಗಣಪತಿ ಮಹೋತ್ಸವದ ಅಂಗವಾಗಿ ಅನೇಕ ಸಂಘ, ಸಂಸ್ಥೆಗಳ ನೆರವಿನಿಂದ ನಿತ್ಯ ದಾಸೋಹ ಏರ್ಪಡಿಸುತ್ತಿರುವುದು ವಿಶೇಷ. ಈದ್ ಮಿಲಾದ್ ಹಬ್ಬದ ಅಂಗವಾಗಿ ಗಣಪತಿ ಪೆಂಡಾಲ್‌ನಲ್ಲಿ ಮುಸ್ಲಿಮರು ದಾಸೋಹ ಏರ್ಪಡಿಸಿ ಭಾವೈಕ್ಯ ಮೆರೆದಿದ್ದಾರೆ.
ಕಲಾವಿದ ಲೋಕೇಶ್ ದಾಸ್ ಅವರಿಂದ ಸೆಪ್ಟೆಂಬರ್ 7 ರಿಂದ ನಿತ್ಯ ಸಂಜೆ ರಾಮಾಯಣ ಪ್ರವಚನ ಏರ್ಪಡಿಸಲಾಗಿದ್ದು, ಅ.26 ರಂದು ಶ್ರೀರಾಮ ಫಟ್ಟಾಭಿಷೇಕ ಮಹೋತ್ಸವಲ್ಲಿ ನೊಣವಿನಕೆರೆ ಕಾಡು ಸಿದ್ದೇಶ್ವರಮಠದ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಅ.24 ರಂದು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಅ.27 ರಂದು ಬೆಳಿಗ್ಗೆ ಗಣಪತಿಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಕೆ.ಎನ್. ಬನಶಂಕರಿ ದಂಪತಿ ಭಾಗವಹಿಸುವರು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರಾದ ತಾರಾ, ಡಾಲಿ ಧನಂಜಯ, ಶ್ರೀನಗರಕಿಟ್ಟಿ, ಶಮಿತಾ ಮಲ್ನಾಡ್, ಶರಣಪ್ಪ ಪುಲಾರೆ, ಕುಮಾರ್ ಪಾಲ್ಗೊಳ್ಳುವರು. ತಾಲ್ಲೂಕಿನಿಂದ ಐಪಿಎಸ್ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀನಿವಾಸಗೌಡ, ಎನ್.ಎಂ. ಶಶಾಂತ್ ಮತ್ತು ರವೀಂದ್ರ ಅವರನ್ನು ಸನ್ಮಾನಿಸಲಾಗುತ್ತದೆ. ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿ ಗಣ್ಯರು ಪಾಲ್ಗೊಳ್ಳುವರು.
ಪ್ರತಿವರ್ಷ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. ಕಲಾವಿದ ಸಿ.ವಿ. ಪ್ರಸನ್ನ, ಈ ವರ್ಷ ನವಗ್ರಹ ಗಣಪತಿಯನ್ನು ತಯಾರಿಸಿದ್ದರೆ, ಬಾಲಕೃಷ್ಣಭಟ್ ನೇತೃತ್ವದಲ್ಲಿ ಅರ್ಚಕರು ನಿತ್ಯ ಪೂಜೆ ನೆರವೇರಿಸುತ್ತಿದ್ದಾರೆ.
ಸಮಿತಿಯಿಂದ ಧಾರ್ಮಿಕ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗಣಪತಿ ಸಮುದಾಯ ಭವನದ ಮೇಲ್ಚಾವಣಿ ದುರಸ್ತಿಗೆ ಪುರಸಭೆಯಿಂದ ₹10 ಲಕ್ಷ ಅನುದಾನ ಕೊಡಿಸುವುದಾಗಿ ಶಾಸಕ ಬಾಲಕೃಷ್ಣ ಭರವಸೆ ನೀಡಿದ್ದಾರೆ.ಸಿ.ಎನ್. ಅಶೋಕ್ ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ
ಚನ್ನರಾಯಪಟ್ಟಣದಲ್ಲಿ ಗಣಪತಿ ಪೆಂಡಾಲ್‌ನಲ್ಲಿ ಈ ವರ್ಷ ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ. ಮಂಟಪ ಮೂಡಿಬರಲು ಕಲಾವಿದ ನಾಗರಾಜು ನೇತೃತ್ವದಲ್ಲಿ ನಾಲ್ವರು ಕಲಾವಿದರು 15 ದಿನ ಶ್ರಮವಹಿಸಿದ್ದಾರೆ. ಅ. 28 ರಂದು ಆನೆ ಮೇಲೆ ಜಂಬೂಸವಾರಿ ಸೇರಿ ಅನೇಕ ಜಾನಪದ ಕಲಾ ತಂಡಗಳ ವೈಭವದೊಂದಿಗೆ ಬೆಳಿಗ್ಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ ಸಂಜೆ ಪಟ್ಟಣದ ಅಮಾನಿಕೆರೆಯಲ್ಲಿ ಗಣಪತಿ ವಿಸರ್ಜಿಸಲಾಗುವುದು ಎಂದು ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.