ಹಾಸನ: ಬೆಂಬಲ ಬೆಲೆಯಡಿ ಭತ್ತ ಮಾರಾಟ ಮಾಡಿರುವ ಜಿಲ್ಲೆಯ ಎಲ್ಲ ರೈತರಿಗೂ ಹಣ ಪಾವತಿಸಿರುವ ಸರ್ಕಾರ, ರಾಗಿ ಮಾರಾಟ ಮಾಡಿರುವವರಿಗೆ ಮಾತ್ರ ₹ 80 ಕೋಟಿ ನೀಡದೆ ಬಾಕಿ ಉಳಿಸಿಕೊಂಡಿದೆ.
ಮಾರ್ಚ್ ಅಂತ್ಯದವರೆಗೆ ಪ್ರತಿ ಕ್ವಿಂಟಲ್‌ಗೆ ₹ 3,578 ದರದಲ್ಲಿ ರಾಗಿ ಖರೀದಿಸಲಾಗಿತ್ತು. ಆರಂಭದಲ್ಲಿ ಎಲ್ಲ ರೈತರಿಗೆ 10–15 ದಿನಗಳಲ್ಲಿಯೇ ಹಣ ಪಾವತಿಯಾಗಿತ್ತು. ಆದರೆ, ಮಾರ್ಚ್ ಮಧ್ಯಭಾಗದಲ್ಲಿ ರಾಗಿ ಮಾರಿರುವವರು ಹಣ ಸಿಗದೇ ಪರದಾಡುತ್ತಿದ್ದಾರೆ.
‘ಮಳೆಗಾಲ ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಬೇಕಿದೆ. ಉಳುಮೆ ಮಾಡಿ, ಬಿತ್ತನೆ ಬೀಜ, ಗೊಬ್ಬರ ತರಲು ಹಣ ಬೇಕು. ಇದುವರೆಗೂ ಹಣ ನೀಡದೇ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದೆ’ ಎಂಬುದು ರೈತರ ಆರೋಪ.
‘ಮಾರ್ಚ್ 15ರಂದು ನಾಫೆಡ್ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದೆ. ಈವರೆಗೂ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಕೂಡಲೇ ಹಣ ನೀಡದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ನುಗ್ಗೇಹಳ್ಳಿ ಸಮೀಪದ ರೈತ ಪಿಳ್ಳೇಗೌಡ ಒತ್ತಾಯಿಸಿದರು.
ಭತ್ತದ ಹಣ ಪಾವತಿ: ‘ಈ ಬಾರಿ ಹೆಚ್ಚಿನ ರೈತರು ನಾಫೆಡ್ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟಕ್ಕೆ ಹಿಂದೇಟು ಹಾಕಿದ್ದಾರೆ. ಕೇವಲ 339 ರೈತರು 6,710 ಕ್ವಿಂಟಲ್ ಭತ್ತ ಮಾರಾಟ ಮಾಡಿದ್ದಾರೆ. ಅವರಿಗೆ ಪಾವತಿಸಬೇಕಿದ್ದ ₹ 1.36 ಕೋಟಿಯನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ’ ಎಂದು ನಾಫೆಡ್ ಖರೀದಿ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ರಾಗಿ ಖರೀದಿ ಹೆಚ್ಚಾಗಿದ್ದು, ಕಾಲಕಾಲಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಮಾರ್ಚ್ ಮಧ್ಯಭಾಗದಲ್ಲಿ ಮಾರಿದವರಿಗೆ ಹಣ ನೀಡುವುದು ವಿಳಂಬವಾಗಿದೆ’ ಎಂದು ಹೇಳಿದರು.
ಭತ್ತ–ರಾಗಿ ಬೆಳೆಗಾರರಿಗೆ ತಾರತಮ್ಯ; ಆರೋಪ ಬಾಕಿ ಪಾವತಿಸಲು ವಾರದ ಗಡುವು ಪಾವತಿಸದಿದ್ದರೆ ಪ್ರತಿಭಟನೆ: ರೈತ ಸಂಘ
15852 ರೈತರಿಗೆ ನೀಡಬೇಕಾಗಿರುವ ₹ 80.32 ಕೋಟಿ ಮುಂದಿನ ವಾರ ಪಾವತಿಯಾಗುವ ನಿರೀಕ್ಷೆ ಇದೆ.–ಮಂಜುನಾಥ್ ನಾಫೆಡ್ ಖರೀದಿ ಕೇಂದ್ರದ ವ್ಯವಸ್ಥಾಪಕ
ಇನ್ನೊಂದು ವಾರದೊಳಗೆ ಹಣ ನೀಡದ್ದಿದ್ದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.–ಎಚ್.ಕೆ.ರಘು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.