ADVERTISEMENT

ಜನಪದದಲ್ಲಿ ಬದುಕಿನ ನೇರ ದರ್ಶನ

ಜಾನಪದ ಪರಿಷತ್ತು ತಾಲ್ಲೂಕು ಘಟಕ ಉದ್ಘಾಟಿಸಿದ ಡಾ. ಮಲ್ಲೇಶಗೌಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 4:12 IST
Last Updated 16 ಫೆಬ್ರುವರಿ 2023, 4:12 IST
ಹಾಸನಾಂಬ ಕಾಲೇಜು ಆವರಣದಲ್ಲಿ ಬುಧವಾರ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.
ಹಾಸನಾಂಬ ಕಾಲೇಜು ಆವರಣದಲ್ಲಿ ಬುಧವಾರ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.   

ಹಾಸನ: ಬದುಕನ್ನು ಕಟ್ಟಿಕೊಡುವ ಜನಪದರು ಅನಿಸಿದ್ದನ್ನು ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ್ದಾರೆ. ನಾಜೂಕಿಗಿಂತ ಸತ್ಯ ದರ್ಶನ ಅವರಲ್ಲಿ ಪ್ರಧಾನವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡ ಹೇಳಿದರು.

ನಗರದ ಹಾಸನಾಂಬ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಜಾನಪದ ಪರಿಷತ್‌ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬದುಕನ್ನು ನೇರವಾಗಿ ದರ್ಶನ ಮಾಡಿಸುವ ಶಕ್ತಿ ಇರುವ ಜನಪದದವನ್ನು ನಾಗರಿಕ ಸಮಾಜ ಸಂರಕ್ಷಣೆ ಮಾಡಬೇಕಿದೆ. ಆಧುನಿಕ ಜಗತ್ತಿನ ಜನರ ಪ್ರೀತಿ, ಭಕ್ತಿ, ಗೌರವ ಎಲ್ಲವೂ ನಟನೆಯೇ ಆಗಿ ಹೋಗಿದೆ. ಆಧುನಿಕ ಜಗತ್ತಿನವರು ನಟಿಸಿ, ನಟಿಸಿ ಆಯಸ್ಸು ಕಡಿಮೆ ಮಾಡಿಕೊಳ್ಳುತ್ತಿದ್ದರೆ, ಜನಪದರು ತಮ್ಮ ನಿಷ್ಠುರತೆ, ನೇರವಂತಿಕೆಯಿಂದ ತಮ್ಮ ಆಯಸ್ಸು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ‘ನಮ್ಮ ಪರಿಷತ್ತು 1979 ರಲ್ಲಿ ಆಗಿನ ಐಎಎಸ್ ಅಧಿಕಾರಿ ಎಚ್.ಎಲ್.ನಾಗೇಗೌಡ ಅವರಿಂದ ಸ್ಥಾಪನೆಗೊಂಡಿದೆ. ಕರ್ನಾಟಕದಲ್ಲಿ ಜಾನಪದ ಸಾಂಸ್ಕೃತಿ ಸಂಘಟನೆಗೆ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾದ ಕೀರ್ತಿ ಈ ಪರಿಷತ್ತಿಗಿದೆ’ ಎಂದರು.

ಜಾನಪದದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರು, ಜನಪದ ಕಲೆಗಳು ಹಾಗೂ ಸಾಹಿತ್ಯದ ಸಂರಕ್ಷಣೆಗೆ ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಅವರಿಂದ ಸಹಾಯ ಪಡೆದ ಹಲವು ಶಿಷ್ಯರು, ಅವರ ನಿವೃತ್ತಿಯಾದಾಗ ದೇಣಿಗೆಯಾಗಿ ಕೊಟ್ಟಿದ್ದ ₹ 1.09 ಲಕ್ಷ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆಗೆ ವಿನಿಯೋಗಿಸಿದರು ಎಂದು ಸ್ಮರಿಸಿದರು.

ಹಾಸನಾಂಬ ಕಾಲೇಜು ಪ್ರಾಂಶುಪಾಲೆ ಡಾ.ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಮೇಟಿಗೆರೆ ಹಿರಿಯಣ್ಣ, ಹಿರಿಯ ಕವಿ ಎನ್.ಎಲ್.ಚನ್ನೇಗೌಡ, ಕಲಾವಿದ ಯೋಗೀಂದ್ರ, ಬಿ.ಟಿ.ಮಾನವ, ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಟಿ.ಎಸ್. ಲಕ್ಷ್ಮಣ್, ನಿಕಟಪೂರ್ವ ಅಧ್ಯಕ್ಷ ಯೋಗೇಂದ್ರ ದುದ್ದ, ಗೌರವಾಧ್ಯಕ್ಷ ಶಿವನಂಜೇಗೌಡ ಉಪಸ್ಥಿತರಿದ್ದರು.

ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಪದ ಸ್ವೀಕರಿಸಿದರು. ನಂಜಮ್ಮ, ಕಾಳಮ್ಮ, ಗೌರಮ್ಮ ಸೋಬಾನೆ ಪದಗಳನ್ನು ಹಾಡಿದರು. ಸ್ಥಳೀಯ ಕಲಾವಿದರ ಡೊಳ್ಳು ಕುಣಿತ ಮೆಚ್ಚುಗೆ ಗಳಿಸಿತು. ನೂತನ ಉಪಾಧ್ಯಕ್ಷ ಪುನೀತ್ ಗೌತಂ, ಕಾರ್ಯದರ್ಶಿ ಶಿವರಾಂ, ಕೋಶಾಧ್ಯಕ್ಷರಾದ ಸುನಿತಾ, ವೀಣಾ, ಸಹ ಕಾರ್ಯದರ್ಶಿಗಳಾದ ಚಂದ್ರಕಲಾ, ದಿವಾಕರ, ರುದ್ರೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಡಿ. ಜೈಕುಮಾರ್, ದ್ಯಾವನೂರು ಮಂಜುನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.