ADVERTISEMENT

ಆಲೂರು: ಉರಗ ರಕ್ಷಣೆ ಮಾಡುತ್ತಿರುವ ವಕೀಲೆ

ಹಾವುಗಳನ್ನು ಹಿಡಿದು ಕಾಡಿಗೆ ಸಾಗಿಸುವ ಯೋಗಿತಾ

ಎಂ.ಪಿ.ಹರೀಶ್
Published 23 ನವೆಂಬರ್ 2024, 4:52 IST
Last Updated 23 ನವೆಂಬರ್ 2024, 4:52 IST
ನಿರ್ಮಾಣ ಹಂತದ ಮನೆ ಬಳಿಯಲ್ಲಿದ್ದ ನಾಗರ ಹಾವನ್ನು ಹಿಡಿಯುತ್ತಿರುವ ಯೋಗಿತಾ
ನಿರ್ಮಾಣ ಹಂತದ ಮನೆ ಬಳಿಯಲ್ಲಿದ್ದ ನಾಗರ ಹಾವನ್ನು ಹಿಡಿಯುತ್ತಿರುವ ಯೋಗಿತಾ   

ಆಲೂರು: ಪುರುಷರು, ಯುವಕರು ಧೈರ್ಯ, ಸಾಧನೆಯಿಂದ ಹಾವುಗಳನ್ನು ಹಿಡಿಯುವುದು ಸಹಜ. ಆದರೆ ಯುವತಿಯೊಬ್ಬಳು ಧೈರ್ಯದಿಂದ ಹಾವುಗಳನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಡುವುದು ಅಪರೂಪವಾದರೂ ನಿಜವಾಗಿದೆ.

ಪಟ್ಟಣದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಯೋಗಿತಾ ಆ ಧೈರ್ಯವಂತೆ. ಮನೆ ಇನ್ನಿತರ ಕಡೆಗಳಲ್ಲಿ ಎಂತಹ ಹಾವು ಇದ್ದರೂ, ವಿಷಯ ತಿಳಿದ ತಕ್ಷಣ ಹೋಗುತ್ತಾರೆ. ಯಾವುದೆ ಪ್ರತಿಫಲ ಪಡೆಯದೆ ಹಾವನ್ನು ಹಿಡಿದು ಚೀಲಕ್ಕೆ ತುಂಬಿಕೊಂಡು ಕಾಡಿಗೆ ಬಿಡುವ ಮೂಲಕ ಹಾವುಗಳನ್ನು ರಕ್ಷಿಸುತ್ತಿದ್ದಾರೆ.

ವಕೀಲ ಎಸ್.ಎಸ್. ಬಸವರಾಜು ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರ ಪುತ್ರಿ ಯೋಗಿತಾ.

ADVERTISEMENT

‘2019 ರಲ್ಲಿ ಪಿಯು ತರಗತಿಯಲ್ಲಿ ಓದುತ್ತಿದ್ದಾಗ ಮನೆಗೆ ಒಂದು ಹಾವು ಬಂದಿತ್ತು. ನೀನು ಧೈರ್ಯದಿಂದ ಹಾವನ್ನು ಹಿಡಿ. ಎಂತಹ ಸಂದರ್ಭ ಎದುರಾದರೂ ನಾನು ನಿನ್ನ ಹಿಂದೆ ಇರುತ್ತೇನೆ ಎಂದು ತಂದೆ ಬಸವರಾಜು ಧೈರ್ಯ ತುಂಬಿ ಪ್ರೋತ್ಸಾಹಿಸಿದರು. ಅಂದು ಧೈರ್ಯದಿಂದ ಹಾವನ್ನು ಹಿಡಿದೆ. ಅಂದಿನಿಂದ ಹಾವನ್ನು ಹಿಡಿಯಲು ಪ್ರಾರಂಭ ಮಾಡಿದೆ’ ಎನ್ನುತ್ತಾರೆ ಯೋಗಿತಾ.

‘ದೊಡ್ಡ ಹಾವುಗಳ ಬಾಲವನ್ನು ಹಿಡಿದು ಮೇಲೆತ್ತಿದರೆ ಅವುಗಳ ಚಲನವಲನ ಮಂಕಾಗುತ್ತದೆ. ಆದರೆ ಚಿಕ್ಕಪುಟ್ಟ ಹಾವುಗಳಾದ ಮಿಡಿನಾಗರ, ಕೊಳಕುಮಂಡಲದಂತಹ ಹಾವುಗಳನ್ನು ಹಿಡಿದಾಗ ತಿರುಗಿ ದಾಳಿ ಮಾಡುತ್ತವೆ’ ಎಂದು ಅವರು ಹೇಳುತ್ತಾರೆ.

ಯೋಗಿತಾ ಈವರೆಗೆ ಸುಮಾರು 50 ಕ್ಕೂ ಹೆಚ್ಚು ವಿವಿಧ ಜಾತಿ ಹಾವುಗಳನ್ನು ಹಿಡಿದಿದ್ದಾರೆ. ಆರು ಅಡಿ ಉದ್ದದ ನಾಗರಹಾವನ್ನು ಹಿಡಿದಿದ್ದಾರೆ. ಸದ್ಯ ಹಾಸನದಲ್ಲಿ ವಾಸ ಮಾಡುತ್ತಿರುವ ಯೋಗಿತಾ, ವಕೀಲಿ ವೃತ್ತಿ ಹೊರತುಪಡಿಸಿದ ಸಂದರ್ಭದಲ್ಲಿ ಹಾವುಗಳನ್ನು ಹಿಡಿಯುತ್ತಾರೆ.

‘ಬಹುತೇಕ ಕೊಳಕುಮಂಡಲ ಹಾವುಗಳು ಹಲ್ಲಿಗಳನ್ನು, ನಾಗರಹಾವು ಇನ್ನಿತರೆ ಹಾವುಗಳು ಸಾಮಾನ್ಯವಾಗಿ ಕಪ್ಪೆಗಳನ್ನು ಆಹಾರವಾಗಿ ಹುಡುಕಿಕೊಂಡು ಮನೆ ಬಳಿ ಬರುತ್ತವೆ. ಆದ್ದರಿಂದ ಮನೆಗಳ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎನ್ನುವುದು ಅವರ ಸಲಹೆ.

‘ಹಾವುಗಳನ್ನು ಕಂಡ ತಕ್ಷಣ ಸಾಯಿಸಲು ಮುಂದಾಗಬಾರದು. ಹಾವುಗಳು ಇರುವುದರಿಂದ ಕೃಷಿ ವಲಯಕ್ಕೆ ಅನುಕೂಲವಾಗುತ್ತದೆ. ಮನುಷ್ಯ ಟೆಸ್ಟ್ ಟ್ಯೂಬ್ ಬೇಬಿ ಪಡೆಯಬಹುದು. ಆದರೆ ಹಾವುಗಳಿಗೆ ಈ ರೀತಿ ಜನ್ಮ ಕೊಡಲು ಸಾಧ್ಯವಿಲ್ಲ. ಹಾವುಗಳು ಮನುಷ್ಯನ ಉಳಿವಿಗೆ ಅತ್ಯಂತ ಸಹಕಾರಿಯಾಗಿವೆ’ ಎನ್ನುತ್ತಾರೆ ಯೋಗಿತಾ.

ಯೋಗಿತಾ ಅವರ ಮೊಬೈಲ್ ಸಂಖ್ಯೆ: 63668 01567

ಯೋಗಿತಾ.
ತಂದೆಯ ಪ್ರೋತ್ಸಾಹದಿಂದ ಹಾವು ಹಿಡಿಯಲು ಕಲಿತ ಯೋಗಿತಾ ಮನೆಯ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಲಹೆ ಇದುವರೆಗೆ 50ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿರುವ ವಕೀಲೆ
ಹಾವುಗಳಿಂದ ಔಷಧಿಗಳನ್ನು ತಯಾರಿಸುತ್ತೇವೆ. ಅದಕ್ಕಾಗಿ ಹಾವುಗಳನ್ನು ಸಾಕುತ್ತಾರೆ. ಎಂತಹ ಸಂದರ್ಭ ಎದುರಾದರೂ ಹಾವುಗಳನ್ನು ಕೊಲ್ಲಬಾರದು.
ಯೋಗಿತಾ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.