ಆಲೂರು: ದೀಪಾವಳಿ ಹಬ್ಬವನ್ನು ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಪ್ರತಿ ಗ್ರಾಮಗಳಲ್ಲಿ ಸ್ಥಳೀಯ ಧಾರ್ಮಿಕ ವಿಧಿವಿಧಾನದಂತೆ ಅಮಾವಾಸ್ಯೆಗೆ ಮೂರು ದಿನಗಳ ಮೊದಲಿಂದಲೂ, ಹುಣ್ಣಿಮೆವರೆಗೆ 15 ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ.
ವಿಶೇಷವಾಗಿ ಮಲೆನಾಡು ಭಾಗದಲ್ಲಿ ಹಬ್ಬದ ಸಡಗರ ವಿಭಿನ್ನ ರೀತಿಯಲ್ಲಿರುತ್ತದೆ. ಹಬ್ಬದ ಹಿಂದಿನ ರಾತ್ರಿ ಯುವಕರು ತಂಡೋಪತಂಡವಾಗಿ ಊರಿನ ದೇವಾಲಯ, ರಸ್ತೆಗಳಲ್ಲಿ, ಕುಂಬಾರರ ಮನೆಯಿಂದ ತಂದಿದ್ದ ಆವಿಗೆ ಬೂದಿಯಿಂದ, ಸೂರ್ಯ, ಚಂದ್ರಾಕೃತಿಗಳನ್ನು ಬರೆಯುತ್ತಾರೆ. ಆವಿಗೆ ಬೂದಿ ತುಳಿದರೆ ರೋಗ ದೂರವಾಗುತ್ತೆ ಎಂಬ ನಂಬಿಕೆ.
ಹಬ್ಬದ ಹಿಂದಿನ ರಾತ್ರಿ ಗ್ರಾಮದಲ್ಲಿ ಎಲ್ಲರೂ ನಿದ್ರೆಗೆ ಜಾರಿದ ನಂತರ, ಯುವಕರು ತಮ್ಮ ಗ್ರಾಮದ ನಿವಾಸಿಗಳ ಹಿತ್ತಲಲ್ಲಿ ಬೆಳೆದಿದ್ದ ಸೋರೆಕಾಯಿಯನ್ನು ಕದ್ದು ಅಲ್ಲಲ್ಲಿ ಮುಚ್ಚಿಡುತ್ತಾರೆ.
ಬೆಳಗಾದ ನಂತರ ರೈತರು ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಕುಂಬಾರರ ಮನೆಯಿಂದ ತಂದಿದ್ದ ಆವಿಗೆ ಬೂದಿಯನ್ನು ತಮ್ಮ ಎಲ್ಲ ಜಮೀನುಗಳಿಗೆ ಹಾಕುತ್ತಾರೆ. ಪೈಸೆ ಮರದ ಕಡ್ಡಿ ನೆಟ್ಟು ಲೆಕ್ಯೋ-ಲೆಕ್ಯೋ ಎಂದು ಕೂಗುತ್ತಾರೆ. ಅಲ್ಲಿಂದ ವಾಪಸ್ ಬರುವ ವೇಳೆ ಅಲ್ಲಲ್ಲಿ ಸಿಗುವ ಎಲ್ಲ ಜಾತಿ ಸೊಪ್ಪು, ಕಡ್ಡಿಗಳು, ಚೇಜಿಗೆಯೊಂದಿಗೆ ಕಂತೆ ಮಾಡಿ, ಒಂದು ಉದ್ದ ಕೋಲುಗಣೆಗೆ ಕದ್ದಿದ್ದ ಸೊರೆಕಾಯಿಯನ್ನು ಸೇರಿಸಿ ಕಟ್ಟಿಕೊಂಡು ಊರ ಬಾಗಿಲು ಬಳಿ ಎಲ್ಲರು ಒಟ್ಟಾಗಿ ಸೇರುತ್ತಾರೆ.
ಅಷ್ಟರಲ್ಲಿ ಗ್ರಾಮದ ಮಹಿಳೆಯರು ವಿಶೇಷ ಉಡುಪು ಧರಿಸಿ, ಕೆರೆಯಲ್ಲಿ ಗಂಗೆ ಪೂಜಿಸಿದ ಕಳಸ ಹೊತ್ತು ವಾದ್ಯಗೋಷ್ಠಿಯೊಂದಿಗೆ ಬಂದು, ಊರ ಬಾಗಿಲಿಗೆ ಪೂಜೆ ಸಲ್ಲಿಸುತ್ತಾರೆ. ಆಗ ಸ್ಥಳದಲ್ಲಿ ಹಾಜರಿದ್ದ ಪರವಾನಗಿ ಹೊಂದಿದ್ದ ಬಂದೂಕಿನಿಂದ ಗುಂಡು ಹಾರಿಸಿ ಸೋರೆಕಾಯಿಯನ್ನು ಪುಡಿ ಮಾಡಲಾಗುತ್ತದೆ. ಬಂದೂಕಿನಿಂದ ಸೋರೆಕಾಯಿ ಪುಡಿ ಮಾಡಿದರೆ ಊರ ಬಾಗಿಲಿಗೆ ಬಲಿ ಅರ್ಪಿಸಿದಂತೆ ಎಂಬುದು ವಾಡಿಕೆ.
ನಂತರ ಎಲ್ಲರೂ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮನೆಗೆ ಹೋಗಿ, ಮನೆಯಲ್ಲಿ ತಿಪ್ಪಮ್ಮನಿಗೆ ಪೂಜೆ ಸಲ್ಲಿಸಿ ಹಬ್ಬದ ವಿಶೇಷ ದೋಸೆ, ಸೋರೆಕಾಯಿ ಪಲ್ಯೆ, ಹೋಳಿಗೆ ಊಟ ಸವಿಯುತ್ತಾರೆ.
ನಂತರ ದನಕರುಗಳನ್ನು ಕೆರೆಯಲ್ಲಿ ಈಜಿಸಿ, ಮೈಗೆ ಅಕ್ಕಿಹಿಟ್ಟಿನ ಊಳಿಗೆ ಬರೆದು, ಹಾಲು ತುಪ್ಪವನ್ನು ಎರಚಿ, ಕೊರಳಿಗೆ ಬೂದುಗುಂಬಳವನ್ನು ಕಟ್ಟುತ್ತಾರೆ. ಸಂಜೆ ವೇಳೆಗೆ ಮನೆ ಬಾಗಿಲ ಇಕ್ಕೆಲಗಳಲ್ಲಿ ಪೂಜಿಸಿದ್ದ ಕೆರಕಗಳೂ ಮತ್ತು ತಿಪ್ಪಮ್ಮ ದೇವಿಯ ತಿಪ್ಪೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ.
ಜಮೀನಿಗೆ ಹೋಗಿ ಬರುವ ವೇಳೆ ಸಂಗ್ರಹಿಸಿಕೊಂಡು ಬಂದಿದ್ದ ಸೊಪ್ಪಿನ ಕಂತೆಯನ್ನು ಮನೆಯಲ್ಲಿ ಜೋಪಾನದಿಂದ ಶೇಖರಿಸಿಡುತ್ತಾರೆ. ಜಾನುವಾರುಗಳಿಗೆ ರೋಗ ತಗುಲಿದ ಸಂದರ್ಭದಲ್ಲಿ, ಈ ಸೊಪ್ಪನ್ನು ಪುಡಿ ಮಾಡಿ ಕಷಾಯ ಮಾಡಿ ಕುಡಿಸುವುದು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ.
ಒಟ್ಟಾರೆ ಈ ಹಬ್ಬವನ್ನು ಅಮಾವಾಸ್ಯೆಯಿಂದ ಹುಣ್ಣಿಮೆ ವರೆಗೂ ಒಂದೊಂದು ಗ್ರಾಮದಲ್ಲಿ ಒಂದೊಂದು ದಿನ ಆಚರಿಸಲಾಗುತ್ತದೆ. ಆದ್ದರಿಂದ ದಿಕ್ಕಿಲ್ಲದ ದೀಪಾವಳಿ ಹಬ್ಬ ಎನ್ನಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ತಿಪ್ಪಮ್ಮ ದೇವಿಯನ್ನು, ಗೋವಿನ ಸಗಣಿ, ಚೆಂಡು ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.