ಪ್ರಜಾವಾಣಿ ವಾರ್ತೆ
ಅರಸೀಕೆರೆ (ಹಾಸನ ಜಿಲ್ಲೆ): ‘ನಕಲಿ ಆಡಿಯೊ ಸೃಷ್ಟಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು, ನನಗೆ ಸಚಿವ ಸ್ಥಾನ ತಪ್ಪಿಸಲು ಸಂಚು ಮಾಡಲಾಗಿದೆ’ ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಲೋಕಸಭೆ ಚುನಾವಣೆಯಾಗಿ ಐದು ತಿಂಗಳಾಗಿದೆ. ಕಟ್ ಅಂಡ್ ಪೇಸ್ಟ್ ಮಾಡಿ, ಆಗ ಮಾತನಾಡಿದ್ದೆ ಎಂದು ಆಡಿಯೊ ಬಿಟ್ಟಿದ್ದಾರೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ತನಿಖೆಯಾಗಲಿ, ಎದುರಿಸಲು ಸಿದ್ಧನಿದ್ದೇನೆ’ ಎಂದರು.
ಆಡಿಯೊ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜೆಡಿಎಸ್ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಅವರು ದೂರು ಕೊಡಲಿ. ಅದಕ್ಕೂ ನನಗೂ ಸಂಬಂಧವಿಲ್ಲ. ನನ್ನ ಮನೆಗೆ ದಿನವೂ ನೂರಾರು ಮಂದಿ ಬರುತ್ತಾರೆ. ಆಗ ಲೋಕರೂಢಿಯಂತೆ ಮಾತನಾಡಿದ್ದೇನೆ. ಹಿಂದೆಯೂ ಇಂತಹ ಆಡಿಯೊ ಸೃಷ್ಟಿಸಿದ್ದರು. ಕೆಲವರಿಗೆ ಅದೇ ಕೆಲಸ. ವಕೀಲರ ಸಲಹೆ ಪಡೆದು ದೂರು ನೀಡುವ ಬಗ್ಗೆ ತೀರ್ಮಾನಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.