ADVERTISEMENT

ಸರ್ಕಾರ ಮಾಡಬೇಕಾದ ಕೆಲಸ ಮಾಡುತ್ತಿರುವ ಯೋಜನೆ: ಶಾಸಕ ಸಿಮೆಂಟ್ ಮಂಜು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಸಮಾವೇಶದಲ್ಲಿ ಶಾಸಕ ಸಿಮೆಂಟ್ ಮಂಜು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:11 IST
Last Updated 17 ಅಕ್ಟೋಬರ್ 2024, 14:11 IST
ಸಕಲೇಶಪುರದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ಶಾಸಕ ಸಿಮೆಂಟ್ ಮಂಜು ದೀಪ ಬೆಳಗಿಸಿದರು.
ಸಕಲೇಶಪುರದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ಶಾಸಕ ಸಿಮೆಂಟ್ ಮಂಜು ದೀಪ ಬೆಳಗಿಸಿದರು.   

ಸಕಲೇಶಪುರ: ಒಂದು ಸರ್ಕಾರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ವೀರೇಂದ್ರ ಹೆಗ್ಗಡೆಯವರು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

‌ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವರನ್ನು ಸಂಘಗಳ ಮೂಲಕ ಸಂಘಟಿಸಿ, ದುಡಿದ ಹಣವನ್ನು ಉಳಿತಾಯ ಮಾಡುವುದು ಹಾಗೂ ಉಳಿತಾಯ ಮಾಡಿದ ಹಣವನ್ನು ಅವರಿಗೆ ಸಾಲದ ರೂಪದಲ್ಲಿ ನೀಡಿ ಅವರು ಆರ್ಥಿಕವಾಗಿ ಸದೃಢರಾಗಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕರ್ಣಾಟಕ ಬ್ಯಾಂಕ್ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಗೌರೀಶ್‌ ಎಸ್‌. ಜೋಶಿ ‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ’ ವಿಷಯ ಕುರಿತು ಮಾತನಾಡಿ, ಸಂಘಗಳಿಗೆ ಸಾಲ ನೀಡುವ ಕೆಲಸವನ್ನು ಬ್ಯಾಂಕ್ ಮಾಡಿದರೆ, ಆ ಸಾಲದ ಸಂಪೂರ್ಣ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್‌ ಮಾಡುತ್ತಿದೆ. ಸಾಲ ಕೇಳಿಕೊಂಡು ಬ್ಯಾಂಕಿಗೆ ಬರುವಂತವರಿಗೆ ಅವರ ಪೂರ್ಣ ಮಾಹಿತಿ ‍ಪಡೆದು ಸಾಲ ನೀಡುವುದು ಹಾಗೂ ನಿರ್ವಹಣೆ ಮಾಡುವುದು ಬ್ಯಾಂಕ್‌ಗೆ ಕಷ್ಟವಾಗುತ್ತದೆ. ಆದ್ದರಿಂದ ಆ ಕೆಲಸವನ್ನು ಈ ಸಂಸ್ಥೆ ರಾಜ್ಯದಾದ್ಯಂತ ತುಂಬಾ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶ್‌ಗೌಡ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮನೆಯಲ್ಲಿ ಮಕ್ಕಳಿಗೆ ವಿದ್ಯೆ ಕಲಿಯುವ ವಾತಾವಣ ಇರಬೇಕು. ಆದರೆ ಇಂದು ಬಹುತೇಕ ಮನೆಗಳಲ್ಲಿ ಪೋಷಕರು ಧಾರಾವಾಹಿ ನೋಡುತ್ತಾ ಕುಳಿತುಕೊಂಡು, ಮಕ್ಕಳಿಗೆ ಓದಿಕೊಳ್ಳಿ ಎಂದು ಹೇಳುವುದರಿಂದ ಮಕ್ಕಳು ಕಲಿಕೆಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಅವರು ಮೊಬೈಲ್‌ ಹಿಡಿದು ಗೇಮ್ಸ್‌ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಾ ಬಾಲ್ಯವನ್ನು ಕಳೆಯಬೇಕಾಗಿರುವುದು ದೊಡ್ಡ ದುರಂತ ಎಂದರು.

ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಆರ್ಥಿಕ ಸ್ವಾವಲಂಬಿಗಳಾಗಿವೆ ಎಂದರು.

ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್‌ ರಾವ್ ಮಾತನಾಡಿ, ಸಂಘದ ಸದಸ್ಯರು ಪಡೆದ ಸಾಲವನ್ನು ಉದ್ದೇಶಿತ ಕಾರ್ಯಕ್ಕೆ ಸರಿಯಾಗಿ ಬಳಕೆ ಮಾಡಬೇಕು. ಕಾಲ ಮಿತಿಯಲ್ಲಿ ಮರುಪಾವತಿ ಮಾಡುವುದರಿಂದ ಪ್ರತಿಯೊಂದು ಕುಟುಂಬವೂ ಆರ್ಥಿಕ ಸದೃಢ ಆಗಲು ಸಾಧ್ಯ ಎಂದರು.

ಎಸ್‌ಕೆಡಿಆರ್‌ಡಿಪಿ ತಾಲ್ಲೂಕು ಯೋಜನಾಧಿಕಾರಿ ಕೆ. ಪುರುಷೋತ್ತಮ್‌, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಡಾ. ನವೀನ್‌ಚಂದ್ರ ಶೆಟ್ಟಿ, ಜಿಲ್ಲಾ ವಿಚಕ್ಷಣ ಅಧಿಕಾರಿ ಅರುಣ್‌ ಹಾಗೂ ಇತರರು ಇದ್ದರು. ಸಂಸ್ಥೆಯ ಮೇಲ್ವಿಚಾರಕಿ ಮೋಹಿನಿ ನಿರೂಪಿಸಿದರು. ಮೇಲ್ವಿಚಾರಕ ಆನಂದ್ ಸ್ವಾಗತಿಸಿದರು. ಮೇಲ್ವಿಚಾರಕಿ ಜ್ಯೋತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.