ADVERTISEMENT

ಹೊಳೆನರಸೀಪುರ: ಬೀದಿನಾಯಿ ಕಚ್ಚಿ ಯುವಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:21 IST
Last Updated 23 ಜುಲೈ 2024, 14:21 IST
<div class="paragraphs"><p>ಹೊಳೆನರಸೀಪುರದ ಬಡಾವಣೆಯೊಂದರಲ್ಲಿ ಕಂಡುಬಂದ ಬೀದಿನಾಯಿಗಳ ಹಿಂಡು</p></div>

ಹೊಳೆನರಸೀಪುರದ ಬಡಾವಣೆಯೊಂದರಲ್ಲಿ ಕಂಡುಬಂದ ಬೀದಿನಾಯಿಗಳ ಹಿಂಡು

   

ಹೊಳೆನರಸೀಪುರ: ತಾಲ್ಲೂಕಿನ ಸೂರನಹಳ್ಳಿಯಲ್ಲಿ ಸೋಮವಾರ ರಾತ್ರಿ ಬಾಲರಾಜ್ ಎಂಬುವರಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ.

‘ನಾಲ್ಕೈದು ನಾಯಿಗಳು ನನ್ನ ಮೇಲೆ ದಾಳಿ ನಡೆಸಿದ್ದು, ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೈ, ಕಾಲು ಸೇರಿದಂತೆ ವಿವಿಧೆಡೆ ಕಚ್ಚಿವೆ. ಇದೇ ವೇಳೆ ಕುರಿಯೊಂದು ಓಡಿಹೋಗುವುದನ್ನು ಕಂಡು ಅದರ ಮೇಲೆ ನಾಯಿಗಳು ಎರಗಿದವು. ಹೀಗಾಗಿ, ನಾನು ಅಪಾಯದಿಂದ ಪಾರಾದೆ. ಕುರಿಯನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿವೆ’ ಎಂದು ಬಾಲರಾಜ್‌ ತಿಳಿಸಿದರು.

ADVERTISEMENT

‘ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಔಷಧ ಇಲ್ಲವೆಂದು ಹಾಸನಕ್ಕೆ ಕಳುಹಿಸಿದರು. ನಾಯಿ ಕಡಿತ ಸೇರಿದಂತೆ ಎಲ್ಲದಕ್ಕೂ ಇಲ್ಲಿಯೇ ಚಿಕಿತ್ಸೆ ನೀಡಬೇಕೆಂದು ಆರೋಗ್ಯ ಇಲಾಖೆಯ ಜಾಗೃತ ದಳದ ಮುಖ್ಯ ತನಿಖಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಸೂಚಿಸಿದ್ದರು. ಆದರೂ, ವೈದ್ಯರು ಬೇರೆ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ’ ಎಂದು ದೂರಿದರು.

ಹೊಳೆನರಸೀಪುರದ ಮುಖ್ಯರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಾಸನ– ಮೈಸೂರು ರಸ್ತೆ, ಗಾಂಧಿನಗರ, ಅಂಬೇಡ್ಕರ್ ನಗರ, ನರಸಿಂಹನಾಯಕ ನಗರ, ಹೌಸಿಂಗ್ ಬೋರ್ಡ್ ಕಾಲೊನಿ ಸೇರಿದಂತೆ ವಿವಿಧೆಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

‘ಪಟ್ಟಣದಲ್ಲಿ ಬೀದಿನಾಯಿಗಳನ್ನು ಹಿಡಿದು ಸಾಗಿಸಲು ಟೆಂಡರ್ ಕರೆದಿದ್ದು, ಕೆಲವರು ಭಾಗವಹಿಸಿದ್ದಾರೆ. ಬುಧವಾರ ನಾಯಿಗಳನ್ನು ಹಿಡಿಯಲು ಅನುಮತಿ ನೀಡುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.