ADVERTISEMENT

‘ಕನ್ನಡ ಸಾಹಿತ್ಯದ ವೈವಿಧ್ಯಮಯ ಕೃತಿ’

ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ‘ರಸೋ ವೈ ಸಃ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:11 IST
Last Updated 19 ಫೆಬ್ರುವರಿ 2024, 16:11 IST
ಹಾಸನದಲ್ಲಿ ನಡೆದ 30ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಶಶಿಚಂದ್ರಿಕಾ ಅವರನ್ನು ಸನ್ಮಾನಿಸಲಾಯಿತು
ಹಾಸನದಲ್ಲಿ ನಡೆದ 30ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಶಶಿಚಂದ್ರಿಕಾ ಅವರನ್ನು ಸನ್ಮಾನಿಸಲಾಯಿತು   

ಹಾಸನ: ಶಶಿಚಂದ್ರಿಕಾ ಅವರ ‘ರಸೋ ವೈ ಸಃ’ ಒಂದು ಲೇಖನ, ಪದ್ಯ, ಕಥೆ, ನಾಟಕಗಳನ್ನು ಒಳಗೊಂಡ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್‌ ಭಾಷೆಯನ್ನು ಒಳಗೊಂಡ ಕನ್ನಡ ಸಾಹಿತ್ಯದ ವೈವಿಧ್ಯಮಯ ಕೃತಿಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರುಳಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ 30ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಶಶಿಚಂದ್ರಿಕಾ ಅವರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಶಶಿಚಂದ್ರಿಕಾ ಅವರು ಸಾಹಿತ್ಯ, ಸಂಗೀತ ಎರಡೂ ಮೇಳೈಸಿದ ಅಂತರ್ಮುಖಿ ಪ್ರತಿಭೆ. ಈ ಕೃತಿಯು ಸಪ್ತಸ್ವರ ಕಲಾ ಕೇಂದ್ರ ನಡೆದು ಬಂದ 75 ವರ್ಷಗಳ ಸುವರ್ಣ ಹೆಜ್ಜೆಗಳ ಜೊತೆಗೆ, ಇವರ ಬಹುಭಾಷಾ ಪಾಂಡಿತ್ಯ, ಸಂಗೀತ ಸಾಧನೆ, ದೇಶಪ್ರೇಮ, ಸಾಹಿತ್ಯ ಉತ್ಕಟತೆ, ಸುಖಿ ಸಮಾಜದ ಕನಸು ಕೃತಿಯುದ್ದಕ್ಕೂ ಓದುಗನೆದುರು ಮುಖಾಮುಖಿಯಾಗುತ್ತದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿ, ಸಂಗೀತ ಆರಾಧಕಿಯಾದ ನನಗೆ ಶಶಿಚಂದ್ರಿಕಾ ಅವರ ‘ರಸೋ ವೈ ಸಃ’ ಕೃತಿ ಅತ್ಯಾನಂದ ನೀಡಿದೆ. ಸಂಪೂರ್ಣ ವರ್ಣಮಯವಾದ ಈ ಕೃತಿಯು ಕೈಸೇರುತ್ತಲೇ ಓದುಗನ ಮನವನ್ನು ಮುದಗೊಳಿಸುತ್ತದೆ. ಇಲ್ಲಿನ ರಚನೆಗಳು ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ. ಇವರ ಭಾಷಾ ಪ್ರೌಢಿಮೆ ಇಲ್ಲಿ ಎದ್ದು ಕಾಣುತ್ತದೆ. ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಇದೂ ಒಂದು ಎಂದರು.

ಸಂಸ್ಕೃತ ವಿದ್ವಾಂಸ ಪಿ.ವಿ.ಪರಮೇಶ್ವರ ಭಟ್‌, ಸಾಹಿತಿ ಚಂದ್ರಕಾಂತ ಪಡೆಸೂರ, ಕವಯತ್ರಿ ರೇಖಾ ಪ್ರಕಾಶ್, ಕವಿ ಧರ್ಮ ಕೆರಲೂರು, ಕವಿ ವಿನಯಚಂದ್ರ ಕೃತಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರುಳಿಯವರ ಸಪ್ತಸ್ವರ ಕಲಾಕೇಂದ್ರದ ವಿದ್ಯಾರ್ಥಿಗಳಾದ ಸುಕನ್ಯಾ, ಯಶಸ್ವಿನಿ, ರಿಧಿ ಶರ್ಮಾ, ವಿಸ್ಮಯ ಎಸ್.ಎಲ್., ಎನ್.ದಾಕ್ಷಾಯಣಿ, ದೀಕ್ಷಿತ ಜಿ.ಎಚ್., ದಿವ್ಯಶ್ರೀ ಎಸ್., ಸುರಭಿ ಎಸ್. ಅವರು ವಿದುಷಿ ಶಶಿಚಂದ್ರಿಕಾ ಅವರ ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಜಯದೇವಪ್ಪ, ಬಿ.ಎನ್.ಎಸ್.ಮುರುಳಿ, ವಾಸು ಸಮುದ್ರವಳ್ಳಿ, ಗಿರೀಶ್ ಬಾಬು ಹೊಸಮನೆ, ಪ್ರಕಾಶ್,  ಮಂಜುನಾಥ್, ಪಂಕಜ, ವಿಮರ್ಶಾ ಚಂದ್ರ, ಎ.ಆರ್.ಪ್ರೇಮಲತಾ, ಶ್ರೀರಾಜೇಂದ್ರ, ಮಾಲಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಚಂದ್ರಕಾಂತ ಪಡೆಸೂರ, ಶಶಿಚಂದ್ರಿಕಾ, ನೀಲಾವತಿ ಸಿ.ಎನ್., ಸರೋಜ ಟಿ.ಎಂ., ಎಚ್.ಬಿ. ಚೂಡಾಮಣಿ, ಡಾ.ಎಂ.ಮಂಜುನಾಥ್, ಭಾರತಿ ಎಚ್.ಎನ್., ಕುಮಾರ್ ಹೊನ್ನೇನಹಳ್ಳಿ, ವಿನಯಚಂದ್ರ, ಧರ್ಮ ಕೆರಲೂರು, ರೇಖಾ ಪ್ರಕಾಶ್, ಗಿರಿಜಾ ನಿರ್ವಾಣಿ, ಕೆ.ಸಿ.ಗೀತಾ ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.